ಗುಜರಾತ್: ಕನ್ನಡದ ಹಿರಿಯ ನಟ ಅನಂತ್ ನಾಗ್ (Anant Nag ) ಅವರಿಗೆ 2024ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಇಂದು ಗುಜರಾತ್‌ನ ಏಕ್ತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು. ಐದು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಈ ಗೌರವವನ್ನು ನೀಡಿದೆ.
1995ರಲ್ಲಿ 'ವರನಟ' ಡಾ. ರಾಜ್‌ಕುಮಾರ್ ಪ್ರಶಸ್ತಿ ಪಡೆದ ಬಳಿಕ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ ಎರಡನೇ ಕನ್ನಡದ ನಟ ಅನಂತ್ ನಾಗ್ ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಅನಂತ್ ಅವರಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ವಿಶೇಷ. ಪ್ರಶಸ್ತಿ ಪಡೆದ ನಂತರ ಮನಬಿಚ್ಚಿ ಮಾತನಾಡಿದ ಅವರು, "ಈ ಮನ್ನಣೆಯನ್ನು ನಿರ್ಮಾಪಕರು, ನಿರ್ದೇಶಕರಿಗೆ ಮತ್ತು ದಶಕಗಳಿಂದ ತಮ್ಮ ಪಾತ್ರಗಳನ್ನು ಸ್ವೀಕರಿಸಿದ ಕೋಟಿ ವೀಕ್ಷಕರಿಗೆ ಅರ್ಪಿಸುತ್ತೇನೆ. ಹಲವಾರು ಭಾಷೆಗಳಲ್ಲಿ ನಟಿಸಿದ್ದರೂ, ಹೆಚ್ಚು ಪ್ರೀತಿ, ಗೌರವ ಸಿಕ್ಕಿದ್ದು ಕರ್ನಾಟಕದಲ್ಲಿ" ಎಂದು ಸಂತಸ ವ್ಯಕ್ತಪಡಿಸಿದರು.
"ಈ ಕಾರ್ಯಕ್ರಮದ ಹಿರಿಮೆಯನ್ನು ಸೆರೆಹಿಡಿಯಲು ನಾನು ಪ್ರಯತ್ನಿಸುತ್ತಿದ್ದೇನೆ. ಇಂದು ಇಲ್ಲಿಗೆ ಬಂದಿರುವುದು ನನಗೆ ತುಂಬಾ ಸಂತೋಷ ತಂದಿದೆ. ನಾನು ನಟನಾಗಿ ನಟಿಸುವುದನ್ನು ನೀವು ನೋಡಿದ್ದೀರಿ. ನಾನು ಆಶ್ರಮದಲ್ಲಿ ಬೆಳೆದವನು. ನನ್ನ ಬಾಲ್ಯದ 12 ವರ್ಷ ವಯಸ್ಸಿನವರೆಗೂ ಅಲ್ಲಿಯೇ ಇದ್ದೆ. ಮುಂಬೈನಲ್ಲಿ ನನಗೆ ನಾಟಕದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಸಂದರ್ಭದಲ್ಲಿ ನಾನು ಶ್ರೀ ಆದಿ ಶಂಕರಾಚಾರ್ಯರ ಸಾಲುಗಳನ್ನು ಉಲ್ಲೇಖಿಸಲು ಬಯಸುತ್ತೇನೆ. ಭಾರತ ನನ್ನ ಜನ್ಮಭೂಮಿ, ಕರ್ನಾಟಕವೇ ನನ್ನ ಕರ್ಮಭೂಮಿ, ಭಾರತವೂ ನನ್ನ ಧರ್ಮಭೂಮಿ’’ ಎಂದು ಹೇಳಿದರು.
4 ಸೆಪ್ಟೆಂಬರ್ 1948ರಂದು ಜನಿಸಿದ ಅನಂತ್ ನಾಗ್ ಅವರು ಮುಂಬೈನಲ್ಲಿ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡರು. 1970ರ ದಶಕದ ಆರಂಭದಲ್ಲಿ ನಟನಾ ವೃತ್ತಿಯನ್ನು ಪ್ರವೇಶಿಸಿದ ಅವರು, 1973ರಲ್ಲಿ ಕನ್ನಡದ ‘ಸಂಕಲ್ಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಶ್ಯಾಮ್ ಬೆನಗಲ್ ಅವರ ಅಂಕುರ್ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಇದು ಭಾರತದಲ್ಲಿ ಸಮಾನಾಂತರ ಸಿನಿಮಾ ಚಳವಳಿಯಲ್ಲಿ ಪ್ರಮುಖ ಚಿತ್ರವಾಗಿ ಹೊರಹೊಮ್ಮಿತು. ಬೆನಗಲ್ ಅವರ ‘ಮಂಥನ್’ ಮತ್ತು ‘ಭೂಮಿಕಾ’ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ.
