287 ನಗರಗಳಲ್ಲಿ ಅಮೃತ್ 2.0 ಅನುಷ್ಠಾನ; ಕೇಂದ್ರ ಸಹಭಾಗಿತ್ವದಲ್ಲಿ ಪುನರುಜ್ಜೀವನ

Amruth
Published on

ಬೆಂಗಳೂರು: ಮಹಾ ನಗರಗಳ ಮೂಲಸೌಕರ್ಯಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರ, ಸಣ್ಣ ನಗರಗಳ ಅಭಿವೃದ್ಧಿಗೆ ಅಮೃತ್ ಯೋಜನೆ ಜಾರಿ ಮಾಡಿತ್ತು. ಇದೀಗ ಎರಡನೇ ಹಂತದ ಅಮೃತ್ ಯೋಜನೆ ಅನುಷ್ಠಾನಗೊಳಿಸಲು ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದ 287 ನಗರಗಳಿಗೆ ಅನುದಾನ ದೊರಕಲಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಕೇಂದ್ರ ಪುರಸ್ಕೃತ ಅಟಲ್ ನಗರ ಪರಿವರ್ತನಾ ಪುನರುಜ್ಜೀವನ ಅಭಿಯಾನ 2.0 ( ಅಮೃತ್) ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಒಪ್ಪಿಗೆ ದೊರೆತಿದೆ. ಕೇಂದ್ರದ ಮಾರ್ಗಸೂಚಿ ಅನ್ವಯ ಸರ್ಕಾರದ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಉನ್ನತ ಸಂಚಾಲನ ಸಮಿತಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಮಟ್ಟದ ತಾಂತ್ರಿಕ ಸಮಿತಿ, ಪೌರಾಡಳಿತ ನಿರ್ದೇಶನಾಲಯವನ್ನು ರಾಜ್ಯದ ನೋಡಲ್ ಸಂಸ್ಥೆಯನ್ನಾಗಿ ಹಾಗೂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯನ್ನು ರಾಜ್ಯ ಅಭಿಯಾನದ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಮಾರ್ಗಸೂಚಿಯಂತೆ ಅಮೃತ್ 2.0 ಯೋಜನೆ ಅನುದಾನ ಬಳಕೆಗೆ ರಾಜ್ಯದ ಎಲ್ಲ 314 ನಗರ ಸ್ಥಳೀಯ ಸಂಸ್ಥೆಗಳು ಅರ್ಹವಾಗಿವೆ. ಈಗಾಗಲೆ ಅಮೃತ್ 1.0 ಯೋಜನೆಯನ್ನು 1 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ 26 ನಗರ, ಪಟ್ಟಣಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಮತ್ತು ಒಂದು ಪಾರಂಪರಿಕ ಪಟ್ಟಣ ಬಾದಾಮಿ ಪುರಸಭೆಯಲ್ಲಿ ಒಟ್ಟು 4952.87 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಿರುವುದರಿಂದ ಈ ಪಟ್ಟಣಗಳನ್ನು ಹೊರತುಪಡಿಸಿ 287 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲು ಕೈಗೆತ್ತಿಕೊಳ್ಳಲಾಗಿದೆ.

ಯೋಜನೆಯಲ್ಲಿ ಏನೇನು?: 287 ಪಟ್ಟಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಈ ಹಣ ಬಳಕೆ ಮಾಡಲಾಗುತ್ತದೆ. ಮುಖ್ಯವಾಗಿ ಎಲ್ಲ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಇದ್ದು, ಒಳಚರಂಡಿ ಮತ್ತು ಕೊಳಚೆನೀರು ನಿರ್ವಹಣೆ ಬಗ್ಗೆ ಆದ್ಯತೆ ಕೊಡಲಾಗುತ್ತದೆ. ಇದಿಷ್ಟೇ ಅಲ್ಲದೆ, ಜನಮೂಲಗಳ ಸಂರಕ್ಷಣೆ, ಅಂತರ್ಜಲ ಸಂರಕ್ಷಣೆ ಸೇರಿ ಇಡೀ ನಗರ ನವೀಕರಣಕ್ಕೆ ಉತ್ತೇಜನ ನೀಡಲಿದೆ.

