

ಆಂಧ್ರಪ್ರದೇಶ: ವಿಜಯ್ ದೇವರಕೊಂಡ ಸಹೋದರ ನಟ ಆನಂದ್ ದೇವರಕೊಂಡ ಮತ್ತು ನಟಿ ವೈಷ್ಣವಿ ಚೈತನ್ಯ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಬೇಬಿ' ಸಿನಿಮಾ ಟಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುವ ಮೂಲಕ ಬಾಕ್ಸ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು.
ಪ್ರೇಕ್ಷಕರ ಕಣ್ಣಂಚಲಿ ನೀರು ತುಂಬಿಸಿದ ಈ ಚಿತ್ರಕ್ಕೆ ಯುವಜನತೆ ಫಿದಾ ಆಗಿದ್ದರು. ಆನಂದ್-ವೈಷ್ಣವಿ ಜೋಡಿ ಮೆಚ್ಚಿದ್ದ ಸಿನಿಪ್ರಿಯರಿಗೆ ಇದೀಗ ಮತ್ತೊಮ್ಮೆ ಈ ಜೋಡಿಯನ್ನು ಒಟ್ಟಿಗೆ ತೆರೆ ಮೇಲೆ ನೋಡುವ ಸನ್ನಿವೇಶ ಎದುರಾಗಿದೆ.
ಸಾಯಿ ರಾಜೇಶ್ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ 'ಬೇಬಿ' ಸೆನ್ಸೇಷನಲ್ ಹಿಟ್ ಆಗುವುದರ ಜತೆಗೆ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. ಇದೀಗ ಬೇಬಿ ಜೋಡಿಯನ್ನೇ ಮುಂದಿಟ್ಟುಕೊಂಡು ಮತ್ತೊಂದು ರೊಮ್ಯಾಂಟಿಕ್ ಚಿತ್ರಕ್ಕೆ ಕೈ ಹಾಕಿರುವ ರಾಜೇಶ್, ಚಿತ್ರದ ಹೊಸ ಪೋಸ್ಟರ್ ಕೂಡ ಅನಾವರಣಗೊಳಿಸಿದ್ದಾರೆ.
ಬೇಬಿ ಸಿನಿಮಾದಲ್ಲಿ ಇದ್ದ ತಂಡವೇ ಈ ಚಿತ್ರದಲ್ಲೂ ಇರಲಿದೆ ಎಂಬ ಹೇಳಲಾಗಿದ್ದು, ನಿರ್ದೇಶಕ ಸಾಯಿ ರಾಜೇಶ್ ತಮ್ಮ ಮುಂದಿನ ಹೆಸರಿಡದ ರೊಮ್ಯಾಂಟಿಕ್ ಚಿತ್ರಕ್ಕೆ ಸೂಪರ್ ಹಿಟ್ ಜೋಡಿ ವೈಷ್ಣವಿ ಚೈತನ್ಯ ಮತ್ತು ಆನಂದ್ ದೇವರಕೊಂಡ ಅವರಿಗೆ ನಾಯಕ ಮತ್ತು ನಾಯಕಿ ಪಾತ್ರಗಳನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ತಯಾರಕರು ಹೊಸ ಪೋಸ್ಟರ್ ಹಂಚಿಕೊಂಡಿದ್ದು, ಶೀಘ್ರವೇ ಚಿತ್ರದ ಚಿತ್ರೀಕರಣ ಪ್ರಾರಂಭ ಎಂದು ತಿಳಿಸಿದ್ದಾರೆ.
ಹೆಸರಿಡದ ಈ ಚಿತ್ರವನ್ನು ರವಿ ನಂಬೂರಿ ನಿರ್ದೇಶಿಸಲಿದ್ದು, ಮಾಸ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿ ರಾಜೇಶ್ ಮತ್ತು ಎಸ್ಕೆಎನ್ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರ 2024ರ ಏಪ್ರಿಲ್ ಸಮಯದಲ್ಲಿ ರಿಲೀಸ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).