ಸಾಲದ ಸುಳಿಯಲ್ಲಿ ಅನ್ನದಾತ; ಕರ್ನಾಟಕದ ಪ್ರತಿ ಕೃಷಿ ಕುಟುಂಬದ ಮೇಲೆ 1.26 ಲಕ್ಷ ರೂ. ಸಾಲದ ಹೊರೆ

Front
Published on

| ರಮೇಶ ದೊಡ್ಡಪುರ ಬೆಂಗಳೂರು

ರಾಜ್ಯದ ರೈತರಿಗೆ ನೆರವಾಗಲು ಹಲವು ಬಾರಿ ಸಾಲಮನ್ನಾ, ಸಹಾಯಧನ, ರಿಯಾಯಿತಿ ಸಹಿತ ಹಲವು ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಿದ್ದರೂ, ರಾಜ್ಯದ ರೈತ ಕುಟುಂಬಗಳು ದೇಶದ ಸರಾಸರಿಗಿಂತ ದುಪ್ಪಟ್ಟು ಸಾಲವನ್ನು ಹೊಂದಿವೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಾರ್ಯಾಲಯ(ಎನ್​ಎಸ್​ಎಸ್​ಒ) ನಡೆಸಿದ ‘ಗ್ರಾಮೀಣ ಭಾರತದಲ್ಲಿ ಕೃಷಿ ಪರಿವಾರದ ಸ್ಥಿತಿ ಹಾಗೂ ಭೂಮಿ ಮತ್ತು ಪಶುಧನ ಮೌಲ್ಯಮಾಪನ-2019’ ವರದಿಯ ವಿಶ್ಲೇಷಣೆಯಿಂದ ಈ ವಿಷಯ ತಿಳಿದುಬಂದಿದೆ. ಕೃಷಿಯಲ್ಲಿ ದುಡಿದ ಹಣದಿಂದಲೇ ಬಂಡವಾಳವನ್ನು ಸೃಷ್ಟಿಸಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಇದು ನಿರೂಪಿಸಿದೆ. ಭಾರತದಲ್ಲಿ ಪ್ರತಿ ಕೃಷಿ ಕುಟುಂಬವು ಸರಾಸರಿ 74,121 ರೂ. ಸಾಲ ಹೊಂದಿದ್ದರೆ ಕರ್ನಾಟಕದಲ್ಲಿ ಇದು 1.26 ಲಕ್ಷ ರೂ. ಇದೆ. ಬಹುತೇಕ ಕೃಷಿ ಉತ್ಪನ್ನ ಮಾರಾಟದಷ್ಟೆ ಆದಾಯವನ್ನು ಕೂಲಿಯಿಂದ ಪಡೆಯುತ್ತಿರುವುದು, ಬ್ಯಾಂಕುಗಳಿಂದ ಸಾಲದ ಮಿತಿಯ ಕಾರಣಕ್ಕೆ ಕೈಸಾಲಗಳ ಮೊರೆ ಹೋಗಿರುವುದು, ಸರ್ಕಾರದಿಂದ ಸೂಕ್ತ ಪ್ರಮಾಣದಲ್ಲಿ ತಾಂತ್ರಿಕ ಮಾರ್ಗದರ್ಶನ ದೊರಕದೆ ಇರುವುದು ಸೇರಿ ಅನೇಕ ವಿಚಾರಗಳನ್ನು ಸಮೀಕ್ಷೆ ಹೊರಹಾಕಿದೆ.

ದುಪ್ಪಟ್ಟು ಸಾಲದ ಹೊರೆ: ದೇಶದ ಶೇ. 50 ರೈತ ಕುಟುಂಬಗಳು ಸಾಲ ಹೊಂದಿವೆ. ಪ್ರತಿ ಕುಟುಂಬದ ಮೇಲೆ ಸರಾಸರಿ 74,121 ರೂ. ಸಾಲವಿದೆ. ಕರ್ನಾಟಕದ ಶೇ.67.6 ಕುಟುಂಬಗಳು ಸಾಲ ಹೊಂದಿದ್ದು, ಸರಾಸರಿ 1.26 ಲಕ್ಷ ರೂ. ಇದೆ. 2013ರಲ್ಲಿ ಇದೇ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ದೇಶದ ಅಂದಾಜು ಶೇ. 52 ರೈತ ಕುಟುಂಬಗಳು ತಲಾ 47 ಸಾವಿರ ರೂ. ಸಾಲ ಹೊಂದಿದ್ದವು. ಕರ್ನಾಟಕದ ಶೇ.77.3 ಕುಟುಂಬಗಳು ತಲಾ 97,200 ರೂ. ಸಾಲ ಹೊಂದಿದ್ದವು. ಅಂದರೆ ದೇಶದಲ್ಲಿ 2013ರಿಂದ 2019ರವರೆಗಿನ ಆರು ವರ್ಷದಲ್ಲಿ ಸರಾಸರಿ ಕುಟುಂಬದ ಸಾಲದ ಪ್ರಮಾಣ ಶೇ.57 ಏರಿಕೆ ಆಗಿದೆ. ಸಾಲದ ಮೊತ್ತದ ಆಧಾರದಲ್ಲಿ ಆಂಧ್ರ (2.45 ಲಕ್ಷ ರೂ.), ಕೇರಳ (2.42 ಲಕ್ಷ ರೂ.), ಪಂಜಾಬ್ (2.03 ಲಕ್ಷ ರೂ.), ಹರಿಯಾಣ (1.82 ಲಕ್ಷ ರೂ.), ತೆಲಂಗಾಣ (1.52 ಲಕ್ಷ ರೂ.) ನಂತರದಲ್ಲಿ ರಾಜ್ಯ 6ನೇ ಸ್ಥಾನದಲ್ಲಿದೆ.

