ಬೆಕ್ಕುಗಳ ತುಂಟಾಟಕ್ಕೆ ಪ್ರಾಣಿಪ್ರಿಯರು ಫಿದಾ

state level cat compitation
ಪ್ರದರ್ಶನದಲ್ಲಿ ಗಮನ ಸೆಳೆದ ಬೆಕ್ಕುಗಳು.
Published on

ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಭಾನುವಾರ ಬಗೆಬಗೆಯ ಮಾರ್ಜಾಲಗಳು ಪ್ರಾಣಿ ಪ್ರಿಯರ ಕಣ್ಮನ ಸೆಳೆದವು. ಬೆಕ್ಕಿನ ನಡೆ, ಹಾವ-ಭಾವ, ನೋಟ, ತುಂಟಾಟಕ್ಕೆ ನೋಡುಗರು ಫಿದಾ ಆದರು.

ಶಿವಮೊಗ್ಗ ಗೇಟ್‌ವೇ ಕ್ಯಾಟ್ ಕ್ಲಬ್‌ನಿಂದ ದ್ವಿತೀಯ ವರ್ಷದ ರಾಜ್ಯಮಟ್ಟದ ಮಾರ್ಜಾಲ ಪ್ರದರ್ಶನದಲ್ಲಿ ಆಕರ್ಷಕವಾಗಿದ್ದ ಬೆಕ್ಕುಗಳನ್ನು ಪ್ರಾಣಿಪ್ರಿಯರು ಎತ್ತಿಹಿಡಿದು ಮುದ್ದಾಡಿ ಸಂಭ್ರಮಿಸಿದರು. ಮುದ್ದಾದ ಬೆಕ್ಕುಗಳ ಚಾಕಚಕ್ಯತೆ ಮತ್ತು ಬುದ್ಧಿಮತ್ತೆಗೆ ನೆರೆದಿದ್ದವರು ಮನಸೋತರು.
ಪರ್ಶಿಯನ್, ಬೆಂಗಾಲ್, ಹಿಮಾಲಯನ್, ಬ್ರಿಟಿಷ್ ಶಾರ್ಟ್ ಹೇರ್, ಕ್ಲಾಸಿಂಗ್ ಲಾಂಗ್ ಹೇರ್, ಸ್ಥಳೀಯ ಇಂಡಿಮೋ, ಕ್ಲಾಸಿಕ್ ಸೇರಿ ಏಳು ಬಗೆಯ 120ಕ್ಕೂ ಅಧಿಕ ತಳಿಯ ಬೆಕ್ಕುಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಕೊಲ್ಕತ, ಮಹಾರಾಷ್ಟ್ರ, ಬೆಂಗಳೂರು, ಹಾಸನ, ಮೈಸೂರು, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು, ಗದಗ, ಹಾವೇರಿ, ದಾವಣಗೆರೆ ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ಮಾರ್ಜಾಲಗಳು ಆಗಮಿಸಿದ್ದವು.
ಲಕ್ಷಾಂತರ ರೂ. ಮೌಲ್ಯದ ಮೈನ್‌ಕೂನ್, ಬ್ಲಾಕ್ ಸ್ಮೋಕ್ ಮೈನ್‌ಕೂನ್ ತಳಿ, ರಷ್ಯಾ ಮೂಲದ ಬೆಂಗಾಲ್ ಕ್ಯಾಟ್, ಬ್ಯೂ ಬೆಂಗಾಲ್ ಕ್ಯಾಟ್, ಸುಲ್ತಾನ್, ಲೈಲಾ, ಜ್ಯೂನಿಯರ್ ಶಫೇರ್ ನೋಡುಗರ ಹುಬ್ಬೇರಿಸುವಂತೆ ಮಾಡಿದವು.
ಕಳೆದ ವರ್ಷವೂ ಮಾರ್ಜಾಲ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದೆ. ಕಳೆದ 11 ವರ್ಷಗಳಿಂದ ಬೆಕ್ಕುಗಳ ಸಾಕಣೆಯಲ್ಲಿ ತೊಡಗಿಕೊಂಡಿದ್ದು ಹಾಲಿ 15 ಬೆಕ್ಕುಗಳನ್ನು ಸಾಕಿದ್ದೇನೆ. ಪ್ರದರ್ಶನಕ್ಕೆ ಮೂರು ಬೆಕ್ಕು ತಂದಿದ್ದೇನೆ ಎನ್ನುತ್ತಾರೆ ಚಿಕ್ಕಮಗಳೂರಿನ ತಬ್ಸೂಮ್ ಇಕ್ಬಾಲ್.

ಪ್ರಥಮ ಸ್ಥಾನ- ಬೆಂಗಳೂರಿನ ಇಮ್ರಾನ್ ಶೇಖ್ ಅವರ ಮೈನ್‌ಕೂನ್ ಕ್ಯಾಟ್
ದ್ವಿತೀಯ ಸ್ಥಾನ- ಮೈಸೂರಿನ ಮಹಮ್ಮದ್ ಹಮೀದ್ ಅವರ ಬೆಂಗಾಲ್ ಕ್ಯಾಟ್
ತೃತೀಯ ಸ್ಥಾನ- ಬೆಂಗಳೂರಿನ ವಸೀಂ ಖಾನ್ ಅವರ ಪರ್ಶಿಯನ್ ಕ್ಯಾಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net