

ತಿ.ನರಸೀಪುರ : ಪರಿಶಿಷ್ಟ ಜಾತಿ ಯಲ್ಲಿನ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ವಿಶೇಷ ಸಚಿವ ಸಂಪುಟ ಸಭೆಯ ನಿರ್ಣಯದಂತೆ ರಾಜ್ಯ ಸರ್ಕಾರ ಶೀಘ್ರವಾಗಿ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಮಾದಿಗ ಸಮುದಾಯದ ಮುಖಂಡರು ಆಗ್ರಹಿಸಿದರು.
ಆ. 19ರಂದು ನಡೆದ ವಿಶೇಷ ಸಚಿವ ಸಂಪುಟದಲ್ಲಿ ಯಾವುದೇ ಅಡತಡೆಗಳಿಗೆ ಸೊಪ್ಪು ಹಾಕದೆ ಒಳ ಮೀಸಲಾತಿ ಜಾರಿಗೆ ದಿಟ್ಟ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿಗಳಿಗೆ ಸಮುದಾಯದ ಪರವಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಸಚಿವ ಸಂಪುಟದ ನಿರ್ಣಯದಂತೆ ವರ್ಗ-ಎ (ಮಾದಿಗ ಸಂಬಂಧಿತ ಜಾತಿಗಳು), ವರ್ಗ-ಬಿ (ಹೊಲೆಯ ಸಂಬಂಧಿತ ಜಾತಿಗಳು ಮತ್ತು ವರ್ಗ-ಸಿ (ಭೋವಿ, ಲಂಬಾಣಿ, ಬಂಜಾರ)ರಂತೆ ವಿಂಗಡಿಸಿ ಸರ್ಕಾರದ ಟಿಪ್ಪಣಿಯ ಜತೆ ಯಾವುದೇ ಅಧಿಕೃತ ದಾಖಲಾತಿ ಇದುವರೆವಿಗೂ ಬಿಡುಗಡೆಗೊಂಡಿಲ್ಲ. ಹಾಗಾಗಿ ಈ ಬಗ್ಗೆ ಮಾದಿಗ ಸಮುದಾಯ ಆತಂಕಗೊಂಡಿದ್ದು, ಸರ್ಕಾರ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಶೀಘ್ರವೇ ಸಚಿವ ಸಂಪುಟದ ನಿರ್ಣಯದಂತೆ ಸುಗ್ರೀವಾಜ್ಞೆ ಹೊರಡಿಸಿ ಆದೇಶ ಬಿಡುಗಡೆಗೊಳಿಸಬೇಕು ಎಂದು ಸಾಮಾಜಿಕ ನ್ಯಾಯಪರ ವೇದಿಕೆ ಜಿಲ್ಲಾ ಮುಖಂಡ ಮರಡೀಪುರ ಡಾ.ರವಿಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಾದಿಗ ಜನಾಂಗ ಅನಾದಿಕಾಲದಿಂದಲೂ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಶೋಷಣೆಗೆ ಗುರಿಯಾಗಿದ್ದು, ಇತ್ತೀಚಿಗೆ ರಾಜ್ಯದಲ್ಲಿ ಕೆ-ಸೆಟ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ವರ್ಷವೂ ಕೆ-ಸೆಟ್ ನಲ್ಲಿ ನಮ್ಮ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ನಮ್ಮ ಪಾಲಿನ ಮೀಸಲಾತಿ ನಮಗೆ ದಕ್ಕಿದ್ದರೆ ರಾಜ್ಯಾದ್ಯಂತ ನಮ್ಮ ಜನಾಂಗದ ಹಲವು ಪದವೀಧರರು ಪ್ರಾಧ್ಯಾಪಕ, ಉಲನ್ಯಾಸಕರಾಗುತ್ತಿದ್ದರು. ಅಲ್ಲದೆ ಸಿಟಿ ಕೋ ಆಪರೇಟಿವ್ ಸೊಸೈಟಿಯಲ್ಲೂ ಹಲವು ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಆದ್ದರಿಂದ ಒಳಮೀಸಲಾತಿ ಘೋಷಣೆ ಮಾಡಿದರೆ ಸಾಲದು, ತುರ್ತು ವಿಶೇಷ ಅಧಿವೇಶನ ಕರೆದು ಅನುಷ್ಠಾನವಾದರೆ ನಮ್ಮ ಸಮುದಾಯಕ್ಕೆ ನ್ಯಾಯ ಸಿಗಲಿದೆ ಎಂದರು.
ಮಾದಿಗ ಸಮುದಾಯಕ್ಕೆ ಶೇ.6 ಒಳ ಮೀಸಲಾತಿ ಸಿಕ್ಕಿದೆ ಎಂದು ಸಂತೋಷಗೊಂಡಿಲ್ಲ. ಅಲೆಮಾರಿ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದೆ. ನ್ಯಾ.ನಾಗಮೋಹನ್ ದಾಸ್ ವರದಿಯಂತೆ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಶೇ.1 ಮೀಸಲಾತಿ ನೀಡುವಂತೆ ರಾಜ್ಯ ಮಾದಿಗರ ಸಂಘಟನೆಗಳು ಒತ್ತಾಯಿಸುತ್ತದೆ. ಅವರಿಗೆ ಪ್ರತ್ಯೇಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ವಸತಿ ನಿಲಯಗಳು, ಜಿಲ್ಲಾವಾರು ಸರ್ಕಾರಿ ಜಾಗಗಳನ್ನು ಗುರುತಿಸಿ ವಸತಿಗಳನ್ನು ನೀಡುವುದು, ಅವರಿಗೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಒಳ ಮೀಸಲಾತಿ ಹೋರಾಟಗಾರ ಹುಣಸೂರು ರಾಚಪ್ಪ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಎಲ್.ಮಂಜುನಾಥ್, ದಸಂಸ ಜಿಲ್ಲಾ ಸಂಚಾಲಕ ಬೆಳ್ಳಿಯಪ್ಪ, ಮುಖಂಡರಾದ ಗೋಪಾಲಪುರ ಬಿ.ಮಂಜುನಾಥ್, ಕೆಬ್ಬೆ ಪ್ರಸಾದ್, ಕೇತಹಳ್ಳಿ ಮಹದೇವ, ಸಿದ್ದನಹುಂಡಿ ಗೋಪಿ, ರೈತ ಮುಖಂಡ ಕಳ್ಳಿಪುರ ನಾರಾಯಣ ಹಾಗೂ ಇತರರು ಇದ್ದರು.