ದಿವ್ಯ ಜೀವನ ಸಂಘದ ಅಮೃತ ಮಹೋತ್ಸವ

shviananda jan 08 2020
Published on

ಋಷಿಕೇಶದಲ್ಲಿ ಸ್ವಾಮಿ ಶಿವಾನಂದರು ಸ್ಥಾಪಿಸಿದ ದಿವ್ಯ ಜೀವನ ಸಂಘದ ಬೆಂಗಳೂರು ಶಾಖೆ ಪ್ರಾರಂಭವಾಗಿ 75 ವರ್ಷ. ತನ್ನಿಮಿತ್ತ ಇದೇ ಜ. 12ರಿಂದ 14ರ ತನಕ ಮೂರು ದಿನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ದೇಶದ ನಾನಾ ಭಾಗಗಳ ಸಾಧುಸಂತರು ಭಾಗವಹಿಸಲಿದ್ದು; ವಿವಿಧ ಧಾರ್ವಿುಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.

ಆಧ್ಯಾತ್ಮಿಕ ಜಗತ್ತಿನಲ್ಲಿ ಬಹಳಷ್ಟು ಸಂತರು ಬಂದು ಹೋಗಿದ್ದಾರೆ. ಆದರೂ ವಿಶೇಷ ಗುಣಗಳಿಂದ, ಸರ್ವತೋಮುಖ ವ್ಯಕ್ತಿತ್ವದಿಂದಲೂ ಕೂಡಿದ್ದವರು ಸ್ವಾಮಿ ಶಿವಾನಂದರು. ‘ದಿವ್ಯ ಜೀವನ ಸಂಘ’ ಮತ್ತು ‘ಶಿವಾನಂದ ಆಶ್ರಮ’ ಇವೆರಡೂ ಪರ್ಯಾಯ ಹೆಸರುಗಳು. ದಿವ್ಯ ಜೀವನ ಸಂಘವನ್ನು ‘ಶರೀರ’ವೆಂದುಕೊಂಡರೆ, ಶಿವಾನಂದರು ಅದನ್ನು ಚೇತನಾಮಯವಾಗಿಸಿದ ‘ಆತ್ಮ’ವೆನ್ನಬಹುದು.

1887ರ ಸೆಪ್ಟೆಂಬರ್ 8ರಂದು ತಿರುನೆಲ್ವೇಲಿ ಜಿಲ್ಲೆಯ (ತಮಿಳುನಾಡು) ಪತ್ತಮಡೈ ಎಂಬ ಗ್ರಾಮದಲ್ಲಿ ವೆಂಗು ಅಯ್ಯರ್ ಮತ್ತು ಪಾರ್ವತಿ ಅಮ್ಮಾಳ್ ಅವರಿಗೆ ಗಂಡುಮಗುವೊಂದು ಜನಿಸಿತು. ಕುಪ್ಪುಸ್ವಾಮಿ ಎಂದು ನಾಮಕರಣವಾಯಿತು. ಬಾಲಕ ಕುಪ್ಪುಸ್ವಾಮಿ ಅಸಾಧಾರಣ ವ್ಯಕ್ತಿತ್ವವನ್ನೂ, ತೀಕ್ಷ ಬುದ್ಧಿಯನ್ನೂ ಹೊಂದಿದ್ದ. ತನ್ನ ಸಹಚರರಿಗೆ ತ್ಯಾಗ ಮತ್ತು ಪ್ರೇಮವನ್ನು ಧಾರೆಯೆರೆಯುತ್ತಿದ್ದ. ಬಡವರಿಗೆ ಅನುಕಂಪ ತೋರಿಸುತ್ತಿದ್ದ. ವೈದ್ಯಕೀಯ ಶಿಕ್ಷಣ ಮುಗಿಸಿ ಡಾಕ್ಟರ್ ಎನಿಸಿಕೊಂಡ. ಅಸಾಮಾನ್ಯ ಬುದ್ಧಿಶಕ್ತಿಯಿಂದ ಎಂಬಿಬಿಎಸ್ ಮೊದಲ ವರ್ಷದಲ್ಲೇ ಅಂತಿಮ ವರ್ಷದ ಎಂಬಿಬಿಎಸ್ ವಿಷಯಗಳನ್ನು ಗ್ರಹಿಸಿ, ಹಿರಿಯ ವೈದ್ಯರಿಂದ ಶಹಬ್ಬಾಸ್ ಎನಿಸಿಕೊಂಡು, ಅವರಿಗೆ ಸಹಾಯ ಮಾಡಲು ಶಸ್ತ್ರಚಿಕಿತ್ಸಾ ಕೊಠಡಿಗಳಿಗೆ ಅನುಮತಿ ಗಿಟ್ಟಿಸಿಕೊಂಡಿದ್ದ. ಅವನು ಓದುತ್ತಿದ್ದ ತಂಜಾವೂರು ಮೆಡಿಕಲ್ ಕಾಲೇಜಿನಲ್ಲಿ ಇದೊಂದು ಪವಾಡವೆನಿಸಿತ್ತು. ಇಷ್ಟಾದರೂ ಅಹಂಕಾರದಿಂದ ಮೆರೆಯದ ಕುಪ್ಪುಸ್ವಾಮಿ ಸೌಮ್ಯವ್ಯಕ್ತಿಯಾಗಿ ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ.

ಓದು ಮುಗಿಸಿ ಹತ್ತು ವರ್ಷಕ್ಕೂ ಹೆಚ್ಚುಕಾಲ ಡಾಕ್ಟರ್ ಕುಪ್ಪುಸ್ವಾಮಿಯವರು ಮಲಯಾದಲ್ಲಿ (ಈಗಿನ ಮಲೇಷಿಯಾ) ರಬ್ಬರ್ ಎಸ್ಟೇಟ್​ನಲ್ಲಿದ್ದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದರು. ಅವರ ವಿನಯವಂತಿಕೆ, ಹೃದಯವಂತಿಕೆ ಮತ್ತು ಹಸ್ತಗುಣದಿಂದ ಅಸಂಖ್ಯಾತ ರೋಗಿಗಳು ಶೀಘ್ರ ಗುಣಮುಖರಾಗುತ್ತಿದ್ದರು. ಇಷ್ಟಾದರೂ ಕುಪ್ಪುಸ್ವಾಮಿಯ ಹೃದಯದಲ್ಲಿ ಅತೃಪ್ತಿಯಿತ್ತು. ಮನುಷ್ಯರ ದೈಹಿಕ ಕಾಯಿಲೆಗಳಿಗಿಂತ ಹೆಚ್ಚಿನ ಅಪಾಯಕಾರಿಯಾದ ಅಜ್ಞಾನವಶವಾಗಿರುವ ಆಧ್ಯಾತ್ಮಿಕ ಕಾಯಿಲೆಗಳಿಗೆ ಚಿಕಿತ್ಸೆ ಮಾಡುವುದು ಉತ್ತಮ ಎನಿಸುತ್ತಿತ್ತು. ಈ ರೀತಿ ಚಿಂತಿಸುತ್ತಾ ಶೀಘ್ರವೇ ಕುಪ್ಪುಸ್ವಾಮಿ ಸರ್ವವನ್ನೂ ತ್ಯಜಿಸಿ ಭಾರತಕ್ಕೆ ಬಂದುಬಿಟ್ಟರು. ಕೆಲವು ದಿನ ಭಾರತ ಪರ್ಯಟನೆ ಮಾಡಿ, ಕೊನೆಗೆ ಋಷಿಕೇಶದಲ್ಲಿ ನೆಲೆಸಿದರು. ಅಲ್ಲಿ ಶ್ರೀ ಶಂಕರಾಚಾರ್ಯ ಪರಂಪರೆಯ ಶ್ರೀ ವಿಶ್ವಾನಂದರೆಂಬ ಸ್ವಾಮಿಗಳಿಂದ ಸಂನ್ಯಾಸ ಮತ್ತು ‘ಸ್ವಾಮಿ ಶಿವಾನಂದ’ ಎಂಬ ನಾಮಾಂಕಿತವನ್ನು ಪಡೆದರು. ಸಂನ್ಯಾಸ ದೀಕ್ಷೆಯಾದಾಗಿನಿಂದ 10-12 ವರ್ಷ ಅತಿ ಕಠಿಣ ಸಾಧನೆ ಕೈಗೊಂಡು, ಭಗವತ್ ಸಾಕ್ಷಾತ್ಕಾರ ಮಾಡಿಕೊಂಡರು. ತನ್ನ ಹಾಗೆ ಇತರರೂ ಅಧ್ಯಾತ್ಮಮಾರ್ಗದಲ್ಲಿ ನಡೆದು ಜೀವನದಲ್ಲಿ ಸಾರ್ಥಕತೆ ಪಡೆಯಬೇಕೆಂಬುದು ಅವರ ಬಯಕೆಯಾಗಿತ್ತು. ಇದಕ್ಕಾಗಿ 1936ರಲ್ಲಿ ‘ದಿವ್ಯ ಜೀವನ ಸಂಘ’ ಸ್ಥಾಪಿಸಿದರು. ಎಲ್ಲರಿಗೂ ಆಧ್ಯಾತ್ಮಿಕ ಜ್ಞಾನ ತಲುಪಿಸಲು ಮುನ್ನೂರಕ್ಕೂ ಅಧಿಕ ಪುಸ್ತಕಗಳನ್ನು ಬರೆದರು ಮತ್ತು ಅವುಗಳನ್ನು ಅಂಚೆಯ ಮೂಲಕ ವಿಶ್ವದಾದ್ಯಂತ ಕಳುಹಿಸಿದರು. ಲಕ್ಷಾಂತರ ಜನರ ಹೃದಯದಲ್ಲಿದ್ದ ಅಜ್ಞಾನದ ಅಂಧಕಾರವನ್ನು ಕಳೆದು ದಿವ್ಯಜ್ಞಾನದ ಬೆಳಕನ್ನು ಚೆಲ್ಲಿದರು. ಇದರಿಂದ ಜನರಿಗೆ ನಿರ್ದಿಷ್ಟ ಗುರಿ ಸಿಕ್ಕಿತು. ‘ಭಗವತ್ ಸಾಕ್ಷಾತ್ಕಾರವನ್ನೇ ಜೀವನದ ಪರಮ ಗುರಿಯಾಗಿಸಿಕೊಳ್ಳಿ’ ಎಂದು ಸಾರಿ ಹೇಳಿ, ಸರ್ವರಿಗೂ ಅನುಕೂಲವಾಗುವಂತೆ ಯೋಗ, ವೇದಾಂತ, ಪ್ರಾಣಾಯಾಮ, ಮನೆಯ ಔಷಧಿಗಳು, ಮನಸ್ಸಿನ ಏಕಾಗ್ರತೆ, ಕುಂಡಲಿನೀಯೋಗ, ಜಪಯೋಗ, ಚಿಂತನಾ ಶಕ್ತಿ ಮುಂತಾದ ಪುಸ್ತಕಗಳನ್ನು ಮತ್ತು ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳ ಮೇಲೆ ವ್ಯಾಖ್ಯಾನವನ್ನೂ ಬರೆದರು. ದೈನಂದಿನ ಆಚಾರ-ವಿಚಾರಗಳ ಮೂಲಕ ನೂರಾರು ಶಿಷ್ಯರನ್ನು ಶ್ರೇಷ್ಠ ಸಂತರನ್ನಾಗಿ ಪರಿವರ್ತಿಸಿ, ಪ್ರಪಂಚದ ಮೂಲೆ ಮೂಲೆಗೂ ಕಳುಹಿಸಿ, ಜಗತ್ತಿನಾದ್ಯಂತ ಸಾವಿರಾರು