ವೇತನದಿಂದಲೇ ಹೆಚ್ಚಿನ ಆದಾಯ: ದೇಶದ ಪ್ರತಿ ಕೃಷಿ ಕುಟುಂಬ ಮಾಸಿಕ ಸರಾಸರಿ 8,337 ರೂ. ಆದಾಯ ಪಡೆಯುತ್ತಿದೆ. ಇದರಲ್ಲಿ ಕೃಷಿ ಉತ್ಪನ್ನದಿಂದ 3,058 ರೂ. ದೊರೆತರೆ, ವೇತನದಿಂದ 4,063 ರೂ. ಪಡೆಯುತ್ತಿವೆ. ಅಂದರೆ ಕೃಷಿ ಕುಟುಂಬಗಳು ಸಂಪೂರ್ಣವಾಗಿ ಕೃಷಿ ಆದಾಯದ ಮೇಲೆಯೇ ಜೀವನ ನಡೆಸುತ್ತಿಲ್ಲ ಎಂಬುದನ್ನು ಇದು ಸೂಚಿಸಿದೆ. ಪ್ರತಿ ಕೃಷಿ ಕುಟುಂಬದ ಆದಾಯ 11,195 ರೂ. ಇದ್ದು ಇದರಲ್ಲಿ ಕೃಷಿ ಉತ್ಪನ್ನದಿಂದ 5,602 ರೂ. ಹಾಗೂ ವೇತನದಿಂದ 4,576 ರೂ. ಲಭಿಸುತ್ತಿದೆ.

ವಾಣಿಜ್ಯ ಬ್ಯಾಂಕ್​ಗಳಲ್ಲೇ ಹೆಚ್ಚು ಸಾಲ: ಕರ್ನಾಟಕದಲ್ಲಿ ಒಟ್ಟು ಕೃಷಿ ಕುಟುಂಬಗಳ ಶೇ.37.3 ಸಾಲದ ಅವಶ್ಯಕತೆಯನ್ನು ವಾಣಿಜ್ಯ ಬ್ಯಾಂಕುಗಳೇ ಪೂರೈಸುತ್ತಿವೆ. ಸಾಂಸ್ಥಿಕ ಸಾಲದಲ್ಲಿ, ಪ್ರಾದೇಶಿಕ ಬ್ಯಾಂಕುಗಳು (ಶೇ.11), ಸಹಕಾರಿ ಸೊಸೈಟಿ (ಶೇ.13.6), ಸಹಕಾರಿ ಬ್ಯಾಂಕ್ (ಶೇ.3.7), ಸ್ವಸಹಾಯ ಗುಂಪು (ಶೇ.5.1) ಹಾಗೂ ಇನ್ನಿತರೆ ಮೂಲಗಳಿಂದ ಶೇ.2.7 ಸಾಲ ಪಡೆಯಲಾಗಿದೆ. ಸಾಂಸ್ಥಿಕವಲ್ಲದೆ, ಕೃಷಿ ಚಟುವಟಿಕೆಗೆ ಸಾಲ ನೀಡುವವರಿಂದ ಶೇ.6.3, ಖಾಸಗಿ ಲೇವಾದೇವಿದಾರರಿಂದ ಶೇ.7.2, ಬಡ್ಡಿರಹಿತವಾಗಿ ಸ್ನೇಹಿತರು ಮತ್ತು ಸಂಬಂಧಿಕರಿಂದ ಶೇ.8.1 ಹಾಗೂ ಇನ್ನಿತರೆ ಮೂಲಗಳಿಂದ ಶೇ.4.9 ಸಾಲ ಪಡೆದಿದ್ದಾರೆ.

ತಾಂತ್ರಿಕ ಸಲಹೆ ಕೊರತೆ: ಸೂಕ್ತ ರೀತಿಯಲ್ಲಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಹಾಗೂ ನೂತನ ತಂತ್ರಜ್ಞಾನ ಅಳವಡಿಕೆ ಬಗ್ಗೆ ರೈತರಿಗೆ ಸಲಹೆ ನೀಡಲು ಸರ್ಕಾರಗಳು ಅನೇಕ ಯೋಜನೆ ರೂಪಿಸಿವೆ. ರಾಜ್ಯದ ಶೇ.47.7 ಕುಟುಂಬಗಳಿಗಷ್ಟೆ ತಾಂತ್ರಿಕ ಸಲಹೆ ಲಭಿಸುತ್ತಿದೆ. ಅದರಲ್ಲೂ ಪ್ರಗತಿಪರ ರೈತರು, ರೇಡಿಯೋ, ಟಿವಿ, ಮುದ್ರಣ ಮಾಧ್ಯಮಗಳೇ ಸಿಂಹಪಾಲು ಹೊಂದಿದ್ದು, ಕೃಷಿ ವಿವಿಗಳು ತೀರಾ ನಗಣ್ಯ ಎನ್ನಿಸಿವೆ. ಆಂಧ್ರಪ್ರದೇಶದಲ್ಲಿ ಶೇ.73.5, ಕೇರಳದಲ್ಲಿ ಶೇ.71.1, ಮಹಾರಾಷ್ಟ್ರದಲ್ಲಿ ಶೇ.64.1, ತಮಿಳುನಾಡಿನಲ್ಲಿ ಶೇ.78.1, ತೆಲಂಗಾಣದಲ್ಲಿ ಶೇ.63 ರೈತರು ವಿವಿಧ ಮೂಲಗಳಿಂದ ತಾಂತ್ರಿಕ ಸಲಹೆ ಪಡೆಯುತ್ತಿದ್ದು, ಕರ್ನಾಟಕ ಸಾಕಷ್ಟು ಹಿಂದುಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net