ಸಂಪಾದಕೀಯ: ಚೀನಾಕ್ಕೆ ಮತ್ತೊಂದು ಹೊಡೆತ, ಭಾರತದ ಭದ್ರತೆ ನಿಟ್ಟಿನಲ್ಲಿ ಮಹತ್ವದ ಕ್ರಮ

edit 4
Published on

ಲಡಾಖ್ ಗಡಿಯಲ್ಲಿ ತಂಟೆ ಜೀವಂತವಾಗಿ ಇರಿಸಲು ಒಂದಿಲ್ಲೊಂದು ಪ್ರಯತ್ನವನ್ನು ಚೀನಾ ಮಾಡುತ್ತಲೇ ಇದೆ. ರಾಜತಾಂತ್ರಿಕ ಮಟ್ಟದಲ್ಲಿ ಮತ್ತು ಸೇನಾಧಿಕಾರಿಗಳ ನಡುವೆ ನಡೆದ ಮಾತುಕತೆ ವೇಳೆ ಮಾಡಿಕೊಂಡ ಒಪ್ಪಂದಗಳನ್ನು ಉಲ್ಲಂಘಿಸುತ್ತಿರುವ ಚೀನಾ ತಾನು ನಂಬಲು ಅರ್ಹವಲ್ಲದ ರಾಷ್ಟ್ರ ಎಂದು ತೋರಿಸಿ ಕೊಡುತ್ತಿದೆ. ಅಲ್ಲದೆ, ಅತ್ತ ಪಾಕಿಸ್ತಾನಕ್ಕೂ ಚಿತಾವಣೆ ನೀಡುತ್ತ ಭಾರತವಿರೋಧಿ ಕ್ರಮಗಳನ್ನು ತೀವ್ರಗೊಳಿಸುತ್ತಿದೆ. ಅಮೆರಿಕದೊಂದಿಗೆ ನಡೆಯುತ್ತಿರುವ ವಾಣಿಜ್ಯ ಸಮರವೂ ತೀವ್ರಗೊಂಡಿದೆ. ಹಲವು ಆಂತರಿಕ ಸಮಸ್ಯೆಗಳಿಂದ ಬಸವಳಿದಿದ್ದರೂ, ಡ್ರಾ್ಯಗನ್ ರಾಷ್ಟ್ರ ಹಠಮಾರಿ ಧೋರಣೆ ಕೈಬಿಡುತ್ತಿಲ್ಲ. ಚೀನಾದಿಂದ ಭಾರತಕ್ಕೆ ಹಲವು ಆಯಾಮಗಳಲ್ಲಿ ಅಪಾಯವಿದೆ ಎಂದು ಮನಗಂಡಿರುವ ಕೇಂದ್ರ ಸರ್ಕಾರ ಸರಣಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತದಿಂದ ಇಂಥ ದಿಟ್ಟ ಕ್ರಮಗಳನ್ನು ನಿರೀಕ್ಷಿಸದ ಚೀನಾ ತಬ್ಬಿಬ್ಬಾಗಿದೆ.

ಜೂನ್ 29ರಂದು ಚೀನಾದ 59 ಆಪ್​ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ಜುಲೈ 24ರಂದು ಮತ್ತೆ 47 ಚೀನಿ ಆಪ್​ಗಳನ್ನು ನಿಷೇಧಿಸಿದ್ದು, ಈ ಮೂಲಕ ಆ ದೇಶದ 106 ಆಪ್​ಗಳು ನಿಷೇಧಗೊಂಡಂತಾಗಿವೆ. ಜೂನ್​ನಲ್ಲಿ ನಿಷೇಧಿಸಲಾಗಿದ್ದ ಆಪ್​ಗಳ ತದ್ರೂಪಿಗಳಂತೆಯೇ ಈ ಆಪ್​ಗಳು ಕಾರ್ಯನಿರ್ವಹಿಸುತ್ತಿದ್ದ ಕಾರಣ, ಅವುಗಳನ್ನು ನಿಷೇಧಿಸಲಾಗಿದೆ. ಚೀನಾದ ಇಂಟರ್​ನೆಟ್ ಕಂಪನಿಗಳು ಭಾರತದಲ್ಲಿ 30 ಕೋಟಿ ಬಳಕೆದಾರರನ್ನು ಹೊಂದಿದ್ದು, ಈ ಕ್ರಮದಿಂದ ಚೀನಾಕ್ಕೆ ನಡುಕ ಉಂಟಾಗಿದೆ. ‘ರಾಷ್ಟ್ರೀಯ ಹಿತಾಸಕ್ತಿ ಮತ್ತು ಭದ್ರತೆ ಕಾಪಾಡುವುದು’ ಈ ನಿಷೇಧದ ಗುರಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ, ಕಳೆದ ತಿಂಗಳು ನಿಷೇಧಿಸಲಾಗಿರುವ ಆಪ್​ಗಳು ಯಾವುದೇ ರೀತಿ ಲಭ್ಯವಾಗದಂತೆ ಕ್ರಮ ಕೈಗೊಳ್ಳಲು ದೂರಸಂಪರ್ಕ ಕಂಪನಿಗಳಿಗೆ ಸೂಚಿಸಿದೆ. 200ಕ್ಕೂ ಹೆಚ್ಚು ಆಪ್​ಗಳ ಮೇಲೆ ನಿಗಾ ಇಡಲಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಆಪ್​ಗಳು ನಿಷೇಧಗೊಂಡರೂ ಅಚ್ಚರಿ ಪಡಬೇಕಿಲ್ಲ ಎಂದಿದ್ದಾರೆ ತಜ್ಞರು.

