

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಆನಂದ್ ಪ್ರಕಾಶ್ ಮಹೇಶ್ವರಿ ಅವರು ಬುಧವಾರ ಜಗತ್ತಿನ ಅತಿದೊಡ್ಡ ಅರೆಸೇನಾ ಪಡೆಯಾಗಿರುವ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್ಪಿಎಫ್)ನ ಹೊಸ ಡೈರೆಕ್ಟರ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮಹೇಶ್ವರಿ ಅವರು 1984ರ ಬ್ಯಾಚಿನ ಉತ್ತರ ಪ್ರದೇಶ ಕೆಡರ್ನ ಅಧಿಕಾರಿ. ಅವರನ್ನು ಸಿಆರ್ಪಿಎಫ್ನ ನೂತನ ಮುಖ್ಯಸ್ಥರನ್ನಾಗಿ ಸರ್ಕಾರ ಜನವರಿ 13ರಂದು ನೇಮಕ ಮಾಡಿತ್ತು. ನಿಕಟಪೂರ್ವ ಡೈರೆಕ್ಟರ್ ಜನರಲ್ ಆರ್.ಆರ್. ಭಟ್ನಾಗರ್ ಅವರ ಸೇವಾವಧಿ ಡಿಸೆಂಬರ್ 31ಕ್ಕೆ ಕೊನೆಗೊಂಡಿತ್ತು. ಹಂಗಾಮಿ ಡಿಜಿ ಆಗಿ ಐಟಿಬಿಪಿ ಡೈರೆಕ್ಟರ್ ಜನರಲ್ ಎಸ್.ಎಸ್.ದೇಸ್ವಾಲ್ ಅವರು ಕಾರ್ಯನಿರ್ವಹಿಸುತ್ತಿದ್ದವರು. ಅವರಿಂದ ಮಹೇಶ್ವರಿ ಅಧಿಕಾರ ಸ್ವೀಕರಿಸಿದ್ದಾರೆ.
ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅವರು ನಿವೃತ್ತರಾಗಲಿದ್ದಾರೆ. ಸಿಆರ್ಪಿಎಫ್ ಆಗಿ ಅಧಿಕಾರವಹಿಸುವ ಮುನ್ನ ಮಹೇಶ್ವರಿ ಅವರು ಗೃಹ ಸಚಿವಾಲಯದಲ್ಲಿ ಆಂತರಿಕ ಸುರಕ್ಷೆಯ ಸ್ಪೆಷಲ್ ಸೆಕ್ರಟರಿಯಾಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ಸಿಆರ್ಪಿಎಫ್ನ ಇನ್ಸ್ಪೆಕ್ಟರ್ ಜನರಲ್ ಮತ್ತು ಡೆಪ್ಯುಟಿ ಐಜಿ ಆಗಿ ಕೆಲಸ ಮಾಡಿದ್ದರು.
ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್(ಬಿಪಿಆರ್ಡಿ)ನ ಮುಖ್ಯಸ್ಥರಾಗಿಯೂ, ಬಾರ್ಡರ್ ಸೆಕ್ಯುರಿಟಿ ಫೋರ್ಸ್ನ ಅಡಿಷನಲ್ ಡಿಜಿ ಆಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸಿಆರ್ಪಿಎಫ್ನಲ್ಲಿ 3.25 ಲಕ್ಷ ಸಿಬ್ಬಂದಿ ಇದ್ದಾರೆ. (ಏಜೆನ್ಸೀಸ್)