ಅನಂತ್ ನಾಗ್ ಅವರ ವೃತ್ತಿಜೀವನವು ನಂತರ ಭಾರತೀಯ ಚಿತ್ರೋದ್ಯಮಕ್ಕೆ ವಿಸ್ತಾರಗೊಂಡಿತು. 'ಬಯಲು ದಾರಿ', 'ಕನ್ನೇಶ್ವರ ರಾಮ', 'ನಾ ನಿನ್ನ ಬಿಡಲಾರೆ', 'ಚಂದನದ ಗೊಂಬೆ' ಮತ್ತು 'ಬೆಂಕಿಯ ಬಲೆ' ಮುಂತಾದ ಚಿತ್ರಗಳು ಅವರನ್ನು ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಿತು. ಕನ್ನಡ ಮಾತ್ರವಲ್ಲದೇ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳು ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾಗಳ ಜತೆ ಜತೆಯಲ್ಲೇ ಅಂದಿನ ದೂರದರ್ಶನದ ಜನಪ್ರಿಯ ಸಿರೀಸ್ 'ಮಾಲ್ಗುಡಿ ಡೇಸ್'ನಲ್ಲಿಯೂ ನಟಿಸಿದ್ದಾರೆ. ಆರ್.ಕೆ ನಾರಾಯಣನ್ ಅವರ ಕಥೆಗಳನ್ನು ಆಧರಿಸಿದ ಹಾಗೂ ತಮ್ಮ ಕಿರಿಯ ಸಹೋದರ, ನಟ ಶಂಕರ್ ನಾಗ್ ನಿರ್ದೇಶಿಸಿದ ಸರಣಿ ಇದಾಗಿದೆ. ಹಲವಾರು ಭಾರತೀಯ ಭಾಷೆಗಳಲ್ಲಿ ಪ್ರಸಾರವಾದ ಈ ಧಾರಾವಾಹಿಯ ಮೂಲಕ, ಅವರ ನಟನಾ ಕೌಶಲ್ಯವು ಕನ್ನಡ ಭಾಷೆ, ಚಲನಚಿತ್ರಗಳ ಪರಿಚಯವಿಲ್ಲದ ಅನೇಕ ಪ್ರೇಕ್ಷಕರ ಮನ, ಮನೆಯನ್ನು ತಲುಪಿದ್ದು ಇಂದಿಗೂ ಅವಿಸ್ಮರಣೀಯ.
ಸ್ಟಾರ್ ನಟನಾಗಿ ಮಿಂಚಿದ ಬಳಿಕವು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, 'ಮುಂಗಾರು ಮಳೆ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಗಾಳಿಪಟ', 'ಗೂಗ್ಲಿ' ಮತ್ತು 'ಕೆಜಿಎಫ್'ನಂತಹ ಮುಂತಾದ ಸೂಪರ್ಹಿಟ್ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 'ಕೆಜಿಎಫ್: ಚಾಪ್ಟರ್ 1' ಸಿನಿಮಾದಲ್ಲಿನ ಅವರ ಅಭಿನಯವು ಅನೇಕ ಯುವ ಜನತೆಯ ಮೆಚ್ಚುಗೆಗೆ ಪಾತ್ರವಾಯಿತು. ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಆಯಾ ಪಾತ್ರಗಳಿಗೆ ಜೀವ ತುಂಬಿದ ನಟನಿಗೆ ಕನ್ನಡಿಗರು ಹೃದಯ ತುಂಬಿ ಅಭಿನಂದನೆ ಸಲ್ಲಿಸಿದ್ದಾರೆ.
ಅನಂತ್ ನಾಗ್ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ದಕ್ಷಿಣದ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. ಇನ್ನು, 2025ರಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಈಗ 2024ರ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸಿನಿಮಾ, ದೂರದರ್ಶನ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಸಲ್ಲಿಸಿದ ಸುದೀರ್ಘ ವೃತ್ತಿಜೀವನದ ಸೇವೆಗೆ ನೀಡಿ ಗೌರವಿಸಿರುವುದು ಕನ್ನಡಿಗರಿಗೆ ಹೆಮ್ಮೆ, ಖುಷಿಯ ಕ್ಷಣವಾಗಿದೆ.