ನಿರೂಪಣೆ ನೀವಿಲ್ಲದೆ ಅಪೂರ್ಣ… ಅಚ್ಚ ಕನ್ನಡದ ಸ್ವಚ್ಛ ಧ್ವನಿ ಅಪರ್ಣ ನೆನೆದ ಅನುಶ್ರೀ ಭಾವುಕ ನುಡಿ

ವಿಜಯವಾಣಿ - 2024-07-12T081113.310
Published on

ಬೆಂಗಳೂರು: ಪುಟ್ಟಣ್ಣ ಕಣಗಲ್ ಅವರ ಮಸಣದ ಹೂವು ಚಿತ್ರದಲ್ಲಿ ನಟಿಸಿ, ಕನ್ನಡ ಅಭಿಮಾನಿಗಳ ಮನಗೆದ್ದ ಹಿರಿಯ ನಟಿ, ನಿರೂಪಕಿ ಅಪರ್ಣ ವಸ್ತಾರೆ (58) ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ​ಅಚ್ಚ ಕನ್ನಡದ ಸ್ವಚ್ಛ ಧ್ವನಿಯಾಗಿದ್ದ ಅಪರ್ಣ ಅವರು ನಿನ್ನೆ (ಜುಲೈ 11) ತಡರಾತ್ರಿ ತಮ್ಮ ಬನಶಂಕರಿ ನಿವಾಸದಲ್ಲಿ ಕೊನೆಯಿಸಿರೆಳೆದಿದ್ದಾರೆ. ಮರೆಯಾದ ಕನ್ನಡದ ಧ್ರುವತಾರೆಯನ್ನು ನೆನೆದು ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಶ್ವಾಸಕೋಶ ಕ್ಯಾನ್ಸರ್​ನಿಂದ ಅಪರ್ಣ ಅವರು ಮೃತಪಟ್ಟಿರುವ ಸುದ್ದಿ ಕೇಳಿ ಕಲಾವಿದರು, ಅಭಿಮಾನಿಗಳು ಅಚ್ಚರಿಗೊಳಗಾಗಿದ್ದು, ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ. ಚಿತ್ರರಂಗದ ನಟ-ನಟಿಯರು, ರಾಜಕೀಯ ಗಣ್ಯರು ಅಪರ್ಣ ಅವರ ಸಾವಿನ ಸುದ್ದಿಗೆ ಸಂತಾಪ ಸೂಚಿಸಿದ್ದಾರೆ. ತಮ್ಮ ನೆಚ್ಚಿನ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಕಳೆದುಕೊಂಡ ನಿರೂಪಕಿ ಅನುಶ್ರೀ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರೊಂದಿಗಿದ್ದ ವಿಡಿಯೋ ತುಣುಕನ್ನು ಹಂಚಿಕೊಳ್ಳುವ ಮೂಲಕ ಭಾವುಕ ನಮನ ಸಲ್ಲಿಸಿದ್ದಾರೆ.

"ನಿರೂಪಣೆಗೆ ಘನತೆ ನೀವು, ಕನ್ನಡಕ್ಕೆ ಶೋಭೆ ನೀವು, ನಿರೂಪಣೆ ನೀವಿಲ್ಲದೆ ಅಪೂರ್ಣ ಅಪರ್ಣ..ಅಕ್ಕ. ಬಿಗ್ ಬಾಸ್​ ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿಯಾದ ಕ್ಷಣ ಇಂದಿಗೂ ಹಸಿರಾಗಿದೆ. ಅಂದು ಇಂದು ಎಂದೆಂದೂ ಕನ್ನಡಕ್ಕೆ ಒಬ್ಬರೇ ಮಾಹಾ ನಿರೂಪಕಿ, ಅದು ನೀವು, ಓಂ ಶಾಂತಿ" ಎಂದು ಬರೆದುಕೊಳ್ಳುವ ಮೂಲಕ ಅನುಶ್ರೀ ಭಾವುಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net