

ಬೆಂಗಳೂರು : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಅಂಕಿತಾ ಅಮರ್. ಕಿರುತೆರೆಯ ‘ನಮ್ಮನೆ ಯುವರಾಣಿ’, ‘ಮಂಗಳಗೌರಿ ಮದುವೆ’ಯಲ್ಲಿ ಖ್ಯಾತಿ ಗಳಿಸಿದ ಬಳಿಕ ಬೆಳ್ಳಿತೆರೆಗೆ ಎಂಟ್ರಿಯಾದರು. ಈ ವರ್ಷ ಅಂಕಿತಾ ನಟಿಸಿರುವ ‘ಮೈ ಹೀರೋ’, ‘ಇಬ್ಬನಿ ತಬ್ಬಿದ ಇಳೆಯಲಿ’ ಬಿಡುಗಡೆಗೊಂಡು ಯಶಸ್ಸು ಕಂಡಿವೆ. ಜತೆಗೆ ಅಂಕಿತಾ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದೇ ಖುಷಿಯಲ್ಲಿ ನವರಾತ್ರಿ ಆಚರಣೆಯ ಬಗ್ಗೆ ಅವರು, ‘ನಾಡಹಬ್ಬ ದಸರಾ ಎಂದಾಗ ನನಗೆ ನೆನಪಾಗುವುದು ತಾಯಿ ಚಾಮುಂಡೇಶ್ವರಿ. ಈ ಹಬ್ಬದಲ್ಲಿ ಒಬ್ಬ ಹೆಣ್ಣು ಮಗಳನ್ನು ಒಂಬತ್ತು ದಿನಗಳ ಕಾಲ ಆರಾಧಿಸಲಾಗುತ್ತದೆ. ಹೀಗಾಗಿ ಹೆಣ್ಣು ಮಕ್ಕಳಿಗೆ ನವರಾತ್ರಿ ಬಹು ವಿಶೇಷ. ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ ಹೀಗೆ ಒಂಬತ್ತು ದಿನಗಳ ಕಾಲ ದೇವಿಯನ್ನು ವಿವಿಧ ಹೆಸರಿನಲ್ಲಿ ಆರಾಧಿಸುತ್ತೇವೆ. ಇದು ಹೆಣ್ಣಿನ ಬೆಳವಣಿಗೆಯ ಹಂತವನ್ನು ಸೂಚಿಸುತ್ತದೆ. ಇನ್ನು, ಯಾವುದೇ ಹಬ್ಬವಾಗಲಿ ದೇವಿಯ ಆರಾಧನೆ ಮಾಡಿದರೆ, ಜೀವನದಲ್ಲಿ ಸಾರ್ಥಕತೆ ಸಿಗುತ್ತದೆ. ನಮ್ಮ ಮನೆಯಲ್ಲಿ ಹಬ್ಬದ ಪ್ರತಿ ದಿನ ದೀಪ ಹಚ್ಚಿ, ಲಲಿತಾ ಸಹಸ್ರನಾಮ ಪಠಣ ಮಾಡುತ್ತೇವೆ’ ಎಂದು ಮಾಹಿತಿ ನೀಡುತ್ತಾರೆ.
