ಸುತ್ತೂರು ಮಠದ ಇತಿಹಾಸಕ್ಕೆ ಅನಿಮೇಷನ್ ಸ್ಪರ್ಶ

Animation 27 Sept
Published on

| ಮಂಜು ಕೊಟಗುಣಸಿ ಬೆಂಗಳೂರು

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿರುವ ಸುತ್ತೂರು ಮಠಕ್ಕೆ ಸಾವಿರ ವರ್ಷದ ಇತಿಹಾಸವಿದೆ. ಈ ಅಭೂತಪೂರ್ವ ಇತಿಹಾಸವನ್ನೇ ಸಿನಿಮಾ ಮೂಲಕ ತೋರಿಸಲು ಮಠ ನಿರ್ಧರಿಸಿತ್ತು. ಇದೀಗ ಆ ಕನಸು ಸಾಕಾರಗೊಂಡಿದೆ. ‘ಸುತ್ತೂರು ಶ್ರೀ ಮಠ- ಗುರುಪರಂಪರೆ’ ಹೆಸರಲ್ಲಿ 50 ನಿಮಿಷದ ಅನಿಮೇಷನ್ ಚಿತ್ರ ಸಿದ್ಧವಾಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಈ ಚಿತ್ರವನ್ನು ತಯಾರು ಮಾಡಲಾಗಿದೆ. ಶೂನ್ಯೇಕ ಸಲ್ಯೂಷನ್ಸ್ ಸಂಸ್ಥೆ ಈ ಅನಿಮೇಷನ್ ಸಿನಿಮಾ ನಿರ್ವಣದ ಹೊಣೆ ಹೊತ್ತಿದ್ದು, ನಿರ್ದೇಶಕ ಅಬ್ದುಲ್ ಕರೀಮ್ ಮತ್ತು ತಂಡ ಸುದೀರ್ಘ ನಾಲ್ಕು ವರ್ಷದ ಅವಧಿಯ ಬಳಿಕ ಇದೀಗ ಚಿತ್ರವನ್ನು ಸಂಪೂರ್ಣವಾಗಿಸಿದೆ. ಆಗಸ್ಟ್ 29ರಂದು ರಾಜೇಂದ್ರ ಮಹಾಸ್ವಾಮಿಗಳ 105ನೇ ಜನ್ಮ ಶತಮಾನೋತ್ಸವದ ಪ್ರಯುಕ್ತ ಸಿಎಂ ಬಿ.ಎಸ್ ಯಡಿಯೂರಪ್ಪ ಈ ಅನಿಮೇಷನ್ ಚಿತ್ರದ ಕಿರು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ನಾಲ್ಕು ವರ್ಷದ ಪ್ರಯತ್ನದ ಫಲ: ಆರಂಭದಲ್ಲಿ ಮಠದ ಬಗ್ಗೆ ಜನರಿಗೆ ತಿಳಿಸಬೇಕೆಂಬ ಉದ್ದೇಶದಿಂದ 5-10 ನಿಮಿಷದ ಚಿತ್ರ ನಿರ್ವಿುಸಲು ನಿರ್ಧರಿಸಲಾಗಿತ್ತು. 2016ರಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆಗೆ ಮೊರಬದ ಮಲ್ಲಿಕಾರ್ಜುನ, ಪೂರ್ಣಾನಂದ, ಅಂಬುಕೇಶ್ವರ, ಮಲೆಯೂರು ಗುರುಸ್ವಾಮಿ, ತ್ರಿಪುರಾಂತಕ, ನಂದೀಶ್ ಹಂಚೆ, ನಿಜಲಿಂಗಪ್ಪ ಸೇರಿ ಇನ್ನೂ ಹಲವರು ಮಠದ ಸಾವಿರ ವರ್ಷದ ಅಧ್ಯಯನ ವರದಿ ಸಿದ್ಧಪಡಿಸಿದ್ದರು. ಕತೆ ಹಿರಿದಾಗುತ್ತಿದ್ದಂತೆ 5 ನಿಮಿಷದದ ಬದಲು 50 ನಿಮಿಷ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು. ಬಳಿಕ 2018ರ ಜುಲೈನಲ್ಲಿ ಅನಿಮೇಷನ್ ಪ್ರಕ್ರಿಯೆ ಚಾಲನೆ ನೀಡಲಾಗಿತ್ತು. ಇದೀಗ ಆ ಅನಿಮೇಷನ್ ಕೆಲಸ ಮುಕ್ತಾಯವಾಗಿದೆ.

