

ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಪ್ರವರ ಥಿಯೇಟರ್ ತಂಡದ ಕಲಾವಿದರಿಂದ ಅಣ್ಣನ ನೆನಪು ನಾಟಕ ಪ್ರದರ್ಶನ ನಡೆಯಿತು.
ತೇಜಸ್ವಿ ಅವರು ಕುವೆಂಪು ಬಗ್ಗೆ ಬರೆದ ಅಣ್ಣನ ನೆನಪು ಕೃತಿಯಲ್ಲಿ ತೇಜಸ್ವಿ ಅವರ ಆತ್ಮಚರಿತ್ರೆಯ ಬಗ್ಗೆ ಇದೆ. ಕೃತಿಯಲ್ಲಿ ಅವರ ಬದುಕಿನ ಪುಟಗಳು ತೆರೆದುಕೊಳ್ಳುತ್ತವೆ ಎಂದು ಲೇಖಕ ಪ್ರದೀಪ್ ಕೆಂಜಿಗೆ ಹೇಳಿದರು.
ಕವಿ, ದಾರ್ಶನಿಕ, ಕಾದಂಬರಿಕಾರ, ಗುರುವಾಗಿ ಕುವೆಂಪು ಅವರನ್ನು ಅನೇಕರು ಕಂಡಿದ್ದಾರೆ. ತೇಜಸ್ವಿ ಅವರು ಅಣ್ಣನ ನೆನಪು ಕೃತಿಯಲ್ಲಿ ಕುವೆಂಪು ಅವರ ಬದುಕಿನ ವಿವರಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರು ಬದುಕಿದ್ದಾಗ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರಲಿಲ್ಲ. ಈಗ ತೇಜಸ್ವಿ ಹುಟ್ಟುಹಬ್ಬವನ್ನು ಯುವ ಪೀಳಿಗೆ ಸೇರಿದಂತೆ ಅನೇಕರು ವಿಶೇಷವಾಗಿ ಆಚರಿಸುತ್ತಿದ್ದಾರೆ. ನಾಟಕ, ಪರಿಸರ ಜಾಗೃತಿ ಮುಂತಾದ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ನಡೆಯುತ್ತಿವೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಡಾ. ಸಿ.ರಮೇಶ್ ಮಾತನಾಡಿ, ತೇಜಸ್ವಿ ಅವರ ಅಣ್ಣನ ನೆನಪು ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿರುವುದು ಶ್ಲಾಘನೀಯ. ತೇಜಸ್ವಿ ಪ್ರತಿಷ್ಠಾನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪುಸ್ತಕ ಪ್ರಕಾಶನದ ಮುಖ್ಯಸ್ಥ ರಾಘವೇಂದ್ರ, ಬರಹಗಾರ ರವೀಶ್ ಕ್ಯಾತನಬೀಡು, ನಾಟಕದ ನಿರ್ದೇಶಕ ರಾಮಸಂಜೀವ, ಪ್ರವರ ಥಿಯೇಟರ್ ತಂಡದ ಸದಸ್ಯ ಅಶ್ವಿನಿ ಅಕ್ಷಯ್, ಲೇಖಕ ಪೂರ್ಣೇಶ್ ಮತ್ತಾವರ, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕ ಪ್ರಜ್ವಲ್, ಸಿಬ್ಬಂದಿ ಸತೀಶ್ ತರುವೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನವದೀಪ್, ಶಾಮಿಲಿ, ಪೂರ್ಣೆಶ್, ಮಲ್ಲಿಕ್, ಮೋಹನ್ ಮತ್ತಿತರರಿದ್ದರು.