ಎರಡು ಬಾರಿ ದಸರಾ ಕಾರ್ಯಕ್ರಮ: ನಟಿ ಅಂಕಿತಾ ಅಮರ್‌ಗೂ ಮೈಸೂರು ದಸರಾಕ್ಕೂ ಅವಿನಾಭಾವ ಸಂಬಂಧವಂತೆ. ನಟಿಯಾಗುವ ಮುಂಚೆ ಅವರು ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇವರ ತಂಡದಿಂದ ಎರಡು ಬಾರಿ ದಸರಾ ಮುಖ್ಯ ಕಾರ್ಯಕ್ರಮದಲ್ಲಿ ಶೋ ನೀಡಿದ್ದರಂತೆ, ಈ ಬಗ್ಗೆ, ‘ಕಳೆದ ಎರಡು ವರ್ಷಗಳ ಹಿಂದೆ ಮೈಸೂರು ಅರಮನೆ ಮುಂಭಾಗದಲ್ಲಿ ನಡೆಯುವ ದಸರಾ ವೈಭವ ಕಾರ್ಯಕ್ರಮದಲ್ಲಿ ನವದುರ್ಗೆಯರಲ್ಲಿ ಒಬ್ಬ ದೇವಿಯಾಗಿ ಭರತನಾಟ್ಯ ಮಾಡಿದ್ದೇನೆ. ಇನ್ನೊಮ್ಮೆ ರಘು ಲೀಲಾ ಸಂಗೀತ ಮಂದಿರದಿಂದ ಸಂಗೀತ ಕಾರ್ಯಕ್ರಮ ನೀಡಿದ್ದೆವು. ಈ ಮೂಲಕ ಮೈಸೂರು ದಸರಾ ನನ್ನ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಇದು ಆ ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಎಂದೇ ಭಾವಿಸುವೆ. ಈ ಬಾರಿಯ ಯುವ ದಸರಾದಲ್ಲಿ ಭಾಗಿಯಾಗುವ ಆಲೋಚನೆಯಲ್ಲಿದ್ದೇನೆ’ ಎನ್ನುತ್ತಾರೆ ಅಂಕಿತಾ.
ಜಸ್ಟ್ ಮ್ಯಾರೀಡ್ ಸನ್ ಆಫ್ ಹರಿಶ್ಚಂದ್ರ! ಈ ವರ್ಷವೇ ಎರಡು ಹಿಟ್ ಚಿತ್ರಗಳಲ್ಲಿ ನಟಿಸಿರುವ ಸಂಭ್ರಮದಲ್ಲಿರುವ ಅಂಕಿತಾ ಮುಂದೆ ಸಾಲು ಸಾಲು ಸಿನಿಮಾಗಳಿವೆ. ಸದ್ಯ ನಿರ್ದೇಶಕಿ ಬಾಬಿ ಆ್ಯಕ್ಷನ್-ಕಟ್ ಹೇಳಿರುವ ‘ಜಸ್ಟ್ ಮ್ಯಾರೀಡ್’ ಹಾಗೂ ಸಚಿನ್ ವಾಲಿ ನಿರ್ದೇಶಿಸುತ್ತಿರುವ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ. ಈ ಬಗ್ಗೆ, ‘‘ಜಸ್ಟ್ ಮ್ಯಾರೀಡ್’ನಲ್ಲಿ ನನ್ನದು ಸಹನಾ ಪಾತ್ರ. ಗುರಿಯನ್ನು ಸಾಧಿಸುವಾಗ ಸಹನೆಯಿಂದ ಇವರು ಇವಳು ಮುಂದೆ ಪ್ರೀತಿಯಲ್ಲಿ ಬಿದ್ದಾಗ ಹೇಗೆ ಅಸಹನಾಶೀಲಳಾಗುತ್ತಾಳೆ ಎಂಬುದನ್ನು ತೋರಿಸುತ್ತದೆ. ಇನ್ನೊಂದು ‘ಸತ್ಯ ಸನ್ ಆ್ ಹರಿಶ್ಚಂದ್ರ’ ಚಿತ್ರದ ಚಿತ್ರೀಕರಣ ಶೇ.90ರಷ್ಟು ಪೂರ್ಣಗೊಂಡಿದೆ. ಸದ್ಯ ಐದು ಕಥೆ ಕೇಳಿದ್ದು, ಎರಡು ಕಥೆಗಳು ಇಷ್ಟವಾಗಿವೆ. ಮುಂದಿನ ಬೆಳವಣಿಗೆಯ ಬಗ್ಗೆ ಕಾತರಳಾಗಿದ್ದೇನೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.