4615 ಕೋಟಿ ರೂ. ಅನುದಾನ: 2021-26ನೇ ಅವಧಿಗೆ ಅಮೃತ್ 2.0 ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರದ ಪಾಲಿನ ಹಂಚಿಕೆ 4615 ಕೋಟಿ ರೂ. ಆಗಿರಲಿದೆ. ಉಳಿದಂತೆ 287 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂದಾಜಿಸಿರುವ ಒಟ್ಟು ಯೋಜನಾ ಮೊತ್ತ 9,230 ಕೋಟಿ ರೂ.ಗಳೆಂದು ರಾಜ್ಯ ಸರ್ಕಾರ ನಿರ್ಧರಿಸಿದೆ.

ಅಮೃತ್ ಯೋಜನೆಗೆ ಆಯ್ಕೆಯಾಗಿರುವ ರಾಜ್ಯದ ನಗರಗಳ ಪಟ್ಟಿ

  • ಬೆಂಗಳೂರು ನಗರ: ಹೆಬ್ಬಗೋಡಿ, ಮಾದನಾಯಕನಹಳ್ಳಿ, ಬೊಮ್ಮಸಂದ್ರ, ಅನೇಕಲ್, ಜಿಗಣಿ, ಚಂದಾಪುರ, ಅತ್ತಿಬೆಲೆ, ಹುಣಸಮಾರನಹಳ್ಳಿ, ಚಿಕ್ಕಬಾಣಾವರ
  • ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ವಿಜಯಪುರ, ಬಾಶೆಟ್ಟಿಹಳ್ಳಿ.
  • ರಾಮನಗರ: ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಬಿಡದಿ, ಹಾರೋಹಳ್ಳಿ.
  • ತುಮಕೂರು: ತಿಪಟೂರು, ಶಿರಾ, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ, ಪಾವಗಡ, ಗುಬ್ಬಿ, ಕೊರಟಗೆರೆ, ತುರುವೇಕೆರೆ, ಹುಳಿಯಾರು.
  • ಕೋಲಾರ: ಮುಳುಬಾಗಿಲು, ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ, ವೇಮಗಲ್- ಕುರುಂಗಲ್.
  • ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ.
  • ಚಿತ್ರದುರ್ಗ: ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು, ನಾಯಕನಹಟ್ಟಿ.
  • ದಾವಣಗೆರೆ: ಹರಿಹರ, ಚನ್ನಗಿರಿ, ಮಲೇಬೆನ್ನೂರು, ಹೊನ್ನಾಳಿ, ಜಗಳೂರು, ನ್ಯಾಮತಿ.
  • ಶಿವಮೊಗ್ಗ: ಸಾಗರ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಹೊಸನಗರ, ತೀರ್ಥಹಳ್ಳಿ, ಜೋಗ-ಕಾರ್ಗಲ್, ಆನವಟ್ಟಿ, ಹೊಳೆಹೊನ್ನೂರು.
  • ಮೈಸೂರು: ಹುಣಸೂರು, ನಂಜನಗೂಡು, ಹೂಟಗಳ್ಳಿ, ಕೃಷ್ಣರಾಜನಗರ, ಬನ್ನೂರು, ತಿ.ನರಸೀಪುರ, ಪಿರಿಯಾಪಟ್ಟಣ, ಹೆಗ್ಗಡನದೇವನಕೋಟೆ, ಸರಗೂರು, ರಾಮಣ್ಣಹಳ್ಳಿ, ಕಡಕೋಳ, ಶ್ರೀರಾಮಪುರ, ಬೋಗಾದಿ.
  • ಮಂಡ್ಯ:ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಬೆಳ್ಳೂರು.
  • ಚಾಮರಾಜನಗರ: ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು, ಹನೂರು.
  • ಕೊಡಗು: ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ.
  • ಹಾಸನ: ಅರಸೀಕೆರೆ, ಚನ್ನರಾಯಪಟ್ಟಣ, ಹೊಳೇನರಸೀಪುರ, ಸಕಲೇಶಪುರ, ಬೇಲೂರು, ಆಲೂರು, ಅರಕಲಗೂಡು.
  • ಚಿಕ್ಕಮಗಳೂರು: ಬೀರೂರು, ಕಡೂರು, ತರೀಕೆರೆ, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ಅಜ್ಜಂಪುರ.
