ದುಬೈನಲ್ಲಿ ಕುಳಿತು ಮಾದಕ ದಂಧೆ: ತಾಯಿ,ಮಗಳು ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲು

Crime Logo
Published on

ಬೆಂಗಳೂರು: ದುಬೈನಲ್ಲಿದ್ದುಕೊಂಡು ನಗರದಲ್ಲಿ ಮಾದಕ ಸರಬರಾಜು ದಂಧೆಯಲ್ಲಿ ತೊಡಗಿರುವ ಆರೋಪದ ಮೇರೆಗೆ ತಾಯಿ, ಮಗಳು ಸೇರಿದಂತೆ ಮೂವರು ವಿರುದ್ಧ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ತಮ್ಮ ೨೩ ವರ್ಷದ ಮಗನಿಗೆ ಮಾದಕ ಪದಾರ್ಥಗಳನ್ನು ಸರಬರಾಜು ಮಾಡಿ ಒತ್ತಾಯಪೂರ್ವಕವಾಗಿ ಸೇವನೆ ಮಾಡಿಸಿದ್ದಾರೆ ಎಂದು ಆರೋಪಿಸಿ ಯಲಹಂಕ ಜಕ್ಕೂರಿನಲ್ಲಿ ವಾಸವಾಗಿರುವ ಉದ್ಯಮಿ ಅಯಾಝ್ ಮಹಮೂದ್ ನೀಡಿರುವ ದೂರಿನನ್ವಯ ಯುಎಇ ಮೂಲದ ಲೀನಾ ಇವರ ಮಗಳಾದ ನಥಾಲಿಯಾ ವಿರ್ವಾನಿ ಹಾಗೂ ನಗರದ ರಂಜನ್ ಎಂಬಾತನ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಾದ ನಥಾಲಿಯಾ ವಿರ್ವಾನಿ ಹಾಗೂ ಲೀನಾ ದುಬೈನಲ್ಲಿ ನೆಲೆಸಿದ್ದು, ನಗರದ ಸ್ಥಳೀಯ ವ್ಯಕ್ತಿಯಾಗಿರುವ ರಂಜನ್ ಎಂಬಾತನ ಮೂಲಕ ಹೈಡ್ರೋ ಗಾಂಜಾ, ಎಂಡಿಎಂಎ ಮಾದಕ ಪದಾರ್ಥಗಳನ್ನ ಸರಬರಾಜು ಮಾಡಿಸುತ್ತಿದ್ದಾರೆ. ದುಬೈ ಹಾಗೂ ಬೆಂಗಳೂರಿನ ನಡುವೆ ಆಗಾಗ ಸಂಚರಿಸುವ ನಥಾಲಿಯಾ, ಮಾದಕ ದಂಧೆಯಿಂದ ಗಳಿಸುವ ಹಣವನ್ನು ಪಡೆಯಲು ಖಾಸಗಿ ಬ್ಯಾಂಕ್ ಖಾತೆ ಹೊಂದಿದ್ದಾಳೆ. ಆರೋಪಿಗಳು ತಮ್ಮ ೨೩ ವರ್ಷ ವಯಸ್ಸಿನ ಮಗನಿಗೆ ಒತ್ತಾಯಪೂರ್ವಕವಾಗಿ ಮಾದಕ ಪದಾರ್ಥಗಳನ್ನ ಸೇವಿಸುವಂತೆ ಮಾಡಿದ್ದಾರೆ ಎಂದು ದೂರುದಾರ ಉದ್ಯಮಿ ಆರೋಪಿಸಿದ್ದಾರೆ.
ನೋಟಿಸ್ ನೀಡಲಿರುವ ಸಿಸಿಬಿ:
ದೂರಿನನ್ವಯ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿತರ ಕುರಿತು ವಿವರಗಳನ್ನು ಕಲೆಹಾಕಲಾಗುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದೇವೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net