NASA Asteroid Bennu: 450 ಕೋಟಿ ವರ್ಷಗಳ ಹಳೆಯ ರಹಸ್ಯ ಬಿಚ್ಚಿಟ್ಟ ಬೆನ್ನು ಕ್ಷುದ್ರಗ್ರಹ! ಸೌರಮಂಡಲದ ಸೃಷ್ಟಿಗೆ 'ಗುರು' ಕಾರಣವೇ?

NASA Asteroid Bennu
ಬೆನ್ನು ಕ್ಷುದ್ರಗ್ರಹದ ಅಚ್ಚರಿಯ ಸತ್ಯ
Published on: 
Summary

2023ರಲ್ಲಿ ನಾಸಾದ ಒಸಿರಿಸ್‌-ರೆಕ್ಸ್‌ ನೌಕೆ ಭೂಮಿಗೆ ತಂದ ಬೆನ್ನು ಕ್ಷುದ್ರಗ್ರಹದ ಮಣ್ಣಿನ ಪರೀಕ್ಷೆ

4.5 ಶತಕೋಟಿ ವರ್ಷಗಳ ಹಿಂದೆ ಸೌರಮಂಡಲ ರೂಪುಗೊಳ್ಳುವಲ್ಲಿ ಗುರುಗ್ರಹದ ಪ್ರಮುಖ ಪಾತ್ರ

ಕಲ್ಲು-ಮಣ್ಣಿನ ಕಣಗಳ ಐಸೊಟೋಪ್ ಪತ್ತೆ ಹಚ್ಚಿದ ಇಟಿಎಚ್ ಜ್ಯೂರಿಚ್ ವಿಜ್ಞಾನಿಗಳು.

ಭೂಮಿ, ಗ್ರಹಗಳ ಸೃಷ್ಟಿಗೆ ಮೂಲ ಧಾತುಗಳು ಹೇಗೆ ಒಂದಾದವು ಎಂಬುದಕ್ಕೆ ಬೆನ್ನು ಸಾಕ್ಷಿ

Asteroid Bennu: ನಮ್ಮ ಸೌರಮಂಡಲ ಸುಮಾರು 450 ಕೋಟಿ ವರ್ಷಗಳ ಹಿಂದೆ ಹೇಗೆ ಸೃಷ್ಟಿಯಾಯಿತು ಎಂಬ ಶತಮಾನಗಳ ಗೊಂದಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ನಾಸಾ ಬಾಹ್ಯಾಕಾಶದಿಂದ ತಂದಿದ್ದ 'ಬೆನ್ನು' (Bennu) ಕ್ಷುದ್ರಗ್ರಹದ ಕಲ್ಲು-ಮಣ್ಣಿನ ಸ್ಯಾಂಪಲ್‌ಗಳನ್ನು ವಿಜ್ಞಾನಿಗಳು ಕೂಲಂಕಷವಾಗಿ ಪರೀಕ್ಷಿಸಿದ್ದಾರೆ.

ಇನ್ನು, ಈ ಸಂಶೋಧನೆಯಲ್ಲಿ ಸೌರಮಂಡಲದ ಉಗಮ ಮತ್ತು ರೂಪುರೇಷೆಯ ಹಿಂದೆ 'ಗುರು' (Jupiter) ಗ್ರಹದ ಬಹುದೊಡ್ಡ ಪಾತ್ರವಿತ್ತು ಎಂಬ ರೋಚಕ ಸತ್ಯ ಬಯಲಾಗಿದೆ.

ಅತ್ಯಂತ ಹಳೆಯ 'ಕಾಸ್ಮಿಕ್' ರಹಸ್ಯ ಬಯಲು

2023ರಲ್ಲಿ ನಾಸಾದ ಒಸಿರಿಸ್‌-ರೆಕ್ಸ್‌ (OSIRIS-REx) ನೌಕೆಯು 'ಬೆನ್ನು' ಕ್ಷುದ್ರಗ್ರಹದಿಂದ 120 ಗ್ರಾಂ ಮಣ್ಣು ಮತ್ತು ಕಲ್ಲುಗಳ ಸ್ಯಾಂಪಲ್ ಅನ್ನು ಭೂಮಿಗೆ ತಂದಿತ್ತು. ಜ್ಯೂರಿಚ್‌ನ ಇಟಿಎಚ್ ಸಂಸ್ಥೆಯ ಪ್ರೊಫೆಸರ್ ಮಾರಿಯಾ ಶಾನ್‌ಬ್ಯಾಕ್ಲರ್ ಅವರ ತಂಡವು ಕೇವಲ ಅರ್ಧ ಗ್ರಾಂ ಸ್ಯಾಂಪಲ್ ಬಳಸಿ ನಡೆಸಿದ 'ಐಸೊಟೋಪ್' ತನಿಖೆಯಿಂದ ಬೆನ್ನು ಕ್ಷುದ್ರಗ್ರಹದ ಹುಟ್ಟಿನ ರಹಸ್ಯ ತೆರೆದುಕೊಂಡಿದೆ.

