

ತಮಿಳುನಾಡು: ಕಾಲಿವುಡ್ನ ಸೂಪರ್ಸ್ಟಾರ್, ತಲೈವಾ ನಟ ರಜನಿಕಾಂತ್ ಅಭಿನಯದ 'ಜೈಲರ್' ಆಗಸ್ಟ್ 10 ರಂದು ಜಾಗತಿಕ ಬಿಡುಗಡೆಗೊಂಡು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮುಖೇನ ಬ್ಲಾಕ್ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿತು. ಸದ್ಯ ಈ ಗೆಲುವಿನ ಬೆನ್ನಲ್ಲೇ ಲೈಕಾ ಪ್ರೊಡಕ್ಷನ್ಸ್ ರಜನಿ ಅವರ ಮುಂದಿನ ಚಿತ್ರ 'ತಲೈವರ್ 170' ಅನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ತಾತ್ಕಾಲಿಕವಾಗಿ 'ತಲೈವರ್ 170' ಎಂಬ ಟೈಟಲ್ ಘೋಷಿಸಿರುವ ಈ ಚಿತ್ರದ ಬಗ್ಗೆ ತಲೈವಾ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಬಗ್ಗೆ ಹೊಸ ಮಾಹಿತಿಯನ್ನು ಪಡೆಯಲು ಸಿನಿಪ್ರಿಯರು ಮತ್ತು ಫ್ಯಾನ್ಸ್ ಈ ಹಿಂದಿನಿಂದಲೂ ಕಾಯುತ್ತಿದ್ದು, ಚಿತ್ರದಲ್ಲಿ ಯಾವ ಸ್ಟಾರ್ ಕಲಾವಿದರು ನಟಿಸಲಿದ್ದಾರೆ? ಯೋಜನೆಯ ಟೀಸರ್ ಅಥವಾ ಮೊದಲ ಗ್ಲಿಂಪ್ಸ್ ವಿಡಿಯೋ ಯಾವಾಗ ಹೊರಬರಲಿದೆ? ಎಂಬ ಹತ್ತು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿರುವ 'ತಲೈವರ್ 170' ಬಗ್ಗೆ ಚಿತ್ರತಂಡ ಹೊಸ ಮಾಹಿತಿಯೊಂದನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಶಾಹೆನ್‌ಶಾ ಅಮಿತಾಬ್ ಅವರು ಚಿತ್ರದ ಭಾಗವಾಗಲಿದ್ದಾರೆ ಎಂದು ಪೋಸ್ಟರ್ನಲ್ಲಿ ಚಿತ್ರತಂಡ ಉಲ್ಲೇಖಿಸಿದೆ. ಈ ಮೂಲಕ 32 ವರ್ಷದ ಬಳಿಕ ಬಾಲಿವುಡ್ನ ದಿಗ್ಗಜ ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).