

ನವದೆಹಲಿ: ಮೈ, ಕೈ ಮೇಲೆ ಏಳುವ ಗಂಧೆಗಳು ಕೋವಿಡ್-19ರ ಲಕ್ಷಣಗಳು ಎಂಬುದನ್ನು ತುಂಬಾ ಹಿಂದೆಯೇ ಒಪ್ಪಿಕೊಳ್ಳಲಾಗಿದೆ. ಆದರೆ ಈಗ ಬಾಯಿಹುಣ್ಣು, ದಂತಕುಳಿಯಿಂದ ಬಾಯಲ್ಲಿ ಆಗುವ ಗುಳ್ಳೆಗಳು ಕೂಡ ಕೋವಿಡ್-19ರ ಲಕ್ಷಣಗಳು ಎಂದು ವೈದ್ಯರು ಹೇಳಿದ್ದಾರೆ.
ಕೋವಿಡ್-19 ಸೋಂಕಿತರನ್ನು ಪರೀಕ್ಷಿಸಿರುವ ಅಮೆರಿಕದ ಚರ್ಮರೋಗ ತಜ್ಞ ಡಾ. ಮೈಕೆಲ್ ಗ್ರೀನ್ ಕರೊನಾ ಸೋಂಕಿತರಲ್ಲಿ ಬಾಯಿಹುಣ್ಣು, ದಂತಕುಳಿಗಳಿಂದ ಬಾಯಲ್ಲಿ ಆಗುವ ಗುಳ್ಳೆಗಳು ಕಂಡು ಬಂದಿದೆ. ಹಾಗಾಗಿ ಈ ಸಮಸ್ಯೆಗಳು ಕೋವಿಡ್-19ರ ಲಕ್ಷಣಗಳು ಎಂದರೆ ತಪ್ಪಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸಿಡುಬು ರೋಗ ಹಾಗೂ ಕಾಲು ಮತ್ತು ಬಾಯಿ ರೋಗದ ವೈರಾಣು ಸೋಂಕಿನ ಸಂದರ್ಭದಲ್ಲಿ ಲೋಳೆ ಪೊರೆ (ಮ್ಯೂಕಸ್ ಮೆಂಬರೇನ್) ಮೇಲೆ ಸಣ್ಣ ಸಣ್ಣ ಗಂಧೆಗಳು ಆಗುವುದು ಸಾಮಾನ್ಯ. ಹಾಗಾಗಿ ಲೋಳೆ ಪೊರೆ ಮೇಲೆ ಗಂಧೆಗಳು ಏಳುವುದು ಕೂಡ ವೈರಾಣು ಸೋಂಕಿನ ಲಕ್ಷಣ ಎಂದು ಭಾವಿಸಲಾಗುತ್ತದೆ. ಹಾಗಾಗಿ ಅದು ಕೂಡ ಕೋವಿಡ್-19ರ ಲಕ್ಷಣ ಆಗುತ್ತದೆ ಎಂದು ವಿವರಿಸಿದ್ದಾರೆ.
ಮ್ಯಾಡ್ರಿಡ್ನ ವೈದ್ಯಕೀಯ ಕಾಲೇಜೊಂದರ ವೈದ್ಯ ಜುವಾನ್ ಜಿಮೆನೆಜ್ ಕೌಹೆ ನೇತೃತ್ವದ ಸ್ಪೇನ್ನ ಚರ್ಮರೋಗತಜ್ಞರು ಮತ್ತು ಸಂಶೋಧಕರ ತಂಡ ಕೋವಿಡ್-19 ಮತ್ತು ಚರ್ಮದ ಮೇಲೆ ಗಂಧೆಗಳು ಎದ್ದಿದ್ದ 21 ರೋಗಿಗಳನ್ನು ಆಮೂಲಾಗ್ರವಾಗಿ ತಪಾಸಣೆಗೆ ಒಳಪಡಿಸಿದ್ದರು. ಇವರಲ್ಲಿ ಆರು ಜನರಿಗೆ (ಶೇ.29) ಬಾಯಿಹುಣ್ಣು ಇತ್ತು. ಇವರೆಲ್ಲರೂ 40ರಿಂದ 69 ವರ್ಷ ವಯೋಮಿತಿಯವರಾಗಿದ್ದು, ಇವರಲ್ಲಿ 4:6 ಜನರು ಮಹಿಳೆಯರಾಗಿದ್ದರು ಎಂದು ಹೇಳಲಾಗಿದೆ.
ಕೋವಿಡ್-19ರ ಇತರೆ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುವ ಎರಡು ದಿನಗಳ ಮೊದಲಿನಿಂದ ಹಿಡಿದು 24 ದಿನಗಳವರೆಗೆ ಯಾವಾಗ ಬೇಕಾದರೂ ಬಾಯಿಹುಣ್ಣು ಕಾಣಿಸಿಕೊಳ್ಳಲು ಆರಂಭವಾಗಬಹುದು. ರೋಗಿ ಈ ಹಿಂದೆ ತೆಗೆದುಕೊಳ್ಳುತ್ತಿದ್ದ ಯಾವುದೇ ಔಷಧದಿಂದಲೂ ಆದ ಅಡ್ಡಪರಿಣಾಮ ಇದಾಗಿರಲಿಲ್ಲ. ಹಾಗಾಗಿ, ಬಾಯಲ್ಲಿ ಕೆಂಪುವರ್ಣದ ಗಂಧೆಗಳು ಕಾಣಿಸಿಕೊಳ್ಳುವುದು ಕರೊನಾ ಸೋಂಕಿನ ಲಕ್ಷಣ ಎಂದು ಖಚಿತವಾಗಿ ಹೇಳಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.