ಅಂತರಂಗ: ತಂತ್ರಶಾಸ್ತ್ರ ದರ್ಶನ

Antaranga vvani
Published on

ಮಂತ್ರ: ಪ್ರತಿಯೊಂದು ಮಂತ್ರವೂ ಆದಿಶಬ್ದ (ಪದ) ಅಥವಾ ‘ಶಬ್ದಬ್ರಹ್ಮ’ದ ಒಂದು ರೂಪವಾಗಿದೆ; ಹಾಗೂ ಅದರ ಅರ್ಥವಾಗಿ ಒಬ್ಬ ದೇವತೆಯನ್ನೋ ಅಥವಾ ದೇವಿಯನ್ನೋ ಪ್ರತಿನಿಧಿಸುತ್ತದೆ ಎಂದು ಭಾವಿಸುವುದೂ ತರ್ಕಬದ್ಧವಾಗಿದೆ. ಈ ದೇವಿ ದೇವತೆಗಳಾದರೂ ಯಾರು? ಆ ಬ್ರಹ್ಮದ ವ್ಯಕ್ತರೂಪ ಅಥವಾ ಅದರಿಂದ ಹೊರಹೊಮ್ಮಿದವರು ತಾನೇ? ಬೇರೊಂದು ಬಗೆಯಲ್ಲಿ ಹೇಳುವುದಾದರೆ, ಒಂದು ದೇವಿಯ / ದೇವತೆಯ ಮಂತ್ರದಲ್ಲಿ,

ಆ ಮಂತ್ರವು ತನ್ನೊಳಗೆ ಆ ದೇವಿಯ / ದೇವತೆಯ ರೂಪ ಹಾಗೂ ಶಕ್ತಿಯನ್ನು ಒಳಗೊಂಡಿದೆಯೆಂದೇ ಅರ್ಥ. ಸೂಕ್ತ ರೀತಿಯಲ್ಲಿ ಮಂತ್ರವನ್ನು ಜಪಿಸುವುದರಿಂದ ಕಾಲಕ್ರಮದಲ್ಲಿ ಈ ಮಂತ್ರದೇವತೆಯು ದರ್ಶನ ನೀಡುತ್ತದೆ.

ತಂತ್ರಗಳು, ಮಂತ್ರಗಳನ್ನು ಸೌರ (ಸೂರ್ಯ) ಮತ್ತು ಸೌಮ್ಯ (ಚಂದ್ರ) ಮಂತ್ರಗಳೆಂದು ವಿಭಾಗಿಸಿವೆ. ಮಂತ್ರಗಳು ಪುರುಷ, ಸ್ತ್ರೀ, ಹಾಗೂ ತಟಸ್ಥ ಮಂತ್ರಗಳಾಗಿರಬಹುದು. ಪುರುಷ ಹಾಗೂ ತಟಸ್ಥಮಂತ್ರಗಳನ್ನು ‘ಮಂತ್ರ’ವೆಂದೂ, ಸ್ತ್ರೀಮಂತ್ರಗಳನ್ನು ‘ವಿದ್ಯಾ’ ಎಂದೂ ಕರೆಯುತ್ತಾರೆ.

‘ಹುಂ’, ‘ವಷಟ್’, ‘ಫಟ್’ ಎಂದು ಅಂತ್ಯಗೊಳ್ಳುವ ಮಂತ್ರಗಳನ್ನು ಪುರುಷಮಂತ್ರಗಳೆಂದೂ, ‘ಸ್ವಾಹಾ’, ‘ವೌಷಟ್’ ಎಂದು ಅಂತ್ಯವಾಗುವ ಮಂತ್ರಗಳನ್ನು ‘ಸ್ತ್ರೀ’ಮಂತ್ರಗಳೆಂದೂ, ‘ನಮಃ’ ಎಂದು ಅಂತ್ಯವಾಗುವ ಮಂತ್ರಗಳನ್ನು ತಟಸ್ಥಮಂತ್ರಗಳೆಂದೂ ಕರೆಯುತ್ತಾರೆ. ತಂತ್ರಗಳು ಕೆಲವು ಏಕಾಕ್ಷರ ಮಂತ್ರಗಳನ್ನು (ಹ್ರೀಂ, ಕ್ಲೀಂ) ಬೀಜಮಂತ್ರ ಅಥವಾ ಬೀಜಾಕ್ಷರ ಎಂದು ಕರೆದಿವೆ. ಒಂದು ಬೀಜವು ಯಾವ ರೀತಿಯಲ್ಲಿ ಮೊಳಕೆಯೊಡೆದು, ಸಸಿಯಾಗಿ, ಕ್ರಮೇಣ ದೊಡ್ಡ ಮರವಾಗಿ ಸಾಕಷ್ಟು ಫಲಗಳನ್ನು ನೀಡುವುದೋ, ಅದೇ ರೀತಿ ಬೀಜಮಂತ್ರವೂ, ಕ್ರಮವರಿತು ಶ್ರದ್ಧಾಭಕ್ತಿಗಳಿಂದ ಜಪಿಸಿದರೆ, ಅದಕ್ಕೆ ಇರುವ ಸಿದ್ಧಿಯನ್ನು ಅಂದರೆ ಮಂತ್ರದೇವತೆಯ ದರ್ಶನವನ್ನು ನೀಡಬಲ್ಲುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net