

| ನವೀನ ಎಂ.ಬಿ. ದಾವಣಗೆರೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನಾಚರಣೆಯ ಅಮೃತ ಮಹೋತ್ಸವದ ನೆಪದಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ಗೆ ಉತ್ಸಾಹ ತುಂಬಲು ಬುಧವಾರ ನಡೆಯಲಿರುವ ರಾಜಕೀಯ ಸಮಾವೇಶಕ್ಕೆ ಬೆಣ್ಣೆನಗರಿ ದಾವಣಗೆರೆ ಸಜ್ಜಾಗಿದೆ. ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಇಂಥದ್ದೊಂದು ದೊಡ್ಡ ಸಮಾವೇಶ ಸಿದ್ದು ಅಮೃತ ಮಹೋತ್ಸವಕ್ಕಷ್ಟೇ ಸೀಮಿತವಾಗಿರದೆ ಅದರಾಚೆ ಅಧಿಕಾರದ ಜಪ ಮಾಡಲಿದೆ. ಪ್ರತಿಪಕ್ಷಗಳ ಎದೆನಡುಗಿಸಿರುವ ಈ ಸಮಾವೇಶದಿಂದ ದೊಡ್ಡ ಲಾಭದ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ.
ಸಿದ್ಧತೆಗಳು ಪೂರ್ಣ: ಮಳೆಯ ಕಣ್ಣಾಮುಚ್ಚಾಲೆ ಆಟದ ನಡುವೆ ಅಮೃತ ಮಹೋತ್ಸವ ಆಚರಣೆಗೆ ಶಾಮನೂರು ಅರಮನೆ ಮೈದಾನದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. 50 ಎಕರೆ ಜಾಗದಲ್ಲಿ 8 ಲಕ್ಷ ಚದರ ಅಡಿಯ ವಾಟರ್ ಪೂ›ಫ್ನ ಜರ್ಮನ್ ಶೆಡ್ ಪೆಂಡಾಲ್ ಹಾಕಲಾಗಿದೆ. ರಾಜ್ಯ ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಪೆಂಡಾಲ್ ನಿರ್ವಿುಸಿರುವುದು ಇದೇ ಮೊದಲು. 42 ಅಡಿ ಅಗಲ, 200 ಅಡಿ ಉದ್ದ, 8 ಅಡಿ ಎತ್ತರದಲ್ಲಿ ಪ್ರಧಾನ ವೇದಿಕೆ ಇರಲಿದೆ. ಇದರ ಎಡ-ಬಲ 48/30 ಅಡಿ ಉದ್ದಗಲದ, 4 ಅಡಿ ಎತ್ತರದ ಇನ್ನೆರಡು ವೇದಿಕೆ ಇವೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಡಾ. ಶಾಮನೂರು ಶಿವಶಂಕರಪ್ಪ ಸೇರಿ ಗಣ್ಯರು ಪ್ರಧಾನ ವೇದಿಕೆ ಅಲಂಕರಿಸುವರು. ವೇದಿಕೆ ಮೇಲೆ ಸಿದ್ದರಾಮಯ್ಯ ಅಮೃತ ಮಹೋತ್ಸವ ಎಂಬ ವಾಕ್ಯ ಬಿಟ್ಟರೆ ಬೇರಾವ ಬರಹವಿಲ್ಲ. 2.50 ಲಕ್ಷ ಆಸನಗಳನ್ನು ಹಾಕಲಾಗಿದೆ. ಪೆಂಡಾಲ್ ಹೊರಗೂ ಇಷ್ಟೇ ಪ್ರಮಾಣದ ಕುರ್ಚಿಗಳಿವೆ. 