

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸಂಬಂಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ. ಜತೆಗೆ ಲೋಕಾಯುಕ್ತ ಪೊಲೀಸರು ಏನೆಲ್ಲ ಅಂಶಗಳ ಆಧಾರದ ಮೇಲೆ ಸಿದ್ದರಾಮಯ್ಯ ಅವರನ್ನು ವಿಚಾರಣೆ ನಡೆಸಬಹುದು ಎಂದು ವಿಸ್ತೃತವಾಗಿ ತಿಳಿಸಿದ್ದಾರೆ.
ಮುಡಾ ಪ್ರಕರಣದ 1ನೇ ಆರೋಪಿ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು, ಪ್ರಚೋದನೆ ನೀಡುವ ಕೃತ್ಯದಲ್ಲಿ ನಿರಂತರವಾಗಿ ತೊಡಗಿದ್ದಾರೆ. ಆದ್ದರಿಂದ ಅವರನ್ನು ಶೀಘ್ರ ವಿಚಾರಣೆಗೆ ಒಳಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ಲೋಕಾಯುಕ್ತ ಎಸ್ಪಿ ಉದೇಶ್ ಅವರಿಗೆ ದೂರು ನೀಡಿದ್ದಾರೆ.
ಮೈಸೂರಿನ ದಿವಾನ್ಸ್ ರಸ್ತೆಯ ಲೋಕಾಯುಕ್ತ ಕಚೇರಿಯಲ್ಲಿ ಸೋಮವಾರ 25 ಪುಟಗಳ ದೂರು ನೀಡಿದ್ದಾರೆ. ಹೈಕೋರ್ಟ್‌ಗೆ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ಆಧಾರದ ಮೇಲೆ ತನಿಖೆ ನಡೆಸಿದರೆ ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಸ್ನೇಹಮಯಿ ಕೃಷ್ಣ, ಏನೆಲ್ಲ ಅಂಶಗಳ ಸಿದ್ದರಾಮಯ್ಯ ಅವರನ್ನು ವಿಚಾರಣೆ ಮಾಡಬಹುದು ಎಂಬುವುದನ್ನು ವಿವರವಾದ ಪಟ್ಟಿ ನೀಡಿದ್ದಾರೆ.