ಮತ್ತೊಂದೆಡೆ, ಚೀನಾದ ಉತ್ಪನ್ನಗಳು ಕಳಪೆ ಆಗಿರುತ್ತವೆ ಎಂಬ ಕುರಿತು ಸಾಕಷ್ಟು ಸಮಯದಿಂದ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆ ದೇಶದಿಂದ ಆಮದು ಮಾಡಿಕೊಳ್ಳಲಾಗುವ 371 ವಿವಿಧ ಬಗೆಯ ವಸ್ತುಗಳ ಗುಣಮಟ್ಟ ಪರಿಶೀಲಿಸಿ, ಈ ಪೈಕಿ ಕಳಪೆ ಉತ್ಪನ್ನಗಳನ್ನು ನಿರ್ಬಂಧಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಚೀನಾದಿಂದ ಆಮದು ಮಾಡಿಕೊಳ್ಳಲಾಗುವ ವಸ್ತುಗಳ ಗುಣಮಟ್ಟ ಪರಿಶೀಲನೆ ಕಾರ್ಯ ಮತ್ತಷ್ಟು ಕಠಿಣವಾಗಲಿದ್ದು, ಕಡ್ಡಾಯವಾಗಿ ಭಾರತೀಯ ಮಾನಕಗಳ (ಇಂಡಿಯನ್ ಸ್ಟಾ್ಯಂಡರ್ಡ್ಸ್-ಐಎಸ್) ನಿಯಮಗಳಿಗೆ ಒಳಪಡಿಸಲಾಗುತ್ತದೆ. ಆಟಿಕೆಗಳು, ಉಕ್ಕಿನ ಕಂಬಿ, ಉಕ್ಕಿನ ಟ್ಯೂಬ್, ಎಲೆಕ್ಟ್ರಾನಿಕ್ಸ್ ವಸ್ತು, ಯಂತ್ರೋಪಕರಣಗಳು, ಕಾಗದ, ರಬ್ಬರ್ ಉತ್ಪನ್ನ ಸೇರಿ ಹಲವು ವಸ್ತುಗಳ ಗುಣಮಟ್ಟ ಪರಿಶೀಲಿಸಲಾಗುತ್ತದೆ. ದೇಶದಲ್ಲಿ ‘ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ’ ಆಂದೋಲನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ವ್ಯಾಪಾರಿಗಳು, ಜನಸಾಮಾನ್ಯರು ಸ್ವದೇಶಿ ಉತ್ಪನ್ನಗಳತ್ತ ಒಲವು ತೋರುತ್ತಿದ್ದಾರೆ. ಒಟ್ಟಾರೆ, ವ್ಯವಸ್ಥಿತ ಮತ್ತು ವ್ಯೂಹಾತ್ಮಕ ರೀತಿಯಲ್ಲಿ ಚೀನಾಕ್ಕೆ ತಿರುಗೇಟು ನೀಡುತ್ತಿರುವುದು ಗಮನಾರ್ಹ. ಇನ್ನಾದರೂ, ಚೀನಾ ವರ್ತನೆ ಬದಲಾಗಿ, ಪ್ರಾಮಾಣಿಕವಾಗಿ ವರ್ತಿಸುವುದೇ ಎಂಬುದನ್ನು ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net