5 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು 2000 ಬಾಣಸಿಗರು ಅಡುಗೆ ತಯಾರಿಸುತ್ತಿದ್ದಾರೆ. 500 ವಿಐಪಿಗಳಿಗೆ ಪ್ರತ್ಯೇಕ ಡೈನಿಂಗ್ ಹಾಲ್ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಪಾಕ್ ಜತೆಗೆ ಪಲಾವ್, ಮೊಸರನ್ನ ಊಟದ ಮೆನು ಆಗಿದೆ. ಊಟ ಬಡಿಸಲು 400 ಕೌಂಟರ್ ತೆರೆಯಲಾಗಿದೆ. ಬೆಳಗ್ಗೆ 9-30 ರಿಂದ ಕಾರ್ಯಕ್ರಮ ಮುಗಿಯುವವರೆಗೆ ನಿರಂತರ ದಾಸೋಹ ಇರಲಿದೆ. ಮಂಗಳವಾರ ಬೆಳಗ್ಗೆಯಿಂದಲೇ ಅಡುಗೆಗೆ ಬೇಕಾದ ಸಿದ್ಧತೆಗಳು ಆರಂಭಗೊಂಡವು. ಬೆಂಗಳೂರಿನ ಎ.ಎಸ್. ಗ್ರೂಪ್ನ ಎ.ಸತೀಶ್ ನೇತೃತ್ವದ ತಂಡ ಸಿದ್ಧತೆಯಲ್ಲಿ ತೊಡಗಿತ್ತು. 80 ಟನ್ ಅಕ್ಕಿ, 15 ಟನ್ ಬೇಳೆ, 15 ಕೆಜಿಯ 700 ಟಿನ್ ಅಡುಗೆ ಎಣ್ಣೆ, 4 ಟನ್ ತುಪ್ಪ, 18 ಟನ್ ಈರುಳ್ಳಿ, 8 ಟನ್ ಟೊಮ್ಯಾಟೊ, 6 ಟನ್ ಹಸಿ ಮೆಣಸಿನಕಾಯಿ, 15 ಸಾವಿರ ನಿಂಬೆಹಣ್ಣು, 10 ಸಾವಿರ ತೆಂಗಿನಕಾಯಿಗಳು ಪಾಕಶಾಲೆಗೆ ಬಂದಿಳಿದಿವೆ. ಕಾರ್ಯಕ್ರಮ ವೀಕ್ಷಣೆಗೆ 24 ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ಸಂಘಟಕರಿಗೆ ಮಳೆ ಆತಂಕ: ಸಿದ್ದರಾಮಯ್ಯ ಬೆಂಬಲಿಗರ ಅಭಿಮಾನದ ಹೊಳೆಯೇ ಹರಿದಿದೆಯಾದರೂ ಮಳೆರಾಯನ ಎಂಟ್ರಿ ಸಂಘಟಕರಿಗೆ ಆತಂಕ ಮೂಡಿಸಿದೆ. ರಾತ್ರಿ ಸುರಿದ ಮಳೆಯಿಂದಾಗಿ ಕಾರ್ಯಕ್ರಮದ ಪೆಂಡಾಲ್ ಸುತ್ತಲೂ ಮಂಗಳವಾರ ಬೆಳಗ್ಗೆ ನೀರು ನಿಂತಿತ್ತು. ಕಾಲಿಟ್ಟಲ್ಲೆಲ್ಲ ಕೆಸರು ಮೆತ್ತಿಕೊಳ್ಳುತ್ತಿತ್ತು. ರಸ್ತೆ ಬದಿಯಲ್ಲಿ ಕಟ್ಟಿದ್ದ ಹಲವಾರು ಫ್ಲೆಕ್ಸ್ಗಳು ಮಳೆಯ ಹೊಡೆತಕ್ಕೆ ಸಿಕ್ಕು ನೆಲಕ್ಕುರುಳಿದ್ದವು. ತಕ್ಷಣ ಎಚ್ಚೆತ್ತ ಆಯೋಜಕರು ನಿಂತ ನೀರನ್ನು ಹರಿದು ಹೋಗುವ ವ್ಯವಸ್ಥೆ ಮಾಡಿದರು.
