ಆರೂರು ಜಗದೀಶ್​ ನನ್ನ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ … ಅನಿರುದ್ಧ್​ ಆಕ್ರೋಶ

Aniruddh (1)
Published on

ಬೆಂಗಳೂರು: 'ಜೊತೆ ಜೊತೆಯಲಿ' ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್​ ಅವರು ತಮ್ಮ ಮಾನ ಹಾನಿ ಮಾಡುವುದರ ಜತೆಗೆ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ನಟ ಅನಿರುದ್ಧ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೂರು ಜಗದೀಶ್​ ನಿರ್ದೇಶನದ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನಿರುದ್ಧ್​ ನಟಿಸುತ್ತಿದ್ದರು. ಕೆಲವು ತಿಂಗಳ ಹಿಂದೆ ಧಾರಾವಾಹಿ ತಂಡದೊಂದಿಗಿನ ವೈಮನಸ್ಯದಿಂದಾಗಿ ಅವರು ಹೊರಬಂದರು. ಈ ಪ್ರಕರಣವು ಕಿರುತೆರೆ ನಿರ್ಮಾಪಕರ ಸಂಘದ ಮಟ್ಟಿಲೇರಿ, ಅನಿರುದ್ಧ್​ ಅವರಿಗೆ ಬೇರೆ ಯಾವ ಧಾರಾವಾಹಿಯಲ್ಲೂ ನಟಿಸುವುದಕ್ಕೆ ಅವಕಾಶ ನೀಡಬಾರದು ಎಂದು ತೀರ್ಮಾನವಾಗಿತ್ತು. ಹೀಗಿರುವಾಗಲೇ, ಉದಯ ಟಿವಿಯಲ್ಲಿ ಪ್ರಸಾರವಾಗಬೇಕಿರುತವ 'ಸೂರ್ಯವಂಶ' ಧಾರಾವಾಹಿಯಲ್ಲಿ ಅನಿರುದ್ಧ್​ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಇದಕ್ಕೆ ಕಿರುತೆರೆ ನಿರ್ಮಾಪಕರ ಸಂಘವು ವಿರೋಧ ವ್ಯಕ್ತಪಡಿಸಿದ್ದು, ಅನಿರುದ್ಧ್​ ಅವರಿಗೆ ನಟಿಸುವುದಕ್ಕೆ ಅವಕಾಶ ನೀಡಬಾರದು ಎಂದು ಹೇಳಿತ್ತು. ಈ ಪ್ರಕರಣ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿಯ ಅಂಗಳದಲ್ಲಿದ್ದು, ಇಂದು ಸಭೆ ನಡೆದಿದೆ. ಆದರೆ, ಈ ಸಭೆಗೆ 'ಜೊತೆ ಜೊತೆಯಲಿ' ಅಥವಾ ಕಿರುತೆರೆ ನಿರ್ಮಾಪಕರ ಸಂಘದವರಾಗಲೀ ಹಾಜರಾಗಿಲ್ಲ.

ಈ ಕುರಿತು ಮಾತನಾಡಿರುವ ಅನಿರುದ್ಧ್​, 'ಆರೂರು ಜಗದೀಶ್​ ನನ್ನ ಮಾನಹಾನಿ ಮಾಡುವ ಕೆಲಸ ಮಾಡಿದ್ದಾರೆ. ನನ್ನ ಅನ್ನ ಕಿತ್ತುಕೊಳ್ಳೂವ ಕೆಲಸ ಮಾಡಿದ್ದಾರೆ. ಈ ಹಿಂದೆ ಕೆಟಿವಿ ಅಧ್ಯಕ್ಷರು ಕರೆದಾಗಲೂ ಅವರು ಬರಲಿಲ್ಲ. ಈಗ ವಾಣಿಜ್ಯ ಮಂಡಳಿಯ ಸಭೆಗೂ ಅವರು ಬಂದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು, ಅನಿರುದ್​​ ಅವರನ್ನು ಬ್ಯಾನ್​ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್​ ಹೇಳಿದ್ದಾರೆ. 'ಈ ಸಭೆಗೆ ನಿರ್ಮಾಪಕರ ಸಂಘವನ್ನು ಕರೆದಿದ್ದರೂ ಅವರು ಬಂದಿಲ್ಲ. ಆದ್ದರಿಂದ ಅದ್ದರಿಂದ ವಾಣಿಜ್ಯ ಮಂಡಳಿ ಖಡಕ್ ನಿರ್ಧಾರ ತೆಗೆದು ಕೊಂಡಿದೆ. ಇಡೀ ಉದ್ಯಮ ಅನಿರುದ್ದ್ ಅವರ ಜೊತೆ ಇದೆ. ಅನಿರುದ್ದ್ ಅಷ್ಟೇ ಅಲ್ಲ, ಯಾರನ್ನೂ ಬ್ಯಾನ್ ಮಾಡೊಕೆ ಆಗಲ್ಲ. ನಾವು ಅನಿರುದ್ಧ್​ ಅವರ ಜತೆಗೆ ಇರುತ್ತೇವೆ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net