ಶಿಕ್ಷಣ ಕ್ಷೇತ್ರದಲ್ಲಿ ಆಗಲಿದೆ ಮಹತ್ವದ ಬದಲಾವಣೆ: AI ಟೆಕ್ನಾಲಜಿಯಿಂದ ಉತ್ತರ ಪತ್ರಿಕೆ ಮೌಲ್ಯಮಾಪನ!

AI Answer Sheet Evaluation
Published on

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗೆ ಕಷ್ಟಪಟ್ಟು ಓದುವವರ ಸಂಖ್ಯೆ ತೀರಾ ವಿರಳ ಎಂದು ಹೇಳಬಹುದು. ಪರೀಕ್ಷೆಯಲ್ಲಿ ಮನಸ್ಸಿಗೆ ಬಂದಂತೆ ಏನೋ ಗೀಚಿದರೆ ಅಂಕಗಳು ಬರುತ್ತವೆ ಎಂದು ಹಲವು ವಿದ್ಯಾರ್ಥಿಗಳು ಭಾವಿಸಿದ್ದಾರೆ. ಹೀಗಾಗಿ ಕೆಲವರು ಪೇಜ್​ ತುಂಬಿಸಿ ಹೋಗುತ್ತಾರೆ. ಅಲ್ಲದೆ, ಅನೇಕ ಅಕ್ರಮಗಳನ್ನು ಸಹ ನಡೆಯುತ್ತವೆ. ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡವಾಗಲೂ ಕೆಲವೊಂದು ಎಡವಟ್ಟುಗಳಾಗುತ್ತವೆ. ಇದಕ್ಕೆಲ್ಲ ಕಡಿವಾಣ ಹಾಕಲು ತಮಿಳುನಾಡು ಸರ್ಕಾರ ಕೃತಕ ಬುದ್ಧಿಮತ್ತೆ (AI) ಬಳಸಿಕೊಳ್ಳಲು ಮುಂದಾಗಿದೆ.

ಹೌದು, ನೀವು ಕೇಳಿದ್ದು ನಿಜ. ಈಗಾಗಲೇ ತಮಿಳುನಾಡಿನಲ್ಲಿ ಈ ಪ್ರಯೋಗ ಆರಂಭವಾಗಿದೆ. ತಮಿಳುನಾಡು ಸರ್ಕಾರವು ಕೃತಕ ಬುದ್ಧಿಮತ್ತೆಯೊಂದಿಗೆ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡುವ ಪ್ರಯೋಗವನ್ನು ಕೈಗೆತ್ತಿಕೊಂಡಿದೆ. ಈ ಪ್ರಯೋಗಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಪ್ರಸಕ್ತ ಶೈಕ್ಷಣಿಕ ವರ್ಷದೊಳಗೆ ಈ ಬಗ್ಗೆ ಅಧಿಕಾರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ದೋಷಗಳನ್ನು ಪತ್ತೆಹಚ್ಚಿ ಸರಿಪಡಿಸಿದ ಬಳಿಕ ಈ ತಂತ್ರಜ್ಞಾನವನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಳವಡಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಈ ಪ್ರಯೋಗವನ್ನು ತಮಿಳುನಾಡು ರಾಜ್ಯ ಯೋಜನಾ ಆಯೋಗವು ಮೇಲ್ವಿಚಾರಣೆ ಮಾಡುತ್ತಿದೆ. ಈ ವ್ಯವಸ್ಥೆಯಲ್ಲಿ ಮೊದಲು ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಯನ್ನು ಕೃತಕ ಬುದ್ಧಿಮತ್ತೆಗೆ ಜೋಡಿಸಲಾಗುತ್ತದೆ. ಈ ಸಮಯದಲ್ಲಿ ಕೃತಕ ಬುದ್ಧಿಮತ್ತೆಯು ಉತ್ತರ ಪತ್ರಿಕೆಯನ್ನು ನೋಡಿ ತಪ್ಪು ಉತ್ತರವನ್ನು ಕಂಡುಹಿಡಿಯುತ್ತದೆ. ಇದಿಷ್ಟೇ ಅಲ್ಲದೆ, ಮತ್ತೆ ಮತ್ತೆ ಬರೆದದ್ದನ್ನು ಸಹ ಕಂಡುಹಿಡಿಯುತ್ತದೆ. ಬಳಿಕ ಸಂಬಂಧಪಟ್ಟ ಪರೀಕ್ಷಕರಿಗೆ ಈ ವಿಷಯವನ್ನು ತಿಳಿಸುತ್ತದೆ.

ಎಲ್ಲರೂ ಒಂದೇ ರೀತಿಯ ಉತ್ತರವನ್ನು ಬರೆಯುವುದಿಲ್ಲ. ಪ್ರತಿ ವಿದ್ಯಾರ್ಥಿಗೆ ವಿಭಿನ್ನ ರೀತಿಯ ಕೈಬರಹ ಇರುತ್ತದೆ. ಈ ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಕೃತಕ ಬುದ್ಧಿಮತ್ತೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ. ಪ್ರಸ್ತುತ ಪ್ರಯೋಗಗಳಲ್ಲಿ ಕೃತಕ ಬುದ್ಧಿಮತ್ತೆಗೆ ಈ ವಿಷಯದ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿಲ್ಲ. ಈ ಕೃತಕ ಬುದ್ಧಿಮತ್ತೆಯನ್ನು ಪ್ರಾಧ್ಯಾಪಕರಿಗೆ ಸಹಾಯ ಮಾಡಲು ಮಾತ್ರ ಬಳಸಲಾಗುತ್ತಿದೆ. ಇವುಗಳನ್ನು ಬಳಸುವುದರಿಂದ, ಉತ್ತರ ಪತ್ರಿಕೆಯಲ್ಲಿ ದೋಷಗಳನ್ನು ಗುರುತಿಸುವ ತ್ವರಿತ ಪ್ರಕ್ರಿಯೆಯು ಮತ್ತಷ್ಟು ಹೆಚ್ಚಾಗುತ್ತದೆ.

ತಮಿಳುನಾಡು ರಾಜ್ಯ ಯೋಜನಾ ಆಯೋಗ, ಭವಿಷ್ಯದಲ್ಲಿ ಈ ಕೃತಕ ಬುದ್ಧಿಮತ್ತೆ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ ಮತ್ತು ಪರೀಕ್ಷಾ ಪತ್ರಿಕೆಯ ಮೌಲ್ಯಮಾಪನದಲ್ಲಿ ಪ್ರಮುಖ ಸಾಧನವಾಗಿ ಬಳಸಲು ಇದನ್ನು ಅಭಿವೃದ್ಧಿಪಡಿಸಲಾಗುತ್ತೆ ಎಂದು ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net