ಅಂತಾರಾಷ್ಟ್ರೀಯ ಗುಣಮಟ್ಟ

ನಿರ್ದೇಶಕ ಅಬ್ದುಲ್ ಕರೀಮ್ ಒಟ್ಟು 25ಕ್ಕೂ ಅಧಿಕ ಜನರೊಂದಿಗೆ ಸೇರಿ ಈ ಚಿತ್ರ ಸಿದ್ಧಪಡಿಸಿದ್ದಾರೆ. ತಾಂತ್ರಿಕವಾಗಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಬಳಕೆ ಮಾಡಲಾಗಿದೆಯಂತೆ. ‘ಒಂದು ಪ್ರೊಫೆಷನಲ್ ಸಿನಿಮಾ ಹೇಗೆ ಸಿದ್ಧವಾಗುತ್ತದೆಯೋ ಅದೇ ತರಹ ಚಿತ್ರ ತಯಾರಿಸಿದ್ದೇವೆ. ತಾಂತ್ರಿಕ ನಿರ್ದೇಶಕರಾಗಿ ಪೃಥ್ವಿರಾಜ್ ಕೆಲಸ ಮಾಡಿದರೆ, ಹರಿಕಾವ್ಯಾ ಸಂಗೀತ ನೀಡಿದ್ದಾರೆ’ ಎಂಬುದು ಅಬ್ದುಲ್ ಅವರ ಮಾತು.

3 ಕೋಟಿ ವೆಚ್ಚದಲ್ಲಿ ನಿರ್ಮಾಣ

ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಚಿತ್ರವನ್ನು ಯಾವುದೇ ಫಲಾಪೇಕ್ಷೆ ಬಯಸದೆ ಚಿತ್ರಮಂದಿರದಲ್ಲಿ ತೋರಿಸಬೇಕೆಂಬ ಉದ್ದೇಶವೂ ಶ್ರೀಮಠದ್ದಾಗಿದೆ. ಕಿರುತೆರೆಗೂ ನೀಡಿ ಅಲ್ಲಿಯೂ ಪ್ರಸಾರ ಮಾಡುವ ಬಗ್ಗೆ ತೀರ್ವನಿಸಲಾಗಿದೆ.

50 ನಿಮಿಷದ ಚಿತ್ರದಲ್ಲಿ ಏನೆಲ್ಲ ಇರಲಿದೆ?

ಆರಂಭದ ಸ್ವಾಮೀಜಿಗಳಿಂದ ಹಿಡಿದು 22ನೇ ಮಂತ್ರ ಮಹರ್ಷಿಗಳ ಕಾಲಘಟ್ಟ, 23ನೇ ರಾಜೇಂದ್ರ ಸ್ವಾಮೀಜಿಗಳ ವೇಳೆ ಸುತ್ತೂರು ಮಠ ಅನ್ನ ಮತ್ತು ವಿದ್ಯೆಗೆ ಆಶ್ರಯ ತಾಣವಾಗಿತ್ತು. ಇದೀಗ 24ನೇ ಸ್ವಾಮೀಜಿಗಳು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿ ಮೈಸೂರು ಮಹಾರಾಜರೂ ಕಾಣಿಸಿಕೊಳ್ಳುತ್ತಾರೆ, ಡಾ. ರಾಜಕುಮಾರ್ ಅವರೂ ಇದ್ದಾರೆ ಎಂದು ಮಾಹಿತಿ ನೀಡುತ್ತಾರೆ ಅಬ್ದುಲ್.

ಮಠದ ಸಾವಿರ ವರ್ಷದ ಇತಿಹಾಸ ಈಗ ಅನಿಮೇಷನ್ ಸಿನಿಮಾ ರೂಪದಲ್ಲಿ ಸಿದ್ಧವಾಗಿದೆ. ಕಳೆದ ಹಲವು ವರ್ಷಗಳ ಪ್ರಯತ್ನ ಇದೀಗ ಸಾಕಾರಗೊಂಡಿದೆ. ಈ ಚಿತ್ರ ಕೇವಲ ದಾಖಲೆಗಲ್ಲ, ಮುಂದಿನ ಪೀಳಿಗೆಗೂ ಇದು ದಾರಿದೀಪವಾಗಲಿದೆ. | ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸುತ್ತೂರು ಮಠ ಕಳೆದ ನಾಲ್ಕು ವರ್ಷದಿಂದ ಈ ಪ್ರಾಜೆಕ್ಟ್​ನಲ್ಲಿ ನಾನು ಮತ್ತು ನಮ್ಮ ತಂಡದವರು ತೊಡಗಿಸಿಕೊಂಡಿದ್ದೇವೆ. ಈ ಚಿತ್ರ ತಯಾರಿಕೆಯ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ. | ಅಬ್ದುಲ್ ಕರೀಮ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net