‘ಅಷ್ಟೇ ಅಲ್ಲ.. ದೇವರು, ಗಿವ್ರು ಅಂತೆಲ್ಲ ಜಾಸ್ತಿ ನಂಬಕ್ಕಿಲ್ಲ. ಮುಂದೇನೂ ಅಷ್ಟೆ. ಅವ ಎಲ್ಲಿ ಚುನಾವಣೆಗೂ ನಿಂತ್ರು ಗೆಲ್ತಾನೆ. ದೇವರು ಮತ್ತು ಜನರ ಆಶೀರ್ವಾದ ಇದ್ರೆ ಮತ್ತೆ ಮುಖ್ಯಮಂತ್ರಿನೂ ಆಗ್ತಾನೆ. ಜನರ ಸೇವೆನೂ ಮಾಡುತ್ತಾನೆ...’ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವರ ತಮಂದಿರಾದ ಸಿದ್ದರಾಮನಹುಂಡಿಯ ಸಿದ್ದೇಗೌಡ ಮತ್ತು ರಾಮೇಗೌಡರ ಹೆಮ್ಮೆಯ ನುಡಿಗಳಿವು. ‘ನಮ್ಮ ಮನೆಯಲ್ಲಿ ಅವನಷ್ಟು ಚೆನ್ನಾಗಿ ಮಾತಾಡೋರು ಯಾರು ಇಲ್ಲ. ಅವನಿಗೆ ಮಾತಾಡೋ ಕಲೆ ಅದೆ. ಅದು ಭಗವಂತ ಕೊಟ್ಟಿರೋದು. ಅವನಿಗೆ ದೇವರೇ ಬಲ. ಅವನು ರಾಜಕೀಯದಲ್ಲಿ ಇದ್ದಾನೆ ಅಂಥ ನಾವ್ಯಾರು ಬರಲಿಲ್ಲ. ಅಲ್ಲದೇ, ನಮಗೆ ಅವನಷ್ಟು ವಿದ್ಯೆ, ಮಾತು ಇಲ್ಲ. ಅವನೊಬ್ಬನಿಗೆ ಸಾಕು ರಾಜಕೀಯ ಅಂಥ ಸುಮ್ಮನಾದ್ವು. ಅವನು ಐದು ವರ್ಷ ಒಳ್ಳೆಯ ಆಡಳಿತ ಕೊಟ್ಟಿದ್ದಾನೆ. ಬಡವರ ನೋವನ್ನ ಅರ್ಥ ಮಾಡಿಕೊಂಡು ಅನ್ನಭಾಗ್ಯ ಯೋಜನೆ ಮಾಡ್ದ, ಇದರಿಂದ ಎಷ್ಟೋ ಜನರ ಹಸಿವು ನೀಗ್ತು. ನಮ್ಮ ಊರಿನ ರಸ್ತೆಗಳೆಲ್ಲ ಮೊದಲು ಹಳ್ಳ ಬಿದ್ದಿದ್ವು. ಇವನು ರಾಜಕೀಯಕ್ಕೆ ಬಂದ್ಮೇಲೆ ಊರು ಅಭಿವೃದ್ಧಿಯಾಗಿದೆ. ಮೊದಲು ಒಂದ್ ಬಸ್ಸಿತ್ತು. ಈಗ ಬಸ್ಸಿಗೇನು ತೊಂದ್ರೆ ಇಲ್ಲ ಎಂದು ಹರ್ಷ ಹಂಚಿಕೊಂಡರು.
ಒಂದೊಂದ್ಸಲ ಕುಣಿತಾರೆ: ಸ್ನೇಹಿತರ ಸಂಗಡವೇ ಜಾಸ್ತಿ. ಆಟದ ವಿಷ್ಯಕ್ಕೆ ಬಂದ್ರೆ, ವಾಲಿಬಾಲ್, ಕಬಡ್ಡಿ ಆಟ ಎಲ್ಲಾ ಆಡೋನು. ನಮ್ಮೂರ ಸಿದ್ದರಾಮೇಶ್ವರ ದೇವರ ಹಬ್ಬದಲ್ಲಿ ವೀರ ಮಕ್ಕಳು ಕುಣಿತಕ್ಕೆ ಪ್ರತಿ ಮನೆಯಿಂದ ತಪ್ಪದೆ ಒಬ್ರುನಾ ಕಳಸ್ಬೇಕು. ನಮ್ಮ ಮನೆ ಅಣ್ಣನ್ನ ಸೇರಿಸಿದ್ವು. ಅವನು ಬಲು ಜೋರಾಗಿ ಕುಣಿಯೋನು. ಈಗ ನನ್ನ ಮಗನ್ನ ಸೇರಿಸಿದ್ದೀನಿ. ಈಗ್ಲೂ ಪ್ರತಿವರ್ಷ ಹಬ್ಬಕ್ಕೆ ಬರ್ತಾನೆ. ಈಗ್ಲೂ ಒಂದೊಂದ್ಸಲ ಕುಣಿತಾನೆ ಎನ್ನುತ್ತಾರೆ ಅವರು.