  • ದಕ್ಷಿಣ ಕನ್ನಡ: ಪುತ್ತೂರು, ಉಳ್ಳಾಲ, ಮೂಡುಬಿದರೆ, ಬಂಟ್ವಾಳ, ಸೋಮೇಶ್ವರ, ಬೆಳ್ತಂಗಡಿ, ಮೂಲ್ಕಿ, ಸುಳ್ಯ, ವಿಟ್ಲ, ಕೊಟ್ಟೆಕಾರು, ಕಡಬ, ಬಜ್ಪೆ, ಕಿನ್ನಿಗೋಳಿ.
  • ಉಡುಪಿ: ಕಾರ್ಕಳ, ಕುಂದಾಪುರ, ಕಾಪು, ಸಾಲಿಗ್ರಾಮ, ಬೈಂದೂರು.
  • ಬೆಳಗಾವಿ: ಬೆಳಗಾವಿ ಕಂಟೇನ್ಮೆಂಟ್ ಬೋರ್ಡ್, ಗೋಕಾಕ್, ನಿಪ್ಪಾಣಿ, ಮೂಡಲಗಿ, ಅಥಣಿ, ಬೈಲಹೊಂಗಲ, ಚಿಕ್ಕೋಡಿ, ರಾಮದುರ್ಗ, ಸಂಕೇಶ್ವರ, ಸವದತ್ತಿ, ಹುಕ್ಕೇರಿ, ಕುಡಚಿ, ಸದಲಗಾ, ಮುಗಳಖೋಡ, ಮುನವಳ್ಳಿ, ಉಗರಖೋಡ, ಕೊಣ್ಣೂರು, ಹಾರೂಗೇರಿ, ಘಟಪ್ರಭಾ (ಮಲ್ಲಾಪುರ), ಖಾನಾಪುರ, ರಾಯಭಾಗ, ಕಂಕಣವಾಡಿ, ಎಂ.ಕೆ.ಹುಬ್ಬಳ್ಳಿ, ನಾಗನೂರು, ಚಿಂಚಳಿ, ಯಕ್ಸಂಬಾ, ಚನ್ನಮ್ಮನ ಕಿತ್ತೂರು, ಕಲ್ಲೊಳಿ, ಐನಾಪುರ, ಶೇಡಬಾಳ, ಕಬ್ಬೂರ, ಅರಬಾವಿ, ಬೋರಗಾವ, ಕಾಗವಾಡ, ಯರಗಟ್ಟಿ, ಮಚ್ಛೆ, ಪೀರನವಾಡಿ, ಅಂಕಲಗಿ- ಅಕ್ಕತಂಗೇರಹಾಳ.
  • ಬಾಗಲಕೋಟೆ: ರಬಕವಿ- ಬನಹಟ್ಟಿ, ಜಮಖಂಡಿ, ಇಳಕಲ್, ಮುಧೋಳ್, ಮಹಾಲಿಂಗಪುರ, ಗುಳೇದಗುಡ್ಡ, ತೇರದಾಳ, ಹುನಗುಂದ, ಬೀಳಗಿ, ಕೆರೂರು, ಅಮೀನಘಡ, ಬೆಲಗಾಲಿ, ಕಮ್ಮತಗಿ, ಲೋಕಾಪುರ, ಶಿರೂರು.
  • ವಿಜಯಪುರ: ಇಂಡಿ, ಮುದ್ದೇಬಿಹಾಳ, ಸಿಂಧಗಿ, ತಾಳಿಕೋಟೆ, ಬಸವನಬಾಗೇವಾಡಿ, ಆಲಮೇಲ, ಮನಗೂಳಿ, ಕೊಲ್ಹಾರ, ನಿಡಗುಂದಿ, ದೇವರಹಿಪ್ಪರಗಿ, ಚಡಚಣ, ನಾಲತವಾಡ, ಬಬಲೇಶ್ವರ, ತಿಕೋಟ.
  • ಹಾವೇರಿ: ಹಾವೇರಿ, ಬ್ಯಾಡಗಿ, ಹಾನಗಲ್, ಸವಣೂರು, ಶಿಗ್ಗಾಂವಿ, ಬಂಕಾಪುರ, ಹಿರೇಕೆರೂರು, ರಟ್ಟೇಹಳ್ಳಿ, ಗುತ್ತಲ.
