ಕಲ್ಲು ಗಣಿಗೆ ಮತ್ತೊಂದು ಬಲಿ

kallu gani
ಮಾಕಾರಹಳ್ಳಿ ಸಮೀಪದ ಕ್ವಾರಿ.
Published on

ಕೋಲಾರ/ಟೇಕಲ್

ಟೇಕಲ್ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ಕಲ್ಲು ಗಣಿಯ ಕೆಲಸ ಮಾಡುತ್ತಿದ್ದ ವೇಳೆ ಬೃಹತ್ ಕಲ್ಲು ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟ ಪ್ರಕರಣ ಮಾಸುವ ಮುನ್ನವೇ ಕಲ್ಲುಗಣಿಯಲ್ಲಿ ಸೋಮವಾರ ಅಂಥದ್ದೇ ಅವಘಡ ಸಂಭವಿಸಿ ಮತ್ತೊಬ್ಬ ಕಾರ್ಮಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಆಂಧ್ರಪ್ರದೇಶದ ಪುಂಗನೂರು ವೆಂಕಟೇಶ್ (60) ಮೃತ. ಮಧ್ಯಪ್ರದೇಶದ ಈಶ್ವರ್, ತಮಿಳುನಾಡಿನ ಹರೀಶ್ ಗಾಯಗೊಂಡಿದ್ದು, ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಸಮೀಪ ನಾರಾಯಣಸ್ವಾಮಿ ಅವರ ಕ್ವಾರಿಯಿಂದ ಕ್ಷೇತ್ರನಹಳ್ಳಿಯ ಕ್ರಷರ್‌ಗೆ ಕಲ್ಲು ಸಾಗಿಸಲು ಕಾರ್ಮಿಕರು ಮುಂದಾಗಿದ್ದರು. ಈ ವೇಳೆ ಕ್ವಾರಿಯಲ್ಲಿ ಬ್ಲ್ಯಾಸ್ಟಿಂಗ್ ಮಾಡಲು ಯಂತ್ರದ ಮೂಲಕ ಡ್ರಿಲ್ಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮೇಲಿದ್ದ ಕಲ್ಲುಗಳು ಜಾರಿ ಬಿದ್ದು, ಕಾರ್ಮಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಸುದ್ದಿ ತಿಳಿದ ಕೂಡಲೇ ಪೊಲೀಸ್, ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಿಯಮ ಉಲ್ಲಂಘಿಸಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಪರಿಶೀಲನೆ ನಡೆಸಿ ಮಾಲೀಕರ ವಿರುದ್ಧ ಏಕೆ ಕ್ರಮಕೈಗೊಳ್ಳಲ್ಲಿಲ್ಲ ಎಂದು ಗಣಿ ಅಧಿಕಾರಿಗಳನ್ನು ಎಸ್ಪಿ ಬಿ.ನಿಖಿಲ್ ತರಾಟೆಗೆ ತೆಗೆದುಕೊಂಡರು.

ಟೇಕಲ್ ಸಮೀಪ ಹೆಚ್ಚು ಕಲ್ಲು ಗಣಿ ಚಟುವಟಿಕೆ ನಡೆಯುತ್ತಿದ್ದು, ಆಗಾಗ ಪ್ರಾಣ ಹಾನಿ ಪ್ರಕರಣಗಳು ಸಂಭವಿಸುತ್ತಲೇ ಇವೆ. ಕಾರ್ಮಿಕರ ಸುರಕ್ಷತೆ ಪಾಲನೆ ಮಾಡದ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದು, ಘಟನೆಗಳು ಪದೇಪದೆ ಮರುಕಳಿಸಲು ಕಾರಣರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಭಾಗದ ಕಲ್ಲು ಗಣಿಯಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿ ವಿವಿಧ ರಾಜ್ಯಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರಿಗೆ ರಕ್ಷಣೆಯಿಲ್ಲದಂತಾಗಿದೆ. ರಾತ್ರಿ ವೇಳೆ ಕಲ್ಲು ಸೋಟಗೊಳಿಸುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜೋರಾದ ಶಬ್ದ ಹೊರಹೊಮ್ಮುವುದರಿಂದ ಕೆಲವೊಮ್ಮೆ ಹೆದರಿಕೆಯಾಗುತ್ತದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

* ಜಂಟಿ ಕಾರ್ಯಾಚರಣೆ ನಡೆಸಿ ಕ್ರಮ

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಬಿ.ನಿಖಿಲ್, ಗಣಿ, ಕಂದಾಯ ಹಾಗೂ ಪೊಲೀಸ್ ಅಽಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕ್ವಾರಿಗಳಲ್ಲಿ ನ್ಯೂನತೆಗಳು ಕಂಡು ಬಂದಲ್ಲಿ, ಅಂತಹ ಕ್ವಾರಿ ಮಾಲೀಕರ ವಿರುದ್ಧ ಯಾವ ರೀತಿ ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ ಜಿಲ್ಲಾಽಕಾರಿಗಳೊಂದಿಗೆ ಚರ್ಚಿಸಲಾಗುವುದು. ಕ್ವಾರಿಯಲ್ಲಿ ಬ್ಲ್ಯಾಸ್ಟಿಂಗ್ ಮಾಡಲು ಯಂತ್ರದ ಮೂಲಕ ಡ್ರಿಲ್ಲಿಂಗ್ ಮಾಡುತ್ತಿದ್ದಾಗ ಅವಘಡ ಸಂಭವಿಸಿದೆ. ಘಟನೆ ಬಗ್ಗೆ ವರದಿ ನೀಡಲು ಗಣಿ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

* ಪ್ರಕರಣ ಮಾಸುವ ಮುನ್ನೆ ಮತ್ತೊಂದು ಘಟನೆ

ಮಾಲೂರು ತಾಲೂಕಿನ ಹಳೆಪಾಳ್ಯದ ಮಂಜುನಾಥ್ ಮಾಲೀಕತ್ವದ ಕಲ್ಲು ಗಣಿಯಲ್ಲಿ ಕಲ್ಲುಗಳನ್ನು ಇಟಾಚಿ ಯಂತ್ರದಿAದ ಸಾಗಿಸುತ್ತಿದ್ದ ವೇಳೆ ಕಾರ್ಮಿಕ ಮೃತಪಟ್ಟಿರುವ ಘಟನೆಯೂ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಸಂಭವಿಸಿರುವುದು ಮಾಕಾರಹಳ್ಳಿ ಸುತ್ತಮುತ್ತಲಿನ ಜನರದಲ್ಲಿ ಆತಂಕ ಮನೆ ಮಾಡಿದೆ. ಇಟಾಚಿ ಯಂತ್ರದ ಮೂಲಕ ಕಲ್ಲು ಬಂಡೆಗಳನ್ನು ಒಂದು ಕಡೆಯಿಂದ ಮತ್ತೊಂದಿಗೆ ಸಾಗಿಸುವ ವೇಳೆ ಇಟಾಚಿ ಮುಗಿಚಿ ಬಿದಿದ್ದೆ. ಸಮೀಪದಲ್ಲೆ ಇದ್ದ ಟ್ರ‍್ಯಾಕ್ಟರ್ ಸಹ ಜಖಂಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net