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಲನಚಿತ್ರವನ್ನು ವಿವಿಧ ಭಾಷೆಗಳಲ್ಲಿ ನಿರ್ಮಾಣ ಮಾಡುವುದಾಗಿ ತೆಲಂಗಾಣದ ಉದ್ಯಮಿ ನಂಬರ್ ಒನ್ ಶ್ರೀಧರ್ ಹೇಳಿದರು. ಸಿದ್ದರಾಮಯ್ಯ ಅವರ ಜೀವನಾಧಾರಿತ ಆಟೋ ಬಯೋಗ್ರಫಿಯನ್ನು ತ್ರಿಡಿ ಲ್ಯಾಂಪಿಂಗ್ ಮೂಲಕ ಪ್ರದರ್ಶಿಸುವ ಕುರಿತು ಮಾಹಿತಿ ನೀಡಲು ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅಭಿಮಾನಿಗಳ ಜತೆಗೆ ಸೇರಿ ಚಿತ್ರ ನಿರ್ಮಾಣ ಮಾಡುವ ಉದ್ದೇಶವಿದ್ದು, ಈ ಕುರಿತು ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿರುವುದಾಗಿ ತಿಳಿಸಿದರು.
ಹುಬ್ಬಳ್ಳಿ: ಇಲ್ಲಿಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ರಾತ್ರಿ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮುಖಂಡರು ಹೂಗುಚ್ಛ ನೀಡಿ ಸ್ವಾಗತಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಎಲ್ಲ ಮುಖಂಡರು, ರಾಹುಲ್ ಗಾಂಧಿ ಬರುವಿಕೆಗಾಗಿ ವಿಮಾನ ನಿಲ್ದಾಣದ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯ್ದರು. ರಾತ್ರಿ 8.42ರ ಸುಮಾರಿಗೆ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೆವಾಲಾ ಆಗಮಿಸಿದರು. ಸರತಿ ಸಾಲಿನಲ್ಲಿದ್ದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ, ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಡಾ. ಅಂಜಲಿ ನಿಂಬಾಳ್ಕರ್, ಸತೀಶ ಜಾರಕಿಹೊಳಿ, ಕುಸುಮಾವತಿ ಶಿವಳ್ಳಿ, ಪ್ರಸಾದ ಅಬ್ಬಯ್ಯ ಸೇರಿ ಬಹಳಷ್ಟು ಜನರು ಹೂವಿನ ಹಾರ, ಹೂಗುಚ್ಛ ನೀಡಿ ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಂಡರು. ಕೆಲ ಹೊತ್ತಿನಲ್ಲಿಯೇ ನಿಲ್ದಾಣದಿಂದ ಹೊರ ಬಂದ ರಾಹುಲ್ ವಾಹನ ಹತ್ತಿದರು. ಕಾರ್ಯಕರ್ತರು, ರಾಹುಲ್ ಗಾಂಧಿಗೆ ಜೈಕಾರ ಮೊಳಗಿಸಿದರು. ವಾಹನ ಮುಂದೆ ಬಿಡದಂತೆ ಕಾರ್ಯಕರ್ತರು ಅಡ್ಡಿಯಾಗಿದ್ದರು. ಸ್ಥಳದಲ್ಲಿದ್ದ ಪೊಲೀಸರು, ಕಾರ್ಯಕರ್ತರನ್ನು ದೂರ ತಳ್ಳುವ ಮೂಲಕ ವಾಹನ ಸಂಚಾರವನ್ನು ಸುಗಮಗೊಳಿಸಿದರು.
ಅಹಿಂದ ಒಗ್ಗಟ್ಟು: 2018ರಲ್ಲಿ ಅಧಿಕಾರ ಕೈ ತಪ್ಪಿದರೂ ಜೆಡಿಎಸ್ ಜತೆ ಹಾಗೂಹೀಗೂ ಏಗಿ ಸರ್ಕಾರ ನಡೆಸಿದ್ದ ರಾಜ್ಯ ಕಾಂಗ್ರೆಸ್ಗೆ ಪಕ್ಷದ ಪರವಾದ ನಿಚ್ಚಳ ಅಲೆ ಏಳಬೇಕೆಂಬ ಬಯಕೆ ಇದೆ. ಅಹಿಂದ ಒಗ್ಗಟ್ಟು ಈ ಕಾರ್ಯಕ್ರಮದ ಮೂಲಕ ಮತ್ತೆ ಸಮೀಕರಣಗೊಂಡರೆ ಖಂಡಿತ ಲಾಭವಾಗುತ್ತದೆ ಎಂದು ಆಶಯ ಇಟ್ಟುಕೊಂಡಿದೆ.