OSIRIS-REx spacecraft
ಬೆನ್ನು ಕ್ಷುದ್ರಗ್ರಹದ ಹತ್ತಿರ ಒಸಿರಿಸ್-ರೆಕ್ಸ್ ನೌಕೆ

ಗುರು ಗ್ರಹದ ಮಾಸ್ಟರ್ ಪ್ಲಾನ್

ಬೆನ್ನು ಕ್ಷುದ್ರಗ್ರಹ ಸೌರಮಂಡಲದ ಹೊರಭಾಗದಲ್ಲಿ ಹುಟ್ಟಿರಬಹುದು ಎಂಬ ಹಳೆಯ ನಂಬಿಕೆಯನ್ನು ಈ ಸಂಶೋಧನೆ ಸುಳ್ಳಾಗಿಸಿದೆ. ಸೌರಮಂಡಲದ ಆರಂಭದಲ್ಲೇ ರೂಪುಗೊಂಡ ಬೃಹತ್ ಗುರು ಗ್ರಹವು ತನ್ನ ಅಗಾಧ ಗುರುತ್ವಾಕರ್ಷಣೆಯಿಂದ ದೊಡ್ಡ ಕಲ್ಲುಗಳನ್ನು ತಡೆದು, ಸಣ್ಣ ಧೂಳಿನ ಕಣಗಳನ್ನು 'ನೀರು-ಹಿಮದ ಗಡಿ' (Water-ice line) ಪ್ರದೇಶಕ್ಕೆ ತಳ್ಳಿತ್ತು. ಹೀಗೆ ಸೌರಮಂಡಲದ ವಿವಿಧ ಭಾಗಗಳ ಧೂಳಿನ ಕಣಗಳು ಒಂದಾಗಿ ಬೆನ್ನು, ರಷ್ಯೂಗು ಮತ್ತು ಸಿಐ ಉಲ್ಕಾಪಿಂಡಗಳು ಸೃಷ್ಟಿಯಾಗಿವೆ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಭೂಮಿಯ ಸೃಷ್ಟಿಗೆ ಬೆನ್ನು ಸಾಕ್ಷಿ

ಬೆನ್ನು ಕ್ಷುದ್ರಗ್ರಹದಲ್ಲಿ ನೀರಿನ ಕಣಗಳು ಮತ್ತು ಸೂರ್ಯನಲ್ಲಿ ಕಂಡುಬರುವ ಮೂಲ ಧಾತುಗಳ ರಾಸಾಯನಿಕ ಮಿಶ್ರಣವಿದೆ. ಅಂದರೆ, ಭೂಮಿ ಮತ್ತು ಇತರ ಗ್ರಹಗಳು ಸೃಷ್ಟಿಯಾಗಲು ಬೇಕಾದ ಮೂಲ ಸಾದನ ಸಂಪತ್ತು ಹೇಗೆ ಒಂದಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಬೆನ್ನು ಸ್ಯಾಂಪಲ್ ನೆರವಾಗಿದೆ.

ಇದನ್ನೂ ಓದಿ: DRDO ರಹಸ್ಯ ಮಾಹಿತಿ ಲೀಕ್: ಹನಿಟ್ರ್ಯಾಪ್‌ ಬಲೆಗೆ ಬಿದ್ದನಾ ಮಾಜಿ ಆರ್ಮಿ ಕ್ಯಾಪ್ಟನ್? | DRDO Secret Leak

ಮುಂದಿನ ಹೆಜ್ಜೆ ಮಂಗಳನ ಚಂದ್ರನತ್ತ

ಈ ರೋಚಕ ಸಂಶೋಧನೆಯ ಬೆನ್ನಲ್ಲೇ ವಿಜ್ಞಾನಿಗಳ ದೃಷ್ಟಿ ಈಗ ಮಂಗಳ ಗ್ರಹದ ಚಂದ್ರ 'ಫೋಬೋಸ್' (Phobos) ಮೇಲಿದೆ. ಜಪಾನ್‌ನ 'ಜಾಕ್ಸಾ' (JAXA) ಬಾಹ್ಯಾಕಾಶ ಸಂಸ್ಥೆಯು 2026ರ ಕೊನೆಯಲ್ಲಿ ಫೋಬೋಸ್‌ಗೆ ನೌಕೆ ಕಳುಹಿಸುತ್ತಿದ್ದು, 2031ರ ವೇಳೆಗೆ ಅದರ ಸ್ಯಾಂಪಲ್ ಭೂಮಿಗೆ ಬರಲಿದೆ. ಆ ಮಾದರಿಗಳು ಲಭ್ಯವಾದರೆ ಸೌರಮಂಡಲದ ಸೃಷ್ಟಿಯ ಇನ್ನೂ ಹಲವು ರಹಸ್ಯಗಳು ಹೊರಬರಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net