ಎನ್‌ಐಎ ಅಧಿಕಾರಿ ಪುತ್ರಿ ಹಾಸ್ಟೆಲ್ ರೂಮ್​ನಲ್ಲಿ ಶವವಾಗಿ ಪತ್ತೆ

ವಿಜಯವಾಣಿ-85
Published on

ಉತ್ತರ ಪ್ರದೇಶ: ಪ್ರಸ್ತುತ ದೆಹಲಿಯ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ (ಎನ್‌ಐಎ) ಇನ್‌ಸ್ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಸಂತೋಷ್ ರಸ್ತೋಗಿ ಅವರ ಪುತ್ರಿ ಅನಿಕಾ ರಸ್ತೋಗಿ (19) ಲಕ್ನೋದ ಆಶಿಯಾನಾದಲ್ಲಿರುವ ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಹಾಸ್ಟೆಲ್ ರೂಮ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೂರನೇ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿದ್ದ ಅನಿಕಾ ನಿನ್ನೆ (ಆ.31) ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಹಾಸ್ಟೆಲ್​ ರೂಮ್​ನ ನೆಲದ ಮೇಲೆ ಕುಸಿದು ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಅನಿಕಾ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಬಿಎ, ಎಲ್‌ಎಲ್‌ಬಿ ವಿದ್ಯಾರ್ಥಿನಿ ಅನಿಕಾ ರಸ್ತೋಗಿ ಮಹಾರಾಷ್ಟ್ರ ಕೇಡರ್‌ನ 1998 ಬ್ಯಾಚ್‌ನ ಐಪಿಎಸ್ ಅಧಿಕಾರಿ ಸಂಜಯ್ ರಸ್ತೋಗಿ ಅವರ ಮಗಳು ಎಂದು ವರದಿಯಾಗಿದೆ. ಸದ್ಯ ಆಕೆಯ ಸಾವಿನ ಬಳಿಕ ಆಶಿಯಾನಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ವರದಿಗಳ ಪ್ರಕಾರ, ಅನಿಕಾಳ ಮೈಮೇಲೆ ಯಾವುದೇ ಗಾಯಗಳಿಲ್ಲ. ಆಕೆ ರೂಮ್​ಗೆ ಹೋದ ಬಳಿಕ ಒಳಗಿನಿಂದ ಬೀಗ ಹಾಕಲಾಗಿದೆ. ಒಳಗೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ಅನಿಕಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತೆಯ ಕುಟುಂಬದ ಸದಸ್ಯರು ಇನ್ನೂ ಪೊಲೀಸ್ ದೂರು ದಾಖಲಿಸಿಲ್ಲ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net