

ಮಾತುಗಳಲ್ಲೆಲ್ಲ ಆತನು ಪರ್ವತದ ಮೇಲಿಂದ ಮಾಡಿದ ಪ್ರಸಂಗ
ಬಹಳ ಮಹತ್ವವನ್ನು ಪಡೆದುಕೊಂಡಿದೆ. ಅದು ಹೀಗಿದೆ:
ದೀನದಲಿತರೇ, ನೀವು ಭಾಗ್ಯವಂತರು!
ದೇವರ ಸಾಮ್ರಾಜ್ಯ ನಿಮ್ಮದು.
ಈಗ ಹಸಿದಿರುವವರೇ, ನೀವು
ಭಾಗ್ಯವಂತರು! ನಿಮಗೆ ಸಂತೃಪ್ತಿಯಾಗುವುದು.
ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯವಂತರು!
ನೀವು ನಕ್ಕುನಲಿದಾಡುವಿರಿ!
ಈ ಬೋಧನೆಗಳು ಜಗತ್ತಿನ ಅನೇಕ ಬುಧ್ಧೀಜಿವಿಗಳನ್ನು, ವಿದ್ವಾಂಸರನ್ನು, ಕಲಾವಿದರನ್ನು ಹಾಗೂ ಜನನಾಯಕರನ್ನು ಬಹುವಾಗಿ ಆಕಷಿರ್ಸಿವೆ. ಅವರಲ್ಲನೇಕರು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅಂತಹ ಒಂದು ವ್ಯಾಖ್ಯಾನ ನಮ್ಮ ಸಂದರ್ಭಕ್ಕೆ ಬಹಳಷ್ಟು ಅನ್ವಯಿಸುತ್ತದೆ. ಇದೊಂದು ಅನುಪಮ ಬೋಧನೆಗಳ ಸರಮಾಲೆ. ಈ ಭಾಗವನ್ನೆಲ್ಲಾ ಬಹು ತಾಳ್ಮೆಯಿಂದ ಶೋಧಿಸಿದರೆ ಭೂತ ಕಾಲದ ಗರ್ಭದಿಂದ ಅತ್ಯುತ್ತಮವಾದುದನ್ನು ತೆಗೆದು ಅದಕ್ಕೆ ಕೊಟ್ಟಿರುವ ಹೊಸ ಪ್ರಜ್ಞೆಯನ್ನು ಅಧ್ಯಯನ ಮಾಡುವುದೇ ಬಹು ಸುಂದರ. ಭೂತ ಮತ್ತು ವರ್ತಮಾನಗಳ ನಡುವಿನ ಸಂಬಂಧದ ಸಂಕೀರ್ಣ ಮಜಲುಗಳು ಅನಾವರಣಗೊಳ್ಳುತ್ತ ಭವಿಷ್ಯತ್ತಿನ ನಿರೀಕ್ಷೆಗಳ ಮೇಲೆ ಬೆಳಕು ಚೆಲ್ಲಿರುವ ಕ್ರಿಸ್ತನ ಈ ಬೋಧನೆ ಸೀಮಾತೀತ. ಮೂಲದಲ್ಲಿ ಈ ಭಾಗ ಅರಾಮೈಕ್ ಭಾಷೆಯ ಸೌಂದರ್ಯದಲ್ಲಿ ಬಂದ ರೀತಿಯ ಬಗ್ಗೆ ಅನೇಕ ವಿದ್ವಾಂಸರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸತ್ಯವೇದದ ನೂರಾರು ಭಾಷಾಂತರಕಾರರು ಇದರ ಸೌಂದರ್ಯಕ್ಕೆ ಚ್ಯುತಿಬಾರದ ಹಾಗೆ ನೋಡಿಕೊಂಡಿದ್ದಾರೆ.
ಈ ಭಾಗದ ಒಂದೊಂದು ಮಾತು, ಒಂದೊಂದು ವಾಕ್ಯ ಮಹಾಕೃತಿಗಳು ಹೊರಚೆಲ್ಲುವ ದಟ್ಟ ಹೊಳಹುಗಳಂತೆಯೂ ಇವೆ. ವಾಕ್ಯಗಳ ಆಕೃತಿಯಲ್ಲಿ ಸ್ಮೂ ನೇಯ್ಗೆ, ಬಿಗುವಾದ ಬಂಧ, ಭಾಷೆಯ ಬಳಕೆ ಮತ್ತು ನವೀನವಾದ ರೂಪಕಗಳ ಸಹಜ ಹೆಣಿಗೆಯಿಂದಾಗಿ ಈ ಪರ್ವತ ಬೋಧನೆ ಬಹು ಶ್ರೀಮಂತವಾಗಿದೆ.