ನಮೋ ಭಾರತ ಕಾರ್ಯಕ್ರಮಕ್ಕೆ ಅಡ್ಡಿ

sulibele
ಕಿಡಿಗೇಡಿಗಳನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಕರೆದೊಯ್ಯುತ್ತಿರುವುದು.
Published on

ಚಿಕ್ಕಮಗಳೂರು: ನಗರದ ವಿಜಯಪುರದ ಗಣಪತಿ ಪೆಂಡಾಲ್ನಲ್ಲಿ ನಮೋ ಬ್ರಿಗೇಡ್‌ನಿಂದ ಗುರುವಾರ ಆಯೋಜಿಸಿದ್ದ ನಮ್ಮ ಭಾರತ ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡುವಾಗ ಕಿಡಿಗೇಡಿಗಳು ಅಡ್ಡಿಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಷಣ ಆರಂಭಿಸುತ್ತಿದ್ದಂತೆ ಪಕ್ಕದ ಬಿಲ್ಡಿಂಗ್ ಹತ್ತಿದ್ದ ಕಿಡಿಗೇಡಿಗಳು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಘೋಷಣೆ ಕೂಗಿದ್ದಾರೆ. ಸೂಲಿಬೆಲೆ ವಿರುದ್ಧ ಬರಹಗಳಿದ್ದ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಾರೆ. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಅರ್ಧ ತಾಸಿಗೂ ಹೆಚ್ಚು ಕಾಲ ಕಾರ್ಯಕ್ರಮ ಸ್ಥಗಿತವಾಗಿತ್ತು.
ಬ್ಯಾನರ್ ಪ್ರದರ್ಶನಕ್ಕೆ ಮುಂದಾದವರನ್ನು ಥಳಿಸಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಮುಂದಾದಾಗ ಅವರು ತಪ್ಪಿಸಿಕೊಂಡು ದೊಡ್ಡ ಕಟ್ಟಡ ಹತ್ತಿ ಅವಿತುಕೊಂಡಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಕಿಡಿಗೇಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಹಾಗೂ ನಮೋ ಬ್ರಿಗೇಡ್ ಪ್ರಮುಖರು ಪೊಲೀಸರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರು ಕಿಡಿಗೇಡಿಗಳಿಗೆ ಸಹಕಾರ ನೀಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಅಡ್ಡಿ ಮಾಡುತ್ತಾರೆ ಎಂಬುದು ಗೊತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪು ಪಟ್ಟಿ ಪ್ರದರ್ಶನ: ಚಕ್ರವರ್ತಿ ಸೂಲಿಬೆಲೆ ಅವರು ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಮೋ ಭಾರತ ಕಾರ್ಯಕ್ರಮದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿದರು. ಇನ್ನೇನು ಕಾರ್ಯಕ್ರಮ ಆರಂಭವಾಗಬೇಕು ಎನ್ನುವಾಗ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಸೂಲಿಬೆಲೆ ವಿರುದ್ಧ ಘೋಷಣೆ ಕೂಗಿ ಕಪ್ಪುಪಟ್ಟಿ ಪ್ರದರ್ಶಿಸಿದರು. ಕೂಡಲೇ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net