ಅನ್ನ, ಅಕ್ಷರದ ಅರಿವು ಅನನ್ಯ ಕೊಡುಗೆ

arasu
ದೇವರಾಜ ಅರಸು ಹಾಗೂ ನಾರಾಯಣ ಗುರುಗಳ ಭಾವಚಿತ್ರಕ್ಕೆ ಬಿ.ವೈ.ರಾಘವೇಂದ್ರ, ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಬಲ್ಕಿಷ್ ಬಾನು, ಶ್ರೀಧರ್ ಹುಲ್ತಿಕೊಪ್ಪ ಮುಂತಾದವರು ಪುಷ್ಪಾರ್ಚನೆ ಮಾಡಿದರು.
Published on

ಶಿವಮೊಗ್ಗ: ಶೋಷಿತ ವರ್ಗಕ್ಕೆ ಅಕ್ಷರ ಜ್ಞಾನದ ಮಹತ್ವ ವಿವರಿಸಿದವರು ನಾರಾಯಣಗುರುಗಳು. ಇದೇ ಜನರಿಗೆ ಭೂಮಿ ಹಕ್ಕು ಒದಗಿಸಿದವರು ಮಾಜಿ ಸಿಎಂ ದೇವರಾಜ ಅರಸು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಣ್ಣಿಸಿದರು.

ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ಮಾಜಿ ಸಿಎಂ ದೇವರಾಜ ಅರಸು ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರಾಂತಿಕಾರಿ ಬದಲಾವಣೆಯಿಂದ ಹಸಿದ ಹೊಟ್ಟೆಗೆ ಅನ್ನ ನೀಡಿದವರು ಅರಸು. ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮೂಲಕ ಜಮೀನ್ದಾರಿ ಪದ್ಧತಿಯನ್ನು ನಿರ್ಮೂಲನೆ ಮಾಡಿ ಉಳುವವನನ್ನೇ ಒಡೆಯನನ್ನಾಗಿಸಿದ ಖ್ಯಾತಿ ಅವರದು ಎಂದರು.
ಬ್ರಹ್ಮಶ್ರೀ ನಾರಾಯಣಗುರುಗಳು ಜಾತಿ, ಧರ್ಮಕ್ಕಿಂತ ಮನುಕುಲ ಶ್ರೇಷ್ಠವೆಂದು ಅಸ್ಪಶ್ಯರಿಗೆ, ಹಿಂದುಳಿದವರಿಗೆ ನೂರಾರು ಕೆರೆ ಕಟ್ಟೆ, ದೇವಾಲಯ ಕಟ್ಟಿಸಿದರು. ಕೀಳರಿಮೆ ಬಿಟ್ಟು ವಿಶಾಲವಾಗಿ ಚಿಂತಿಸುವಂತೆ ಮಾರ್ಗದರ್ಶನ ನೀಡಿದ್ದರು ಎಂದು ಸ್ಮರಿಸಿದರು.
ಅರಸು ಕುರಿತು ಉಪನ್ಯಾಸ ನೀಡಿದ ಬೆಂಗಳೂರು ವಿವಿ ನಿವೃತ್ತ ಪ್ರೊ. ರಾಜಪ್ಪ ದಳವಾಯಿ, ರಾಜ್ಯದ ಚರಿತ್ರೆಯಲ್ಲಿ 70ರ ದಶಕ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ದೃಷ್ಟಿಯಿಂದ ಭೀಕರವಾಗಿತ್ತು. ಈ ಸಂದರ್ಭದಲ್ಲೇ ದೇವರಾಜ ಅರಸು ರಾಜಕೀಯ ಪ್ರವೇಶಿಸಿದ್ದರು ಎಂದು ತಿಳಿಸಿದರು.
ಮೊದಲ ಬಾರಿಗೆ ಅರಸು ರೋಸ್ಟರ್ ಪದ್ಧತಿ ಜಾರಿಗೆ ತಂದರು. ರಾಜಕೀಯವಾಗಿ ಅನೇಕರನ್ನು ಬೆಳೆಸಿದರು. 20 ಅಂಶಗಳ ಕಾರ್ಯಕ್ರಮ ಯಶಸ್ವಿಯಾಗಿ ಜಾರಿಗೊಳಿಸಿದರು. ಅವರ ಜೀವನವೇ ಆದರ್ಶಮಯ. ಸಾಮಾನ್ಯ ಜನರಿಗಾಗಿ ಮಿಡಿಯುವ ಶಕ್ತಿ ಅವರಲ್ಲಿತ್ತು ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯರಾದ ಬಲ್ಕಿಷ್ ಬಾನು, ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಶಾಸಕ ಎಸ್.ಎನ್.ಚನ್ನಬಸಪ್ಪ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಡಿಸಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ವಿ.ರಾಜು , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net