

ನವದೆಹಲಿ: ಕರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಹೇರಲಾಗಿರುವ ಲಾಕ್ಡೌನ್ನಿಂದಾಗಿ ಇಡೀ ದೇಶದ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ಪ್ರತಿದಿನ ಸುಮಾರು 4.64 ಬಿಲಿಯನ್ ಡಾಲರ್ (ಸುಮಾರು 35 ಸಾವಿರ ಕೋಟಿ ರೂ.) ನಷ್ಟವಾಗುತ್ತಿದೆ.
21 ದಿನಗಳಲ್ಲಿ ಭಾರತಕ್ಕೆ ಆಗಲಿರುವ ಒಟ್ಟು ನಷ್ಟ 98 ಬಿಲಿಯನ್ ಡಾಲರ್ (7.35 ಲಕ್ಷ ಕೋಟಿ ರೂ.) ಎಂದು ಅಕ್ಯೂಟ್ ರೇಟಿಂಗ್ಸ್ ಮತ್ತು ಸಂಶೋಧನಾ ಸಂಸ್ಥೆ ಗುರುವಾರ ಅಂದಾಜು ಮಾಡಿದೆ. ಏಪ್ರಿಲ್ 15ರಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ತೆರವು ಮಾಡಲಾಗುತ್ತದೆ. ಆದರೆ ಆರ್ಥಿಕ ಚಟುವಟಿಕೆಗಳು ದೀರ್ಘ ಕಾಲದ ವರೆಗೆ ಅಸ್ತವ್ಯಸ್ತಗೊಳ್ಳುವುದು ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಅವಲಂಬಿಸಿರುತ್ತದೆ. ಪ್ರಸ್ತುತ ದೇಶ ಹಾಗೂ ಜಗತ್ತಿನಾದ್ಯಂತ ಆರ್ಥಿಕತೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ.
2020ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈಗಾಗಲೇ ಭವಿಷ್ಯ ನುಡಿದಿದೆ. 2020-21ನೇ ಆರ್ಥಿಕ ವರ್ಷದ ಏಪ್ರಿಲ್-ಜೂನ್ ಅವಧಿಯ ಜಿಡಿಪಿಯಲ್ಲಿ (ಒಟ್ಟು ದೇಶೀಯ ಉತ್ಪನ್ನ) ಕುಸಿತವಾಗುವ ಸಂಭವಿಸಲಿದೆ ಎಂದು ಅಕ್ಯೂಟ್ ರೇಟಿಂಗ್ಸ್ ಆತಂಕ ವ್ಯಕ್ತಪಡಿಸಿದೆ.
ಪರಿಸ್ಥಿತಿ ಸುಧಾರಿಸಿದರೆ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಸ್ವಲ್ಪ ಬೆಳವಣಿಗೆ ಆಗಬಹುದು ಎಂದು ಅಕ್ಯೂಟ್ ಸಿಇಒ ಶಂಕರ್ ಚಕ್ರವರ್ತಿ ಹೇಳಿದ್ದಾರೆ. ಕೈಗಾರಿಕಾ ಚಟುವಟಿಕೆಗಳ ಮೇಲೆ ಲಾಕ್ಡೌನ್ ಪರಿಣಾಮ ತೀವ್ರವಾಗಿದ್ದು ಔಷಧ, ಅನಿಲ, ವಿದ್ಯುತ್ ಮತ್ತು ವೈದ್ಯಕೀಯ ಸಲಕರಣೆಗಳ ಕ್ಷೇತ್ರ ಬಿಟ್ಟು ಉಳಿದ ಎಲ್ಲ ವಲಯಗಳಲ್ಲಿ ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆ ಕುಂಠಿತವಾಗಲಿದೆ.