

ಫ್ಲೋರಿಡಾದಲ್ಲಿ ಮಹಿಳೆಯೋರ್ವರು ತಮ್ಮ ಪುಟ್ಟ ಮಗನ ಡೇ ಕೇರ್ ಟೀಚರ್ ವಿರುದ್ಧ ಸಿಕ್ಕಾಪಟೆ ಕೋಪಗೊಂಡಿದ್ದಾರೆ. ಡೇ ಕೇರ್ನ ಶಿಕ್ಷಕಿ ಮಾಡಿದ ಒಂದು ಕೆಲಸದಿಂದ ಸಿಡಿಮಿಡಿಗೊಂಡಿರುವ ಮಹಿಳೆ ಅದನ್ನು ಫೇಸ್ಬುಕ್ನಲ್ಲಿ ಕೂಡ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಆ ಶಿಕ್ಷಕಿ ಮಾಡಿದ್ದೇನು? ಅಮ್ಮ ಯಾಕೆ ಕೋಪಗೊಂಡ್ರು ಅಂತ ಗೊತ್ತಾಗಬೇಕಾದರೆ ಈ ಸ್ಟೋರಿ ಓದಿ...
ಹೀದರ್ ಚಿಸಮ್ ಎಂಬುವರು ಸಿಂಗಲ್ ಫೇರೆಂಟ್. ಪತಿ ಇಲ್ಲದ ಕಾರಣ ದುಡಿಯುವುದು ಅನಿವಾರ್ಯವಾಗಿದ್ದರಿಂದ ಬೆಳಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡುತ್ತಾರೆ. ಈ ವೇಳೆ ತಮ್ಮ ಪುಟ್ಟ ಮಗನನ್ನು ಡೇ ಕೇರ್ನಲ್ಲಿ ಬಿಡುತ್ತಾರೆ. ಅವರು ತುಂಬ ಬಿಜಿ ಇರುವ ಕಾರಣ ತಮ್ಮ ಮಗನ ಡೇ ಕೇರ್ನ ಶಿಕ್ಷಕಿ ಬರೆದು ಕಳಿಸುತ್ತಿದ್ದ ಟಿಪ್ಪಣಿಗಳನ್ನು ಅವರು ನೋಡಲು ಸಾಧ್ಯವಾಗುತ್ತಿರಲಿಲ್ಲ.
ಟೀಚರ್ ಆ ಟಿಪ್ಪಣಿಗಳನ್ನು ಬರೆದು ಬ್ಯಾಗ್ನಲ್ಲಿ ಕಳಿಸುತ್ತಿದ್ದರು. ಆದರೆ ಹೀದರ್ಗೆ ಅದನ್ನು ಓದುವಷ್ಟು ಪುರುಸೊತ್ತು ಇರುತ್ತಿರಲಿಲ್ಲ. ಒಂದು ದಿನ, ಮಗುವಿನ ಡೈಪರ್ಗಳು ಖಾಲಿಯಾಗಿವೆ. ಕಳಿಸಿಕೊಡಿ, ಒಂದೆರಡು ಹೆಚ್ಚಿಗೆ ಕಳಿಸಿ ಎಂದು ಟಿಪ್ಪಣಿ ಬರೆದು ಕಳಿಸಿದ್ದರು. ಆದರೆ ಅದನ್ನು ಕೂಡ ಹೀದರ್ ನೋಡಿರಲಿಲ್ಲ.
ಆದರೆ ಶಿಕ್ಷಕಿ ಮರುದಿನ ಮಗುವಿನ ಹೊಟ್ಟೆಯ ಮೇಲೆ ಮಾರ್ಕರ್ನಲ್ಲಿ ಅದನ್ನೇ ಬರೆದು ಕಳಿಸಿದ್ದರು. 'ಅಮ್ಮಾ, ಡೈಪರ್ಸ್ ಖಾಲಿಯಾಗಿದೆ. ಸ್ಕೂಲ್ನಿಂದ ಬಂದಿರುವ ವರದಿಯನ್ನು ಓದಿ' ಎಂದು ಹೊಟ್ಟೆಮೇಲೆ ಬರೆದುಕೊಂಡು ಇತ್ತು.
ನೋಡಿದ್ದೇ ಹೀದರ್ ಸಿಕ್ಕಾಪಟೆ ಕೋಪಗೊಂಡಿದ್ದಾರೆ. ಮಗುವಿನ ಹೊಟ್ಟೆಯ ಮೇಲೆ ಮಾರ್ಕರ್ನಿಂದ ಬರೆಯಲಾಗಿರುವ ಫೋಟೋವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ, ನೀವೇ ಹೇಳಿ ಈ ಘಟನೆಗೆ ನಾನು ಸಿಟ್ಟು ಮಾಡಿಕೊಳ್ಳುವುದು ನ್ಯಾಯ ತಾನೆ? ಅಥವಾ ನಾನು ಓವರ್ ರಿಯಾಕ್ಟ್ ಮಾಡುತ್ತಿದ್ದೇನೆ ಎಂದೆನಿಸುತ್ತಿದೆಯಾ? ಎಂದು ಫೇಸ್ಬುಕ್ನಲ್ಲಿ ಪ್ರಶ್ನಿಸಿದ್ದಾರೆ.
ಅಲ್ಲದೆ ಘಟನೆಯ ಬಗ್ಗೆ ಸವಿವರ ಪೋಸ್ಟ್ ಹಾಕಿದ್ದಾರೆ. ನಾನು ಸಿಂಗಲ್ ಪೇರೆಂಟ್. ಒಬ್ಬಳೇ ಎಲ್ಲವನ್ನೂ ನಿಭಾಯಿಸಬೇಕು. ಈ ಒತ್ತಡದಲ್ಲಿ ಪ್ರತಿದಿನ ಟೀಚರ್ ಕಳಿಸುವ ಟಿಪ್ಪಣಿಗಳನ್ನು ಓದಲಾಗುತ್ತಿರಲಿಲ್ಲ ಎಂಬುದನ್ನೂ ಆಕೆ ಒಪ್ಪಿಕೊಂಡಿದ್ದಾರೆ. ಹಾಗೇ ಮಗುವಿನ ಹೊಟ್ಟೆ ಮೇಲಿನ ಅಕ್ಷರ ಎಷ್ಟೇ ಉಜ್ಜಿ ತೊಳೆದರೂ ಹೋಗುತ್ತಿಲ್ಲ ಎಂದು ದೂರಿದ್ದಾರೆ.
ಹೀದರ್ ಅವರ ಪೋಸ್ಟ್ಗೆ ಈಗಾಗಲೇ 21 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. 29 ಸಾವಿರ ಬಾರಿ ಶೇರ್ ಆಗಿ, ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಬಹುತೇಕರು ಟೀಚರ್ ಕ್ರಮವನ್ನು ಖಂಡಿಸಿದ್ದಾರೆ. ನೀವು ದಿನದ ಟಿಪ್ಪಣಿಗಳನ್ನು ಓದಬೇಕಿತ್ತು. ಆದರೆ ಶಿಕ್ಷಕಿ ಮಾಡಿದ್ದು ತುಂಬ ದೊಡ್ಡ ತಪ್ಪು. ನಮಗೂ ಕೋಪ ಬರುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)