

ವಿಶ್ವ ಕುಂದಾಪುರ
ಕನ್ನಡ ಲಿಪಿಯಲ್ಲಿ ಪ್ರಕಟವಾದ ಕೊಂಕಣಿಯ ಪ್ರಪ್ರಥಮ ಸಾಮಾಜಿಕ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಜನಮನ್ನಣೆ ಗಳಿಸಿದ್ದ ‘ಆಂಜೆಲ್’, 2025ರಲ್ಲಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಜೊಕಿಂ ಸಂತಾನ್ ಆಲ್ವರಿಸ್ ಲೇಖನಿಯಿಂದ ಮೂಡಿಬಂದು 1950ರಲ್ಲಿ ಪ್ರಕಟವಾದ ಈ ಕಾದಂಬರಿ ಸಾಮಾಜಿಕ ನೆಲೆಯಲ್ಲಿ ಈಗಲೂ ಪ್ರಸ್ತುತವಾಗಿದ್ದು ಕರ್ನಾಟಕದ ಕೊಂಕಣಿ ಸಾಹಿತ್ಯ ವಲಯ ಅದರ 75ನೇ ವರ್ಷವನ್ನು ವೈವಿಧ್ಯಮಯವಾಗಿ ಆಚರಿಸುತ್ತಿದೆ. ದ್ವಿತೀಯ ವಿಶ್ವ ಸಮರದ ಹಿನ್ನೆಲೆಯಲ್ಲಿ ಯುದ್ಧದಿಂದಾಗುವ ಅನಾಹುತ, ಸಾಮಾಜಿಕ ತಲ್ಲಣ ಹಾಗೂ ಪಲ್ಲಟಗಳನ್ನು ಪಡಿಮೂಡಿಸುತ್ತಾ, ಕೌಟುಂಬಿಕ ಜೀವನದ ಒತ್ತಡಗಳನ್ನು ನಿವಾರಿಸುವ ಮಹಿಳೆಯೊಬ್ಬಳ ಸಂಘರ್ಷಮಯ ಯತ್ನವನ್ನು ಚಿತ್ರಿಸಿದ್ದ ‘ಆಂಜೆಲ್’, ಇಳೆಯ ನಾನಾ ಭಾಗಗಳಲ್ಲಿ ಆಗಾಗ ಸಂಘರ್ಷಗಳು ಸ್ಪೋಟಗೊಂಡು ಜಗತ್ತು ಮೂರನೇ ಮಹಾ ಯುದ್ಧಕ್ಕೆ ಅಣಿಯಾಗುತ್ತಿದೆಯೇನೋ ಎಂಬ ಆತಂಕಕಾರಿ ಸನ್ನಿವೇಶದಲ್ಲಿರುವ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ಕೊಂಕಣಿ ಸಾಹಿತ್ಯ ವಿರಳವಾಗಿದ್ದ ಆ ಕಾಲದಲ್ಲಿ ಜೊ.ಸಾ. ಆಲ್ವರಿಸ್ ಬರೆದಿದ್ದ ಈ ಕಾದಂಬರಿಯ ಪಾತ್ರ ಚಿತ್ರಣ ಮತ್ತು ವಿಷಯ ವಿವರಣೆಯು ಉನ್ನತ ಮಟ್ಟದಲ್ಲಿತ್ತೆನ್ನುವುದು ಗಮನಾರ್ಹವಾಗಿದೆ.
