ಅಂತರಂಗ- ಮೊಹರಂ ಹಬ್ಬವಲ್ಲ: ಪ್ರೊ. ಜಿ. ಅಬ್ದುಲ್​ ಬಷೀರ್​

moharam
Published on
ಭಾಗ-1

ಯಥಾಪ್ರಕಾರ ಮುಸ್ಲಿಮರಲ್ಲಿಯೂ ಹನ್ನೆರಡು ತಿಂಗಳುಗಳಿವೆ. ಅವುಗಳಲ್ಲಿ ಪ್ರಥಮ ತಿಂಗಳ ಹೆಸರೇ ಮೊಹರಂ. ಅರಬ್ಬಿ ಭಾಷೆಯಲ್ಲಿ ಮೊಹರಂ ಎಂಬ ಶಬ್ದಕ್ಕೆ "ಪವಿತ್ರ' ಎಂಬ ಅರ್ಥವಿದೆ. "ಹಬ್ಬ' ಎಂದರೆ ಸಂತೋಷ. ಆದರೆ, ಮೊಹರಂ ಹಬ್ಬವಲ್ಲ, ಸಂತೋಷದ ಸಂದರ್ಭವಲ್ಲ. ಶತಮಾನಗಳ ಹಿಂದೆ ಟಿಸಿಹೋದ ಮಹಾದುರಂತವನ್ನು ಸ್ಮರಿಸಿಕೊಂಡು ದುಃಖಿಸಬೇಕಾದ ದಿನವದು.

ಮುಸ್ಲಿಂ ವರ್ಷದ ಮೊದಲನೆಯ ಮಾಸವಾದ ಮೊಹರಮ್ಮಿನ ಹತ್ತನೆಯ ದಿನ, ಕರ್ಬಲಾ ಎಂಬಲ್ಲಿ, ಇಮಾಂ ಹುಸೇನ್​ ಎಂಬ ಧರ್ಮಾತ್ಮರು ತಮ್ಮ ಶತ್ರುಗಳಿಂದ ಕೊಲೆಗೀಡಾದರು. ಇದು ಅನ್ಯಾಯದ ಕೊಲೆ! ಈ ಕಾರಣದಿಂದ ಮೊಹರಂ ತಿಂಗಳು ಮುಸಲ್ಮಾನರಿಗೆ ಗೋಳಿನ ಕಥೆ!

ಇಮಾಂ ಹುಸೇನರು ಮುಹಮ್ಮದ್​ ಪೈಗಂಬರ್​ (ಸ) ಅವರ ಪುತ್ರಿಯಾದ ಫಾತಿಮಾ ಹಾಗೂ ನಾಲ್ಕನೆಯ ಖಲೀರಾದ ಹಜರತ್​ ಅಲಿಯವರ ಪುತ್ರರು. ತಂದೆ-ತಾಯಿ ಹಾಗೂ ಅಜ್ಜಂದಿರಾದ ಮುಹಮ್ಮದ್​ ಪೈಗಂಬರರಿಗೂ(ಸ) ಹುಸೇನರೆಂದರೆ ವಿಶೇಷ ಪ್ರೀತಿ. ತಂದೆಯಾದ ಅಲಿ, ಷೇರ್​-ಎ-ಖುದಾ ಎಂದೇ ಖ್ಯಾತನಾಮರಾದವರು, ತಾಯಿಯ ತಂದೆಯಾದ ಹಜರತ್​ ಮುಹಮ್ಮದ್​, ರಸೂಲ್​-ಎ- ಕರೀಂ (ದೈವಕಳುಹಿಸಿದ ದೂತ)ಎಂದು ಖ್ಯಾತನಾಮರಾದವರು. ಇಂತಹ ತಂದೆ-ತಾತಂದಿರನ್ನು ಪಡೆದ ಹುಸೇನರು, ದೇವರಿಗೂ ಧರ್ಮಕ್ಕೂ ದ್ರೋಹವನ್ನು ಬಗೆದ ಯುಜೀದ್​ ಎಂಬ ಮನುಷ್ಯನ ಎದುರು ಎದ್ದುನಿಂತು ಹೋರಾಡುವುದು ಅನಿವಾರ್ಯವಾಯಿತು.

ಹಜರತ್​ ಹುಸೇನರು ಜನಿಸಿದ್ದು ಕ್ರಿ. ಶ. 626ರಲ್ಲಿ, ಕ್ರಿ. ಶ. 683ರಲ್ಲಿ ಕರ್ಬಲಾ ಎಂಬ ಸ್ಥಳದಲ್ಲಿ ಕೊಲೆಯಾದರು! ಭಯಂಕರ ಯುದ್ಧ ನಡೆಯುತ್ತಿದ್ದಾಗ ಆ ಮಹಾತ್ಮರಿಗೆ ಅನ್ನ ಆಹಾರ ನೀರು ಲಭಿಸದಂತೆ ಶತ್ರುಗಳು ತೊಂದರೆ ಕೊಟ್ಟರು, ಯೂಪ್ರಟಿಸ್​ ನದಿ ಪಕ್ಕದಲ್ಲಿ ಹರಿಯುತ್ತಿದ್ದರೂ ಒಂದು ಗುಟುಕು ನೀರು ಕುಡಿಯಲೂ ಅನುಕೂಲ ಕಲ್ಪಿಸಿಕೊಡಲಿಲ್ಲ! ಸಹಚರರನ್ನು ಕೊಂದರು! ಸ್ನೇಹಿತರು. ಹೆಂಡತಿ ಮಕ್ಕಳು ಅನಾಥರಾದರು! ತಮ್ಮ ಪತ್ನಿ ಪುತ್ರರು ತಮ್ಮ ಕಣ್ಣೆದುರೇ ಸೆರೆಯಾಳುಗಳಾದರೂ ಧರ್ಮಾತ್ಮರಾದ ಹುಸೇನರು ತಮ್ಮ ಪ್ರಾಮಾಣಿಕತೆಯನ್ನು ಬಿಡಲಿಲ್ಲ. ಇದು ಮೋಹರಂ ಹಿನ್ನೆಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net