ಸಂಪಾದಕೀಯ | ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ; ಅನ್ನದಾತನಿಗೆ ಅನುಕೂಲ

Food Edit
Published on

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಮುಂಗಾರು ಋತುವಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಏರಿಕೆ ಮಾಡಲು ಅನುಮತಿ ನೀಡಿರುವುದು ರೈತ ಸಮುದಾಯಕ್ಕೆ ಒಂದಿಷ್ಟು ನೆಮ್ಮದಿ ಮೂಡಿಸುವ ಬೆಳವಣಿಗೆಯಾಗಿದೆ.

ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರು 2022-23ರ ಕೃಷಿ ವರ್ಷದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು ದಾಖಲೆ ಪ್ರಮಾಣವಾದ 33.05 ಕೋಟಿ ಟನ್​ಗಳಿಗೆ ತಲುಪುವ ನಿರೀಕ್ಷೆ ಇದೆ ಎಂದಿರುವುದು ಕೂಡ ಸಮಾಧಾನಕರ ಸಂಗತಿಯೇ. 2021-22ಕ್ಕೆ ಹೋಲಿಸಿದರೆ 1.49 ಕೋಟಿ ಟನ್​ಗಳಷ್ಟು ಹೆಚ್ಚಳ ಕಂಡು, ಕಳೆದ ಐದು ವರ್ಷಗಳಲ್ಲಿಯೇ ಗರಿಷ್ಠ ಏರಿಕೆಯಾಗಲಿದೆ.

ಭತ್ತಕ್ಕೆ (ಸಾಮಾನ್ಯ ತಳಿ) ಎಂಎಸ್​ಪಿ ದರವನ್ನು ಕ್ವಿಂಟಾಲ್​ಗೆ 2,040 ರಿಂದ 2,183; ಗ್ರೇಡ್ ಎ ತಳಿಗೆ 2,060ರಿಂದ 2,203; ಸಜ್ಜೆಗೆ 2,350 ರಿಂದ 2,500; ರಾಗಿಗೆ 3,578 ರಿಂದ 3,846 ರೂಪಾಯಿಗೆ ಏರಿಸಲಾಗಿದೆ. ದ್ವಿದಳ ಧಾನ್ಯಗಳಾದ ತೊಗರಿಗೆ 6,600 ರಿಂದ 7,000; ಹೆಸರು ಕಾಳಿಗೆ 7,755 ರಿಂದ 8,558; ಉದ್ದಿನ ಕಾಳಿಗೆ 6,600 ರಿಂದ 6,950 ರೂಪಾಯಿಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಗೆ ಅನುಗುಣವಾಗಿ ಶೇಕಡಾ 7ರ ಆಸುಪಾಸಿನಲ್ಲಿ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ವರ್ಷ ಘೊಷಿಸಿದರೂ ಕೃಷಿ ಉತ್ಪಾದನಾ ವೆಚ್ಚದ ಹೆಚ್ಚಳಕ್ಕೆ ಅನುಗುಣವಾಗಿ ಇದು ಹೆಚ್ಚಳವಾಗುವುದಿಲ್ಲ ಎಂಬ ತಕರಾರು ರೈತ ಸಮುದಾಯದಿಂದ ಕೇಳಿಬರುತ್ತಲೇ ಇದೆ.

ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳ ತೀವ್ರ ಕುಸಿತ ತಡೆಯಲು ಸರ್ಕಾರ ಮಧ್ಯಪ್ರವೇಶಿಸಿ ರೈತರಿಗೆ ನೆರವಾಗುವುದು ಎಂಎಸ್​ಪಿ ಉದ್ದೇಶ. ಬೆಲೆಗಳು ತೀವ್ರವಾಗಿ ಕುಸಿದರೆ ರೈತರು ಎಂಎಸ್​ಪಿ ದರದಲ್ಲಿ ಸರ್ಕಾರ ಅಥವಾ ಸರ್ಕಾರ ನೇಮಿಸಿದ ಸಂಸ್ಥೆಗೆ ಬೆಳೆ ಮಾರಾಟ ಮಾಡುವ ಮೂಲಕ ತೀವ್ರ ಪ್ರಮಾಣದ ನಷ್ಟದಿಂದ ತಪ್ಪಿಸಿಕೊಳ್ಳಲು ಅವಕಾಶವಾಗುತ್ತದೆ. ಹೀಗಾಗಿ, ಬೆಲೆಗಳು ಒಂದು ನಿರ್ದಿಷ್ಟ ಹಂತಕ್ಕಿಂತ ಕೆಳಗೆ ಇಳಿಯುವ ಸಾಧ್ಯತೆಯನ್ನು ಇದು ತಪ್ಪಿಸುತ್ತದೆ. ಬೆಳೆಗಳನ್ನು ಬೆಳೆಸಲು ಮಾಡಿರುವ ಖರ್ಚು, ಸಾಲ ಮರುಪಾವತಿಯನ್ನು ತಕ್ಕಮಟ್ಟಿಗೆ ನಿಭಾಯಿಸಲೂ ಸಹಾಯ ಮಾಡುತ್ತದೆ.

ಹೆಚ್ಚಿನ ಬೆಂಬಲ ಬೆಲೆ ನೀಡುವ ಮೂಲಕ ಬೇಡಿಕೆ ಹಾಗೂ ಅಗತ್ಯ ಇರುವ ಬೆಳೆಗಳನ್ನು ಬೆಳೆಯಲು ಸರ್ಕಾರ ಪ್ರೋತ್ಸಾಹಿಸಬಹುದಾಗಿದೆ. ಶಾಂತಕುಮಾರ್ ಸಮಿತಿಯು 2015ರಲ್ಲಿ ನೀಡಿದ ವರದಿ ಪ್ರಕಾರ ಶೇ. 6ರಷ್ಟು ರೈತರು ಮಾತ್ರ ಎಂಎಸ್​ಪಿ ಬಳಸಿಕೊಂಡಿದ್ದು, ಶೇ. 94ರಷ್ಟು ರೈತರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಬೆಲೆಗಳು ಬೆಳೆ ಕೊಯ್ಲು ಸಂದರ್ಭದಲ್ಲಿಯೇ ಕುಸಿಯುತ್ತವೆ. ಏಕೆಂದರೆ, ಬೆಳೆಗಾರರು ಏಕಕಾಲಕ್ಕೆ ಫಸಲನ್ನು ಮಾರುಕಟ್ಟೆಗೆ ತರುವ ಸಮಯ ಇದಾಗಿರುತ್ತದೆ. ಮಾರುಕಟ್ಟೆಯಲ್ಲಿ ಉತ್ಪನ್ನ ಧಾರಾಳವಾಗಿ ಲಭ್ಯವಾಗುವುದರಿಂದ ಖರೀದಿದಾರರು ಕಡಿಮೆ ಬೆಲೆಯಲ್ಲಿ ಖರೀದಿಸಲು ಪ್ರಯತ್ನಿಸುತ್ತಾರೆ. ಇದನ್ನು ತಪ್ಪಿಸಬೇಕಾದರೆ, ಸರ್ಕಾರ ಕೂಡ ಈ ಸಮಯದಲ್ಲಿಯೇ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ವ್ಯವಸ್ಥೆ ಕಲ್ಪಿಸುವುದು ಅಗತ್ಯ ಎಂಬುದು ರೈತವಲಯದ ಬೇಡಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net