  • ಧಾರವಾಡ: ಅಣ್ಣಿಗೇರಿ, ನವಲಗುಂದ, ಅಲ್ನಾವರ, ಕಲಘಟಗಿ, ಕುಂದಗೋಳ.
  • ಗದಗ: ಗಜೇಂದ್ರಗಡ, ನರಗುಂದ, ಲಕ್ಷಿ್ಮೕಶ್ವರ, ಮುಂಡರಗಿ, ರೋಣ, ಶಿರಹಟ್ಟಿ, ಮುಳಗುಂದ, ನರೇಗಲ್.
  • ಉತ್ತರ ಕನ್ನಡ: ಕಾರವಾಡ, ದಾಂಡೇಲಿ, ಶಿರಸಿ, ಭಟ್ಕಳ, ಕುಮಟಾ, ಹಳಿಯಾಳ, ಅಂಕೋಲ, ಹೊನ್ನಾವರ, ಮುಂಡುಗೋಡ, ಸಿದ್ದಾಪುರ, ಯಲ್ಲಾಪುರ, ಜಾಲಿ, ಮಾಂಕಿ.
  • ಬೀದರ್: ಬಸವಕಲ್ಯಾಣ, ಚಿಟಗುಪ್ಪ, ಹುಮ್ನಾಬಾದ್, ಭಾಲ್ಕಿ, ಹಳ್ಳಿಖೇಡ, ಔರಾದ್.
  • ಬಳ್ಳಾರಿ: ಶಿರಗುಪ್ಪ, ಕಂಪ್ಲಿ, ಸಂಡೂರು, ಕುರೆಕುಪ್ಪ, ಕುರುಗೋಡು, ತೆಕ್ಕಲಕೋಟೆ, ಕುಡಿತಿನಿ. ‘
  • ವಿಜಯನಗರ: ಹೂವಿನ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕಮಲಾಪುರ, ಕೊಟ್ಟೂರು, ಕೂಡ್ಲಿಗಿ, ಮರಿಯಮ್ಮನಹಳ್ಳಿ. ಉಳಿದಂತೆ ಕಲಬುರಗಿ, ಯಾದಗಿರಿ ಜಿಲ್ಲೆಯ ಹಲವು ಪಟ್ಟಣಗಳು ಈ ಪಟ್ಟಿಯಲ್ಲಿ ಸೇರಿವೆ.

ಮನೆ ನಿರ್ಮಾಣಕ್ಕೆ ಕಡ್ಡಾಯವಲ್ಲ ಯೋಜನಾ ಪ್ರಾಧಿಕಾರ ಅನುಮತಿ

ಬೆಂಗಳೂರು: ಪುರಸಭೆ ವ್ಯಾಪ್ತಿಯಲ್ಲಿರುವ ಒಂಟಿ ಮನೆಗಳು, ಪುರಸಭೆ ಪಟ್ಟಿಯಲ್ಲಿರುವ ಮನೆಗಳು ಹಾಗೂ ಹಳ್ಳಿಗಳ ಜಮೀನಿನಲ್ಲಿ ಮನೆ ಕಟ್ಟಲು ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಲು ಸರ್ಕಾರ ತೀರ್ವನಿಸಿದೆ. ಕರ್ನಾಟಕ ಪುರಸಭೆ ಅಧಿನಿಯಮ 1964ರ ಕಲಂ 387 ರದ್ದುಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ಪುರಸಭೆ ವ್ಯಾಪ್ತಿಯ ಕೆಲವು ಕಡೆ ಮನೆ ನಿರ್ವಣ, ಹಳೇ ಮನೆ ದುರಸ್ತಿ, ಮಾರಾಟ, 11 ಇ ಸ್ಕೆಚ್, ಲೈಸನ್ಸ್ ಪಡೆಯಲು ಪಟ್ಟಣ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಈ ಹಿನ್ನೆಲೆಯಲ್ಲಿ 2016ರಿಂದ ಈವರೆಗೆ ಅನೇಕ ಸಮಸ್ಯೆ ತಲೆದೋರಿದ್ದವು. ಈ ಸಮಸ್ಯೆಯಿಂದ ಜನರಿಗೆ ಮುಕ್ತಿ ಕೊಡುವ ಹಿನ್ನೆಲೆಯಲ್ಲಿ ಕರ್ನಾಟಕ ಪುರಸಭೆ ಅಧಿನಿಯಮ 1964 ಕಲಂ 387 ಅನ್ನು ರದ್ದುಪಡಿಸಲಾಗುತ್ತಿದೆ.

