ಅನ್ನರಾಮಯ್ಯ'ನ ಖಜಾನೆ ಖಾಲಿ: ವಿಜಯೇಂದ್ರ ಲೇವಡಿ| Rice transport lorries on strike

B.Y.Vijayendra
Published on

ಬೆಂಗಳೂರು: ಪಡಿತರ ವ್ಯವಸ್ಥೆಯಡಿ ಅನ್ನಭಾಗ್ಯ ಅಕ್ಕಿ ಸಾಗಿಸುವ ನಾಲ್ಕು ಸಾವಿರ ಲಾರಿಗಳ ಸಂಚಾರ ಸ್ಥಗಿತವಾಗಿವೆ. ಐದಾರು ತಿಂಗಳ ಸಾಗಣೆ ಬಾಕಿ ಮೊತ್ತ 260 ಕೋಟಿ ರೂ ಪಾವತಿಗೆ ಒತ್ತಾಯಿಸಿ ಲಾರಿ ಮಾಲೀಕರು ಮುಷ್ಕರ ಹೂಡಿದ್ದಾರೆ. ಇದೇ ವಿಷಯ ಮುಂದೆ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, 'ಅನ್ನರಾಮಯ್ಯ'ನ ಖಜಾನೆ ಖಾಲಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು,‌ 'ಅನ್ನರಾಮಯ್ಯ' ಎಂದು ಹೊಗಳಿಸಿ ಕೊಳ್ಳುವ ಸಿದ್ದರಾಮಯ್ಯನವರೇ, ಅನ್ನಭಾಗ್ಯಕ್ಕೆ ಏಕೆ ಭಂಗತಂದಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಖಜಾನೆ ಬರಿದಾಗಿಲ್ಲ ಎಂಬ ಸ್ಪಷ್ಟನೆಯ ನಿಮ್ಮ ಹೇಳಿಕೆಗಳು ಸುಳ್ಳು ಹಾಗೂ ಭಂಡತನದ ಪರಮಾವಧಿ ಎನ್ನುವುದನ್ನು ಅನ್ನಭಾಗ್ಯ ಯೋಜನೆಯ ಸಾರಥಿಗಳಾಗಿ ಕೆಲಸ ಮಾಡುತ್ತಿದ್ದ ಲಾರಿ ಮಾಲೀಕರಿಗೆ ತಿಂಗಳುಗಟ್ಟಲೆ ಬಾಡಿಗೆ ಪಾವತಿಸದೇ (4500  ಲಾರಿಗಳು)ಅವರ ಬದುಕಿನ ಭಾಗ್ಯಕ್ಕೆ ಬರೆ ಎಳೆದಿದ್ದೀರಿ.

ಇದರ ಪರಿಣಾಮ ಇಂದಿನಿಂದ ಅನ್ನ ಭಾಗ್ಯವನ್ನು ಅವಲಂಬಿಸಿದ್ದ ಲಕ್ಷಾಂತರ ಬಡ ಕುಟುಂಬಗಳಿಗೆ ‘ಖಾಲಿ ತಟ್ಟೆಯಲ್ಲಿ ಕೈ ತೊಳೆಯುವ ಭಾಗ್ಯ ‘ಕರುಣಿಸುತ್ತಿದ್ದೀರಿ ಎಂದು ಕುಟುಕಿದ್ದಾರೆ.

ದಿವಾಳಿಯತ್ತ ಆರ್ಥಿಕ ಸ್ಥಿತಿ

ನಿಮ್ಮ ಸರ್ಕಾರ ಅನ್ನ ಭಾಗ್ಯದ ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿಗಳಿಗೆ ಬಾಡಿಗೆ ಕೊಡುವ ಸ್ಥಿತಿಯಲ್ಲೂ ಇಲ್ಲದ ಕೆಟ್ಟ ಪರಿಸ್ಥಿತಿಗೆ ತಲುಪಿದೆ ಎಂದರೆ ಸರ್ಕಾರದ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗಿರುವುದರ ಸೂಚನೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಎತ್ತಿ ತೋರಿಸಿದ್ದಾರೆ.

ಅನ್ನಭಾಗ್ಯದ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವೊಂದೇ ಸಾಗಣೆ ವೆಚ್ಚ ಭರಿಸಬೇಕಿಲ್ಲ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ನೀಡುತ್ತಿರುವ ಉಚಿತ 5 ಕೆ.ಜಿ ಅಕ್ಕಿಯ ಜತೆಗೆ ಆಹಾರ ಧಾನ್ಯ ಸಾಗಣೆಯ ವೆಚ್ಚವನ್ನೂ ಭರಿಸುತ್ತಿದೆ ಆದರೂ ಲಾರಿ ಮಾಲೀಕರಿಗೆ ಬಾಡಿಗೆ ಕೊಡದೆ ಏಕಿಷ್ಟು ಸತಾಯಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ನಿಮ್ಮ ಸರ್ಕಾರದ ಭ್ರಷ್ಟ ವ್ಯವಹಾರಗಳಿಗೆ ಆದಾಯ ಮೂಲಗಳನ್ನು ಕಂಡುಹಿಡಿದುಕೊಳ್ಳಲು ಬೆಲೆ ಏರಿಕೆ, ಅವೈಜ್ಞಾನಿಕ ತೆರಿಗೆಗಳನ್ನು ಜನರ ಮೇಲೆ ಹೇರುತ್ತಲೇ ಇದ್ದೀರಿ, ನಿಮ್ಮ ಕಮಿಷನ್ ದಂಧೆಗೆ ಕನಿಷ್ಠ ಅಲ್ಪವಿರಾಮನ್ನಾದರೂ ನೀಡಿ ಎಂದು ತಿವಿದಿದ್ದಾರೆ.

ಜನರನ್ನು ಹಸಿವೆಂಬ ಬಾಧೆ ಬಾದಿಸದಂತೆ ಈ ಕೂಡಲೇ ಲಾರಿ ಮಾಲೀಕರ ಬಾಕಿ ಹಣವನ್ನು ಪಾವತಿಸಿ ಹಸಿದವರ ಆಕ್ರೋಶ ಹಾಗೂ ಲಾರಿಯನ್ನು ನಂಬಿ ಜೀವನ ಮಾಡುತ್ತಿರುವ ಲಾರಿ ಮಾಲೀಕರು ಹಾಗೂ ಚಾಲಕರ ಕುಟುಂಬಗಳ ಶಾಪಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಿ ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net