

ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹಾಗೂ ನಕಲಿ ಪೋಸ್ಟ್‌ಗಳನ್ನು ಹಾಕಿದ್ದ ಆರೋಪದ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್‌ನ ಮುಖ್ಯಸ್ಥ ಬಿ.ಆರ್ ನಾಯ್ಡು ವಿರುದ ಎಫ್‌ಐಆರ್ ದಾಖಲಿಸಿದ್ದಾರೆ.
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೧೫೩ (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ೫೦೪ (ಉದ್ದೇಶಪೂರ್ವಕ ಅವಮಾನ, ಪ್ರಚೋದನೆ ನೀಡುವುದು), ೫೦೬ (ಅಪರಾಧ ಬೆದರಿಕೆ) ಮತ್ತು ೪೬೪ (ಸುಳ್ಳು ದಾಖಲೆ ಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಫೆಬ್ರವರಿಯಲ್ಲಿ ಎಸಿಎಂಎಂ ನ್ಯಾಯಾಲಯವು ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರು ಪೊಲೀಸರಿಗೆ ಆದೇಶಿಸಿತ್ತು. ಬಿಜೆಪಿ ಲೀಗಲ್ ಸೆಲ್‌ನ ಮಾಜಿ ಕಾರ್ಯದರ್ಶಿ ಯೋಗೇಂದ್ರ ಹೊಡಘಟ್ಟ ಅವರ ದೂರಿನ ಮೇರೆಗೆ ತನಿಖೆ ನಡೆಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ೧೯೯೨ರ ಬಾಬರಿ ಮಸೀದಿ ಧ್ವಂಸ ಆಂದೋಲನದಲ್ಲಿ ಪಾಲ್ಗೊಂಡಿದ್ದ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ವಿರೋಧಿಸಿ ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂಬ ಭಿತ್ತಿ ಪತ್ರಗಳನ್ನು ಬಿಜೆಪಿ ಪ್ರತಿಭಟನಾಕಾರರು ಹಿಡಿದಿದ್ದರು. ಕಾಂಗ್ರೆಸ್ ಐಟಿ ಸೆಲ್ ಪ್ಲಕಾರ್ಡ್‌ಗಳ ಮೇಲಿನ ಬರಹವನ್ನು ಹಗರಣಗಳು ಮತ್ತು ಇತರ ಅಕ್ರಮಗಳ ತಪ್ಪೊಪ್ಪಿಗೆ ಹೇಳಿಕೆಯಂತೆ ಮಾರ್ಫಿಂಗ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿತ್ತು. ಶಿವಕುಮಾರ್ ಅವರ ಸಾಮಾಜಿಕ ಮಾಧ್ಯಮ ನಿರ್ವಹಣೆ ಮಾಡುವವರು ಇದನ್ನು ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಎ್ಐಆರ್ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
An AIR has been filed against the two including the DCM