ಕಾಯ್ದೆಯ ಸಮಸ್ಯೆ ಗಳೇನು?: ಕರ್ನಾಟಕ ಪುರಸಭೆ 1964ರ ಕಲಂ 387ರಿಂದ ಒಂಟಿ ಮನೆ/ ನಿವೇಶನ/ ಜಮೀನುಗಳಲ್ಲಿ ಮನೆ ನಿರ್ವಿುಸಲು ಅನುಮತಿ ಸಿಗುತ್ತಿರಲಿಲ್ಲ. ಖಾತೆ ಆಗುತ್ತಿರಲಿಲ್ಲ. ಮಾರಾಟ ಮಾಡಲು, ಸಾಲ ಪಡೆಯಲು ಅವಕಾಶ ಸಿಗುತ್ತಿರಲಿಲ್ಲ. ಲೈಸನ್ಸ್ ಪಡೆಯಲು, ಕೆಇಬಿ ನಿರಾಕ್ಷೇಪಣಾ ಪತ್ರ ಪಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಕಾರಣ ಪುರಸಭೆ ಅಧಿನಿಯಮ 1964 ಕಲಂ 387 ರದ್ದುಪಡಿಸಲು ಸಂಪುಟ ಸಭೆ ನಿರ್ಣಯಿಸಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪುರಸಭೆ ಆಸ್ತಿ ಪಟ್ಟಿಯಲ್ಲಿದ್ದ ಮತ್ತು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ ನಿರ್ವಣಕ್ಕೆ ಪಟ್ಟಣ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯುವುದು ಇನ್ನುಮುಂದೆ ಕಡ್ಡಾಯವಲ್ಲ ಎಂದರು.

ಸ್ಥಳೀಯ ಪಂಚಾಯಿತಿಗಳಿಗೇ ಅಧಿಕಾರ: ಕೆಲ ಗ್ರಾಮಗಳು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆ ಗೇರಿವೆ. ಇನ್ನು ಕೆಲವು ಪಂಚಾಯಿತಿಗಳಿಗೆ ಹೊಸ ಗ್ರಾಮಗಳು ಸೇರ್ಪಡೆಯಾಗಿವೆ. ಅಲ್ಲೂ ಪಟ್ಟಣ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯುವುದಕ್ಕೆ ವಿನಾಯಿತಿ ದೊರೆಯಲಿದೆ. ಅಲ್ಲೆಲ್ಲ ಆಯಾ ಪಂಚಾಯಿತಿ/ ಗ್ರಾಮ ಪಂಚಾಯಿತಿಗಳೇ ತೀರ್ಮಾನ ತೆಗೆದುಕೊಂಡು ಲೈಸನ್ಸ್, 11ಇ ಸ್ಕೆಚ್ ಕೊಡಬಹುದಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಸಣ್ಣ ರಸ್ತೆ ಮನೆಗಳ ಸಮಸ್ಯೆಗೆ ಮುಕ್ತಿ: ಈಗಾಗಲೆ ಸಣ್ಣ ಸಣ್ಣ ರಸ್ತೆಯಲ್ಲಿ 10-15 ಮನೆ ಇದ್ದು, ಮಧ್ಯ ಒಂದು ಮನೆ ಕಟ್ಟಬೇಕಾದರೆ ಪರವಾನಗಿ ಪಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಕೆಲವರು ಸಣ್ಣ ಸಣ್ಣ ರಸ್ತೆಯಲ್ಲಿರುವ ಹಳೇ ಮನೆ ಕಿತ್ತು ಕಟ್ಟಲೂ ಕಷ್ಟವಾಗಿತ್ತು. ನಿರ್ದಿಷ್ಟ ಅಳತೆಯ ರಸ್ತೆ ಇಲ್ಲ ಎಂಬುದು ಸೇರಿ ನಾನಾ ಕಾರಣ ನೀಡಿ ಪಟ್ಟಣ ಯೋಜನಾ ಪ್ರಾಧಿಕಾರಗಳು ಪರವಾನಗಿ ನಿರಾಕರಿಸುತ್ತಿದ್ದವು. ಅಂತಹವರಿಗೆ ರಕ್ಷಣೆ ಕೊಡಲು ಪುರಸಭೆ ಅಧಿನಿಯಮ 1964ರ ಕಲಂ 387 ರದ್ದುಪಡಿಸಲು ತೀರ್ವನಿಸಲಾಗಿದೆ ಎಂದು ತಿಳಿಸಿದರು. ಹಳ್ಳಿಯಲ್ಲಿ 