ಭಾರತೀಯ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ಪಡೆದಿರುವ ಕೊಂಕಣಿ ಭಾಷೆ ಮಾತನಾಡುವ ನಾನಾ ಧರ್ಮಗಳಿಗೆ ಸೇರಿದ ಲಕ್ಷಾಂತರ ಜನರು ಕರ್ನಾಟಕದಲ್ಲಿ, ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿದ್ದು, ಕೊಂಕಣಿ ಭಾಷೆ ಹಾಗೂ ಸಾಹಿತ್ಯದ ಪ್ರಗತಿಗೆ ಸರ್ಕಾರಿ ಬೆಂಬಲವೂ ಸಿಗುತ್ತಿದೆ. ಅದರ ಮೂರ್ತರೂಪವಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇದೀಗ ‘ಆಂಜೆಲ್’ನಂಥ ಸಾಮಾಜಿಕ ಮಹತ್ವದ ಕಾದಂಬರಿಯನ್ನು ಇಂಗ್ಲಿಷ್ ಹಾಗೂ ಕನ್ನಡ ಸಹಿತ ಹಲವು ಭಾರತೀಯ ಭಾಷೆಗಳಿಗೆ ತರ್ಜುಮೆ ಮಾಡುವ ಯೋಜನೆಯೊಂದನ್ನು ರೂಪಿಸಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷಾಂತರ ಕಾರ್ಯ ಪ್ರಗತಿಯಲ್ಲಿದೆ ಎಂದು ಅಕಾಡೆಮಿ ಅಧ್ಯಕ್ಷ ಜೊಕಿಂ ಸ್ಟಾ್ಯನ್ಲಿ ಆಲ್ವರಿಸ್ ‘ವಿಜಯವಾಣಿ’ಗೆ ವಿವರಿಸಿದ್ದಾರೆ. ಅಕಾಡೆಮಿಯು ಸಾಫ್ಟ್ವೇರ್ ತಜ್ಞ ಕೇರನ್ ಮಾಡ್ತಾ ಮೂಲಕ ಅದನ್ನು ಇ-ಬುಕ್ ರೂಪಕ್ಕೆ ಅಣಿಗೊಳಿಸಿದ್ದು ಯುವ ಪೀಳಿಗೆಯ ಸಾಹಿತ್ಯ ಪ್ರಿಯರಿಗೆ ಮಾಹಿತಿ ತಂತ್ರಜ್ಞಾನದ ಮೂಲಕ ಲಭ್ಯವಾಗುವಂತೆಯೂ ಮಾಡಿದೆ.
ಪತ್ರಕರ್ತ ಜೊಸಾ: ‘ಜೊಸಾ’, ‘ಜೊಸ್ಯಾ’, ‘ಜೊ ಸಾ ಆಲ್ವರಿಸ್’ ಮುಂತಾದ ಕಾವ್ಯನಾಮಗಳಿಂದಲೂ ಪ್ರಸಿದ್ಧರಾಗಿದ್ದ ಜೊಕಿಂ ಸಂತಾನ್ ಆಲ್ವರಿಸ್, ‘ಮಿತ್ರ್’ ಹಾಗೂ ‘ಝೆಲೊ’ ಎಂಬೆರಡು ನಿಯತಕಾಲಿಕೆಗಳ ಮುಖಾಂತರ ಕೊಂಕಣಿ ಸಾಹಿತ್ಯದ ವಿಸ್ತರಣೆಗಾಗಿ ಶ್ರಮಿಸಿದ್ದರು. ಜೊಸಾ ಲೇಖನಿಯಿಂದ ಹಲವು ಕಾದಂಬರಿ, ಕಥಾಗುಚ್ಛ, ಲೇಖನಮಾಲೆ ಹಾಗೂ ನಾಟಕಗಳು ಮೂಡಿಬಂದಿವೆ. ‘ಮ್ಹಜ್ಯಾ ಜೀವಿತಾಚಿ ಕಥಾ’ (ನನ್ನ ಜೀವನದ ಕಥೆ) ಜೊಸ್ಯಾರ ಆತ್ಮಕಥನವಾಗಿದೆ.
ನಾನಾ ಲಿಪಿಗಳು: ಕೊಂಕಣಿಗೆ ಇನ್ನೂ ಸರ್ವಮಾನ್ಯ ಲಿಪಿ ರೂಪುಗೊಂಡಿಲ್ಲದ ಕಾರಣ ನಾನಾ ಲಿಪಿಗಳ ಮೂಲಕ ಕೊಂಕಣಿ ಬರೆವಣಿಗೆ ಕಾರ್ಯ ನಡೆಯುತ್ತಿದ್ದು ಭಾಷಾ ಸಾಮರಸ್ಯಕ್ಕೊಂದು ಅಪೂರ್ವ ಮಾದರಿಯಾಗಿದೆ. ಗೋವಾದಲ್ಲಿ ದೇವನಾಗರಿ ಜತೆ ರೋಮನ್ ಲಿಪಿಯೂ ಬಳಕೆಯಲ್ಲಿದೆ. ಕರ್ನಾಟಕದಲ್ಲಿ ಕನ್ನಡ ಹಾಗೂ ಕೇರಳದಲ್ಲಿ ಮಲಯಾಳಂ ಲಿಪಿ ಮೂಲಕ ಕೊಂಕಣಿ ಅಭಿವ್ಯಕ್ತಿಯಾಗುತ್ತದೆ. ಮಹಾರಾಷ್ಟ್ರದಲ್ಲಿಯೂ ನಾಗರಿ ಲಿಪಿಯನ್ನು ಬಳಸುತ್ತಾರೆ.