ಅಂತಃಕರಣ ಇರುವವರು ಯಾರೂ ಕ್ಷಮಿಸಲು ಸಾಧ್ಯವಿಲ್ಲ; ಬೊಮ್ಮಾಯಿ

mng- sep 14- Basavaraja Bommayi
Published on

ಬೆಂಗಳೂರು: ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೋಯ್ದ ದುರುಳರ ಕೃತ್ಯ ಅತ್ಯಂತ ಅಮಾನವೀಯವಾಗಿದ್ದು, ಈ ಹೀನ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗೋಮಾತೆಯನ್ನು ತಾಯಿಯಂತೆ ಪೂಜಿಸುವ ನಮಗೆಲ್ಲ ಈ ಕೃತ್ಯ ಅತ್ಯಂತ ಘಾಸಿಯುಂಟು ಮಾಡಿದೆ. ಸುಗ್ಗಿಯ ಹಬ್ಬ ಮಕರ ಸಂಕ್ರಾತಿಯ ಸಂದರ್ಭದಲ್ಲಿ ರಾಜ್ಯದ ರಾಜ್ಯಧಾನಿಯಲ್ಲಿಯೇ ಇಂತಹ ಅಮಾನವೀಯ ಕೆಲಸ ಮಾಡಿರುವ ಪುಂಡರಿಗೆ ಈ ಸರ್ಕಾರದಲ್ಲಿ ಯಾವುದೇ ಭಯ ಇಲ್ಲದಂತೆ ಕಾಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಗೋವುಗಳಿಗೆ ಸರಿಯಾದ ರಕ್ಷಣೆ ನೀಡದಿರುವುದು, ಗೋಶಾಲೆಗಳಿಗೆ ಸರಿಯಾದ ಅನುದಾನ ನೀಡದೇ ನಿರ್ಲಕ್ಣ್ಯ ಮಾಡಿರುವುದರ ಪರಿಣಾಮ, ಇಂತಹ ಹೃದಯ ಹೀನ ಕೃತ್ಯಗಳು ನಡೆಯಲು ಪ್ರೇರಣೆ ನೀಡಿದಂತಾಗಿದೆ ಎಂದಿದ್ದಾರೆ.

ಮೂಕ ಪ್ರಾಣಿಗಳ ಮೇಲೆ ಮಾಡಿರುವ ಇಂತಹ ಕೃತ್ಯವನ್ನು ಅಂತಃಕರಣ ಇರುವವರು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಈ ಸರ್ಕಾರಕ್ಕೆ ಗೋಮಾತೆಯ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ಇಂತಹ ಹೇಯ ಕೃತ್ಯ ಮಾಡಿರುವ ಪುಂಡರನ್ನು ಪತ್ತೆ ಹಚ್ಚಿ ತಕ್ಷಣ ಬಂಧಿಸಿ, ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಗಾಯಗೊಂಡಿರುವ ಹಸುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net