

ಮೈಸೂರು: ಮೈಸೂರಿನಲ್ಲಿ ಮತ್ತೊಂದು ಕರೊನಾ ಪ್ರಕರಣ ಪತ್ತೆಯಾಗಿದೆ. ದುಬೈನಿಂದ ಇಲ್ಲಿಗೆ ಆಗಮಿಸಿರುವ 45 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೂರು ದಿನಗಳ ಹಿಂದೆ ದುಬೈನಿಂದ ಮೈಸೂರಿಗೆ ಬಂದಿದ್ದ 35 ವರ್ಷದ ವ್ಯಕ್ತಿಗೆ ಕೋವಿಡ್-19 ಇರುವುದು ಖಚಿತವಾಗಿತ್ತು. ಇದರ ಬೆನ್ನಹಿಂದೆಯೇ ಮತ್ತೊಂದು ಪ್ರಕರಣ ವರದಿಯಾಗಿದೆ.
ಕೇರಳ ಮೂಲದ ವ್ಯಕ್ತಿಯು ದುಬೈನಿಂದ ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾ.22ರ ಬೆಳಗ್ಗೆ 3ರ ಸುಮಾರಿಗೆ ಬಂದಿದ್ದು, ಅವರಿಗೆ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ. ನಂತರ ಕೇರಳಕ್ಕೆ ಹೋಗಲು ಟ್ಯಾಕ್ಸಿಯಲ್ಲಿ ಮೈಸೂರಿಗೆ ಆಗಮಿಸಿದ್ದಾರೆ. ಮಾರ್ಗಮಧ್ಯೆ ಮಂಡ್ಯದ ಬಳಿ ಚಹಾ ಕುಡಿಯಲು ಇಳಿದಿದ್ದು, ನಗರವನ್ನು ಪ್ರವೇಶಿಸಿದ ಬಳಿಕ ಮೀನಾ ಬಜಾರ್ಗೆ ಹೋಗಿ ಕೆಲವರನ್ನು ಭೇಟಿ ಮಾಡಿದ್ದಾರೆ. ತದನಂತರ ಸ್ವಲ್ಪ ಆಯಾಸ, ಗಂಟಲು ನೋವು, ಕೆಮ್ಮು ಕಾಣಿಸಿಕೊಂಡಿದ್ದರಿಂದ ಕೆಆರ್ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡಿದ್ದಾರೆ.
ಕರೊನಾ ಶಂಕೆ ಹಿನ್ನೆಲೆಯಲ್ಲಿ ತಕ್ಷಣವೇ ಐಸೋಲೇಷನ್ ವಾರ್ಡ್ಗೆ ದಾಖಲು ಮಾಡಿಕೊಂಡ ವೈದ್ಯರು, ಕಫ, ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಅಲ್ಲಿಂದ ಬಂದಿರುವ ವರದಿಯಲ್ಲಿ ಇವರಿಗೆ ಕರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು. ಈ ರೋಗಪೀಡಿತ ವ್ಯಕ್ತಿ ಎಲ್ಲಿ ಚಹಾ ಕುಡಿದರು ಎಂಬುದು ಖಚಿತವಾಗಿಲ್ಲ. ಮೀನಾ ಬಜಾರ್ಗೆ ಏಕೆ ಹೋಗಿದ್ದರು, ಯಾರನ್ನು ಭೇಟಿ ಮಾಡಿದರು ಎಂಬುದು ಕೂಡ ಸ್ಪಷ್ಟವಾಗಿಲ್ಲ. ಈ ವಿಷಯದಲ್ಲಿ ಕೆಲ ಗೊಂದಲಗಳಿವೆ. ಹೀಗಾಗಿ, ಮತ್ತೊಮ್ಮೆ ಅವರಿಂದ ಸಂಪೂರ್ಣ ಮಾಹಿತಿ ಪಡೆದು ಟ್ರಾವೆಲ್ ಹಿಸ್ಟರಿ ತಯಾರು ಮಾಡಲಾಗುವುದು. ರೂಟ್ ಮ್ಯಾಪ್ ಮಾಡಿದ ಬಳಿಕ ಇವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ತಪಾಸಣೆ ಮಾಡಲಾಗುವುದು. ಸದ್ಯಕ್ಕೆ ಅವರು ಯಾವ ರೀತಿ ಬಂದರು, ಏಕೆ ಹೋಗಿದ್ದರು ಎಂಬುದಕ್ಕಿಂತ ಉಳಿದವರಿಗೆ ಸೋಂಕು ಹರಡದಂತೆ ತಡೆಯಬೇಕಿದೆ. ಆದ್ದರಿಂದ ಇವರ ಸಂಪರ್ಕಕ್ಕೆ ಬಂದವರು ಆಸ್ಪತ್ರೆಗೆ ಭೇಟಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.