1 ಎಕೆರೆ ಜಮೀನಿನಲ್ಲಿ ಒಂದು ಮನೆ ಕಟ್ಟಿಕೊಳ್ಳಲು ಪಟ್ಟಣ ಯೋಜನಾ ಪ್ರಾಧಿಕಾರದ ಅನುಮತಿ ಬೇಕಿಲ್ಲ. ಆಯಾ ವ್ಯಾಪ್ತಿಯ ಪಂಚಾಯಿತಿಗಳೇ ಲೈಸನ್ಸ್ ನೀಡುತ್ತವೆ. ಇದನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ. ಈ ವಿನಾಯಿತಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಅನ್ವಯವಾಗುವುದಿಲ್ಲ. ಕಾಯ್ದೆ ದುರ್ಬಳಕೆಯಾಗಬಾರದು ಎಂಬ ಕಾರಣಕ್ಕೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕಲಂ 387ರ ವಿನಾಯಿತಿ ಸಿಗುವುದಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಹೊಸ ಬಡಾವಣೆಗೆ ಹಳೆಯ ನಿಯಮ: ಹೊಸ ಬಡಾವಣೆ ನಿರ್ವಿುಸುವವರು, ಬಫರ್ ವಲಯದಲ್ಲಿ ನಿವೇಶನ/ ಮನೆ ನಿರ್ವಿುಸುವವರಿಗೆ ಪಟ್ಟಣ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಅರಣ್ಯ ಮನೆಗಳಿಗೂ ವಿನಾಯಿತಿ: ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಅರಣ್ಯದಲ್ಲಿ ಅನೇಕರು ಮನೆ ಕಟ್ಟಿಕೊಂಡಿದ್ದಾರೆ. ಕಲಂ 4ರ ಅಡಿಯಲ್ಲಿ ಇವರಿಗೆ ಕೆಲ ವಿನಾಯಿತಿ ನೀಡಿ ಪಟ್ಟಾಗಳನ್ನು ವಿತರಿಸಲಾಗಿದೆ. ಅಂತಹವರು ಮತ್ತು ಜಿಪಿಎಸ್ ವ್ಯಾಪ್ತಿಗೆ ಬರುವವರಿಗೆ ಪಟ್ಟಣ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯ ಬೇಕಿಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಜಮೀನಿನಲ್ಲಿ ಮನೆ ನಿರ್ಮಾಣ ಸುಲಭ: ಗ್ರಾಮೀಣ ಪ್ರದೇಶ, ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಎಲ್ಲೋ ಒಂದೊಂದು ಮನೆಗಳಿಗೆ ಪಟ್ಟಣ ಯೋಜನಾ ಪ್ರಾಧಿಕಾರದ ಅನುಮತಿ ಪಡೆದು ಮನೆ ಕಟ್ಟಲು ಆಗುತ್ತಿರಲಿಲ್ಲ. 5-10 ಗುಂಟೆ ಜಮೀನು ಹೊಂದಿರುವವರು ಒಂದು ಮನೆ ಕಟ್ಟಬೇಕು ಎಂದರೆ ಅಲ್ಲಿ ರಸ್ತೆ ಕೂಡ ಮಾಡಲು ಆಗುತ್ತಿರಲಿಲ್ಲ. ಹಾಗಾಗಿ ಲೈಸನ್ಸ್ ಸಿಗುತ್ತಿರಲಿಲ್ಲ. ನಿಯಮ 387 ರದ್ದಿನಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಖಾಸಗಿ ಬಡಾವಣೆ ನಿರ್ವಿುಸು ವವರು, ಒಂದು ಎಕರೆಯಲ್ಲಿ 8-10 ನಿವೇಶನ ಮಾಡಿದರೆ ಪಟ್ಟಣ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net