ದಿವ್ಯ ಜೀವನ ಶಾಖೆಗಳಾಗುವಂತೆ ಮಾಡಿ ಅಸಂಖ್ಯ ಜನರ ಅಜ್ಞಾನವನ್ನು ನಿವಾರಿಸಿದರು. ಈ ಶಿಷ್ಯರಲ್ಲಿ ಅತ್ಯಂತ ಪ್ರಭಾವಿಗಳೆಂದರೆ, ಸ್ವಾಮಿ ಚಿದಾನಂದ, ಸ್ವಾಮಿ ಕೃಷ್ಣಾನಂದ, ಸ್ವಾಮಿ ಮಾಧವಾನಂದ, ಸ್ವಾಮಿ ವಿಷ್ಣುದೇವನಂದ (ಕೆನಡಾ), ಸ್ವಾಮಿ ಜ್ಯೋತಿರ್ಮಯಾನಂದ, ಸ್ವಾಮಿ ಸಚ್ಚಿದಾನಂದ (ಅಮೆರಿಕ), ಸ್ವಾಮಿ ಪ್ರಣವಾನಂದ (ಮಲೇಷಿಯಾ), ಸ್ವಾಮಿ ಸಹಜಾನಂದ (ದಕ್ಷಿಣ ಆಫ್ರಿಕಾ), ಸ್ವಾಮಿ ವೆಂಕಟೇಶಾನಂದ (ಮಾರಿಷಸ್) ಇತ್ಯಾದಿ. ಇವರೆಲ್ಲ ಶಿವಾನಂದರ ಅಣತಿಯಂತೆ ಅವರವರ ಪ್ರದೇಶದಲ್ಲಿನ ಅಸಂಖ್ಯ ಜನರಿಗೆ ಆಧ್ಯಾತ್ಮಿಕ ಜ್ಞಾನವನ್ನು ಅನುಗ್ರಹಿಸಿದರು. ಇವರಲ್ಲಿ ಪೂಜ್ಯ ಚಿದಾನಂದರು, ಶಿವಾನಂದರ ಸಮಾಧಿಯ ಬಳಿಕ (1963) ಉತ್ತರಾಧಿಕಾರಿಯಾಗಿ 46 ವರ್ಷಗಳಿಗೂ ಮಿಗಿಲಾಗಿ ಪ್ರಪಂಚ ಪರ್ಯಟನೆ ಮಾಡಿ, ಗುರುದೇವರ ದಿವ್ಯಸಂದೇಶವನ್ನು ಬೋಧಿಸಿದರು.

ಹೀಗೆ ಶಿವಾನಂದರಿಂದ ಪ್ರೇರಿತರಾಗಿ ತೆರೆಯಲ್ಪಟ್ಟ ಅಸಂಖ್ಯಾತ ದಿವ್ಯ ಜೀವನ ಸಂಘದ ಶಾಖೆಗಳಲ್ಲಿ, ಬೆಂಗಳೂರಿನ ಟಾಸ್ಕರ್ ಟೌನ್ ಶಾಖೆಗೆ ವಿಶೇಷ ಸ್ಥಾನಮಾನವಿದೆ. ಶಿವಾನಂದರು ಅಂಚೆಯ ಮೂಲಕ ತಮ್ಮ ಪುಸ್ತಕಗಳನ್ನು ಎಲ್ಲ ಭಕ್ತರಿಗೂ ಕಳುಹಿಸುತ್ತಿದ್ದರೆಂದು ಈ ಹಿಂದೆ ಹೇಳಿದ್ದೆವಷ್ಟೇ. ಅಂತಹ ಒಂದು ಪುಸ್ತಕದ ಪಾರ್ಸೆಲ್ ಬೆಂಗಳೂರಿನ ಅಲಸೂರು ಅಂಚೆ ಕಚೇರಿಯಲ್ಲಿ ಬಂದು ಬಿದ್ದಿತ್ತು. ವಿಳಾಸ ಪೂರ್ಣವಾಗಿ ಇಲ್ಲದ್ದರಿಂದ ಅದನ್ನು ಆ ವ್ಯಕ್ತಿಗೆ ತಲುಪಿಸಲಾಗಲಿಲ್ಲ. ಅಲ್ಲೇ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ವಿ.