ಜೋರಾದ ಪೋಸ್ಟರ್ ವಾರ್..!

ಎಚ್‌ಡಿಕೆಯಿಂದ ಹಳ್ಳಿ ಗುಗ್ಗು ಏನೀಗಾಗೆ ಖರ್ಗೆ ಕೌಂಟರ್, ಬಲಿತ ದಲಿತನೇ ಸುಮಾರಣ್ಣ ಎಂಬ ಬ್ಯಾನರ್
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ ಕಾಂಗ್ರೆಸ್ ಯುವ ಘಟಕದಿಂದ ಪೋಸ್ಟರ್
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ ಕಾಂಗ್ರೆಸ್ ಯುವ ಘಟಕದಿಂದ ಪೋಸ್ಟರ್
Published on: 

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಬ್ಯಾನರ್, ಪೋಸ್ಟರ್ ವಾರ್ ಜೋರಾಗಿದೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ ಕಾಂಗ್ರೆಸ್ ಯುವ ಘಟಕದಿಂದ ಪೋಸ್ಟರ್ ಅಂಟಿಸಲಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಕೌಂಟರ್ ನೀಡಿ, ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ ಎಂಬ ಬರಹಗಳು ಪೋಸ್ಟರ್‌ನಲ್ಲಿವೆ.

ಶೇಷಾದ್ರಿಪುರದಲ್ಲಿರುವ ಜೆಡಿಎಸ್ ಕಚೇರಿ ಬಳಿ, ಓಕಳಿಪುರ, ಮೆಜೆಸ್ಟಿಕ್‌ನಲ್ಲೂ ಯುವ ಕಾಂಗ್ರೆಸ್ ಕಾರ್ಯಕರ್ತರು ರಾತ್ರೋರಾತ್ರಿ ಪೋಸ್ಟರ್ ಅಂಟಿಸಿದ್ದಾರೆ. ಪ್ರಿಯಾಂಕ್ ಖರ್ಗೆ ನೀಡಿದ್ದ ಹಳ್ಳಿ ಗುಗ್ಗು ಹೇಳಿಕೆ ಖಂಡಿಸಿ ಹಾಸನ, ರಾಮನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಹಿಂದೆ ಪೋಸ್ಟರ್ ಅಂಟಿಸಿದ್ದರು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಚಾರ ಸಹ ಮಾಡಿದ್ದರು. ಅದಕ್ಕೆ ಕೌಂಟರ್ ಆಗಿ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಮರ ಮತ್ತಷ್ಟು ತಾರಕಕ್ಕೇರಿದೆ. ತಡರಾತ್ರಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬೆಂಗಳೂರಿನ ಮತ್ತು ಶಿವಮೊಗ್ಗದ ವಿದ್ಯಾನಗರದ ನಿವಾಸ ಹಾಗೂ ದೀನ್ ದಯಾಳ್ ರಸ್ತೆಯಲ್ಲಿ ಇರುವ ಬಿಜೆಪಿ ಜಿಲ್ಲಾ ಕಚೇರಿಗೆ ಅವಹೇಳನಕಾರಿ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಪ್ರಚೋದನಕಾರಿ ಘೋಷಣೆಗಳಿದ್ದು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ಮೃದು ಧೋರಣೆ ಅನುಸರಿಸುತ್ತಿದೆ. ಪೋಸ್ಟರ್ ಅಂಟಿಸಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿಯ ಕಾರ್ಯಕರ್ತರು ವಿವಿಧೆಡೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.