ಅಂತರಂಗ; ನೊಣ ಹಾಗೂ ಜೇನುನೊಣ

Antaranga vvani
Published on
ಕಲಿಕೆ ನಿರಂತರವಾಗಿರಬೇಕು. ಆಗ ಜೀವನ ಉತ್ತಮವಾಗುತ್ತದೆ. ನಾವು ಕಣ್ಣನ್ನು ತೆರೆದರೆ ಪ್ರಕೃತಿಯಿಂದ ಅನೇಕ ಪಾಠಗಳನ್ನು ಕಲಿಯಬಹುದು. ಇದಕ್ಕೆ ಉತ್ತಮ ನಿದರ್ಶನವೆಂಬಂತೆ ಅವಧೂತರು ಪ್ರಕೃತಿಯಿಂದ ಅನೇಕ ಪಾಠಗಳನ್ನು ಕಲಿತಿದ್ದರು. ನೊಣ-ಜೇನುನೊಣಗಳಿಂದಲೂ ನಾವು ಜೀವನದ ಪಾಠವನ್ನು ಕಲಿಯಬಹುದು ಎಂದರೆ ಆಶ್ಚರ್ಯವಾಗಬಹುದಲ್ಲವೇ? ಆದರೆ ನಾವು ಇವುಗಳಿಂದಲೂ ಜೀವನದ ಪಾಠವನ್ನು ಕಲಿಯಬಹುದು.

ನೊಣವು ಹೂವಿನ ಮೇಲೆ, ಸಿಹಿತಿಂಡಿಗಳ ಮೇಲೆ ಕುಳಿತುಕೊಳ್ಳುವುದರ ಜೊತೆಗೆ ಚರಂಡಿಯ ನೀರಿನಲ್ಲಿ, ಕೊಳಚೆ ಪ್ರದೇಶಗಳಲ್ಲಿ, ವಾಂತಿ-ಭೇದಿಗಳ ಮೇಲೂ ಕುಳಿತಿರುವುದನ್ನು ಗಮನಿಸಿರುತ್ತೇವೆ. ಅದಕ್ಕೆ ಒಳ್ಳೆಯ ಸುಗಂಧಭರಿತ ವಸ್ತು ಎಂದಾಗಲೀ ಅಥವಾ ಕಲ್ಮಶ ವಸ್ತು ಎಂದಾಗಲೀ ಇಲ್ಲ. ನೊಣಗಳಿಂದಲೇ ಅನೇಕ ಬಾರಿ ಸಾಂಕ್ರಾಮಿಕ ರೋಗಗಳು ಹರಡುವುದು ಸರಿಯಷ್ಟೆ.

ಜೇನುನೊಣಗಳು ಹೂವಿನ ಮೇಲೆ ಮಾತ್ರ ಕುಳಿತು ಮಕರಂದವನ್ನು ಹೀರುತ್ತವೆ. ಸಿಹಿಯಾದ ಜೇನುತುಪ್ಪವನ್ನು ನಮಗೆ ನೀಡುತ್ತವೆ. ಜೇನುನೊಣಗಳು ಕೊಳಕು ಪ್ರದೇಶಗಳಲ್ಲಿ, ಕೊಳಚೆಯ ಮೇಲೆ ಕುಳಿತುಕೊಳ್ಳುವುದಿಲ್ಲ. ಇದು ನೈಸರ್ಗಿಕ ಸತ್ಯ.

ನಾವು ಜೇನುನೊಣದಂತಿರಬೇಕೇ ವಿನಾ ನೊಣದಂತಿರಬಾರದು. ಬಹುತೇಕರ ಮನಸ್ಸು ನೊಣದಂತಿರುತ್ತದೆ. ಅಂದರೆ ಮನಸ್ಸು ಕೆಲವೊಮ್ಮೆ ಉತ್ತಮ, ಉದಾತ್ತ ವಿಷಯಗಳ ಕುರಿತು ಚಿಂತಿಸುತ್ತದೆ. ಕೆಲವೊಮ್ಮೆ ಪ್ರಾಪಂಚಿಕ ವಿಷಯಗಳ ಕುರಿತು ಆಲೋಚಿಸುತ್ತದೆ. ಮತ್ತೆ ಕೆಲವು ಸಲ ದುಷ್ಟಚಿಂತನೆಗಳನ್ನು, ಕೆಳಮಟ್ಟದ ಆಲೋಚನೆಗಳನ್ನು ಮಾಡುತ್ತಿರುತ್ತದೆ. ಸಾಧನೆಯಿಂದ, ಅಭ್ಯಾಸಬಲದಿಂದ ನಾವು ಸದಾ ಉತ್ತಮ, ಒಳ್ಳೆಯ ಆಲೋಚನೆಗಳನ್ನೇ ಮಾಡಬೇಕು. ಜೇನುನೊಣವು ಕೇವಲ ಹೂವಿನ ಮೇಲೆ ಕುಳಿತುಕೊಳ್ಳುವಂತೆ ನಾವು ಸದಾ ಒಳ್ಳೆಯ ವಿಷಯಗಳ ಕುರಿತು ಆಲೋಚನೆಯನ್ನು ಮಾಡಬೇಕು.

ಒಳ್ಳೆಯ ಆಲೋಚನೆಗಳಿಂದ ಒಳ್ಳೆಯ ಸಂಸ್ಕಾರ. ಒಳ್ಳೆಯ ಸಂಸ್ಕಾರದಿಂದ ಒಳ್ಳೆಯ ಕೆಲಸ ಮಾಡಲು ಪ್ರೇರಣೆ ದೊರೆಯುತ್ತದೆ. ಒಳ್ಳೆಯ ಕೆಲಸಗಳ ಪ್ರಭಾವದಿಂದ ಶುದ್ಧಚಾರಿತ್ರ್ಯ ಉಂಟಾಗುತ್ತದೆ. ನಾವು ಸದಾಚಾರ ಸಂಪನ್ನರಾಗುತ್ತೇವೆ. ನಿಜವಾದ ಅರ್ಥದಲ್ಲಿ ಮಾನವರಾಗಲು ನಾವು ಜೇನುನೊಣದಂತಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net