ಎಲ್. ನಾಗರಾಜ್ ಎಂಬ ವ್ಯಕ್ತಿ ಕುತೂಹಲದಿಂದ ಆ ಪಾರ್ಸೆಲ್ ತೆಗೆದು ನೋಡಿದಾಗ ಶಿವಾನಂದರು ಬರೆದ ‘ಸ್ಟೂಡೆಂಟ್ ಸಕ್ಸಸ್ ಇನ್ ದಿ ಲೈಫ್’ ಎಂಬ ಆಂಗ್ಲಪುಸ್ತಕ ಕಂಡಿತು. ಅದನ್ನು ಓದುತ್ತಿದ್ದ ಹಾಗೆ ನಾಗರಾಜರಿಗೆ ಒಂದು ಅಲೌಕಿಕ ಅನುಭವವಾಗಿ ಶಿವಾನಂದರ ಸಂದೇಶವು ಅವರ ಹೃದಯವನ್ನು ಆವರಿಸಿಬಿಟ್ಟಿತು. ಕೂಡಲೇ ಒಂದು ಪತ್ರ ಬರೆದು ಶಿವಾನಂದರಿಂದ ಅವರ ಇನ್ನಿತರ ಪುಸ್ತಕಗಳನ್ನು ತರಿಸಿ, ಕೂಲಂಕಶವಾಗಿ ಓದಿ, ಪ್ರೇರಿತರಾಗಿ, ಜೀವನಪರ್ಯಂತ ಅವರ ಸೇವೆ ಮಾಡಿಕೊಂಡಿರುತ್ತೇನೆ ಎಂದು ಸಂಕಲ್ಪಿಸಿಕೊಂಡರು. ತನ್ನ ಕೆಲವು ಸಹವರ್ತಿಗಳು ಮತ್ತು ಸ್ನೇಹಿತರೊಂದಿಗೆ ಸಮಾಲೋಚಿಸಿ, ಚಿಕ್ಕ ಬಜಾರ್ ಬೀದಿಯಲ್ಲಿ (ಟಾಸ್ಕರ್ ಟೌನ್) ಒಂದು ಚಿಕ್ಕ ರೂಮನ್ನು ಬಾಡಿಗೆಗೆ ಪಡೆದು ಅದರಲ್ಲಿ ದಿವ್ಯ ಜೀವನ ಸಂಘದ ಶಾಖೆಯೊಂದನ್ನು ಶಿವಾನಂದರ ಅನುಮತಿಯಿಂದ ಆರಂಭಿಸಿಯೇ ಬಿಟ್ಟರು. ಅವರ ಗುರುನಿಷ್ಠೆ ಎಷ್ಟಿತ್ತೆಂದರೆ, ಈ ಸಣ್ಣ ಶಾಖೆಯಿಂದ ಊಹಿಸಲೂ ಸಾಧ್ಯವಾಗದಂತಹ ಆಧ್ಯಾತ್ಮಿಕ ಚಟುವಟಿಕೆಗಳನ್ನು ಕೈಗೊಂಡು ಯಶಸ್ವಿಯಾಗಿ ಪೂರೈಸಿದರು. ಶಿವಾನಂದ ಆಂಗ್ಲ ಭಾಷೆಯ ನೂರಾರು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ, ಲಕ್ಷಾಂತರ ಪ್ರತಿಗಳನ್ನು ಮುದ್ರಿಸಿ, ಬೆಂಗಳೂರಿನ ಮತ್ತು ಕರ್ನಾಟಕದ ಅಸಂಖ್ಯಾತ ಭಕ್ತರಿಗೆ ತಲುಪಿಸಿದರು. ಇದಲ್ಲದೆ ದೊಡ್ಡ ಪ್ರಮಾಣದ ಆಧ್ಯಾತ್ಮಿಕ ಶಿಬಿರಗಳನ್ನು ನಡೆಸಿ ಋಷಿಕೇಶದ ಆಶ್ರಮದ ಹಿರಿಯ ಸಂತರಿಂದ ಪ್ರವಚನಗಳನ್ನು ಏರ್ಪಡಿಸಿದರು.

1950ರಲ್ಲಿ ಶಿವಾನಂದರು ಶಿಷ್ಯರೊಡನೆ ಬೆಂಗಳೂರಿಗೆ ಬಂದಾಗ ನಾಗರಾಜ್ ಮತ್ತು ಅವರ ಗೆಳೆಯರು ಗುರುದೇವರನ್ನು ಬೆಂಗಳೂರು ಅರಮನೆಯಲ್ಲಿ ತಂಗುವ ವ್ಯವಸ್ಥೆ ಮಾಡಿ ಮೂರು ದಿನಗಳ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಎಲ್ಲ ಕಾರ್ಯಕ್ರಮಗಳನ್ನು ಬಹಳ ಶಿಸ್ತಿನಿಂದ, ಅಚ್ಚುಕಟ್ಟಾಗಿ ಏರ್ಪಡಿಸಿದ ನಾಗರಾಜ್ ಮತ್ತು ಅವರ ತಂಡಕ್ಕೆ ಶಿವಾನಂದರು ಹೃತ್ಪೂರ್ವಕವಾಗಿ ಆಶೀರ್ವದಿಸಿದರು. ಈ ಸಮಯದಲ್ಲಿ ಗುರುದೇವರು ದಿವ್ಯ ಜೀವನ ಬೆಂಗಳೂರಿನ ಶಾಖೆಗೆ ಭೇಟಿಯಿತ್ತು, ಆ ಸಣ್ಣ ಕೋಣೆಯೊಂದನ್ನು ನೋಡಿ ಆಶ್ಚರ್ಯಗೊಂಡು, ‘ಈ ಪುಟ್ಟ ಕೋಣೆಯಿಂದ ನೀವು ಇಷ್ಟೆಲ್ಲಾ ಅದ್ಭುತ ಕೆಲಸಗಳನ್ನು ಮಾಡುತ್ತಿದ್ದೀರಿ. ನೀವು ನಿಜವಾಗಿಯೂ ಕರ್ಮಯೋಗಿಗಳು. ಈ ಸಣ್ಣ ಶಾಖೆಯು ಕ್ರಮೇಣ ದೊಡ್ಡದಾಗಿ ಬೆಳೆಯಲಿ, ದೊಡ್ಡದಾಗಿ ಬೆಳೆಯಲಿ’ ಎಂದು ಎರಡೂ ಕೈಗಳನ್ನು ಮೇಲೆತ್ತಿ ಹರಸಿದರು. ಅವರ ಹಾರೈಕೆಯಂತೆ ಇಂದು ಅದೇ ಜಾಗದಲ್ಲಿ ಒಂದು ಭವ್ಯವಾದ ನಾಲ್ಕು ಅಂತಸ್ತಿನ ಕಟ್ಟಡವು ನಿರ್ವಣವಾಗಿದೆ! ಇದರಲ್ಲಿ ಸತ್ಸಂಗಗಳನ್ನು ನಡೆಸಲು ಎರಡು ವಿಶಾಲ ಸಭಾಂಗಣಗಳಿವೆ. 75 ಸಂವತ್ಸರಗಳನ್ನು ಯಶಸ್ವಿಯಾಗಿ ದಾಟಿದ ದಿವ್ಯ ಜೀವನ ಸಂಘದ ಬೆಂಗಳೂರಿನ ಶಾಖೆಯು ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಇದಲ್ಲದೆ ‘ದಿವ್ಯ ಜೀವನ’ ಎಂಬ ದ್ವಿಭಾಷಾ ಮಾಸಪತ್ರಿಕೆಯನ್ನು (ಕನ್ನಡ-ಇಂಗ್ಲಿಷ್) ಪ್ರಕಟಿಸುತ್ತಿದೆ. ಸಂಘದ ಅಧ್ಯಕ್ಷರಾಗಿ ಎನ್. ಶಿವಪ್ರಸಾದ್ ಎಲ್ಲ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇದೇ ಜ. 12ರಿಂದ 14ರ ತನಕ ಅಮೃತ ಮಹೋತ್ಸವದ ನಿಮಿತ್ತ ವಿವಿಧ ಧಾರ್ವಿುಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದು, ದೇಶದ ನಾನಾ ಭಾಗಗಳ ಸಾಧುಸಂತರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕ: 9449027403

ಗಣೇಶ್​ಪ್ರಸಾದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net