ಅಭಿಷೇಕ್​ ಬಚ್ಚನ್​ ನಟನೆಯ 'ಘೂಮರ್' ಸಿನಿಮಾ ನೋಡಿ ಕಣ್ಣೀರಿಟ್ಟ ಬಿಗ್ ಬಿ…

amithab
Published on

ಬೆಂಗಳೂರು: ಹಲವಾರು ಹಿನ್ನಡೆಗಳನ್ನು ಎದುರಿಸಿದ ನಂತರ ಅಭಿಷೇಕ್ ಬಚ್ಚನ್ ಇತ್ತೀಚೆಗೆ ಪ್ರಮುಖ ಪಾತ್ರಗಳ ಮೇಲೆ ಮಾತ್ರ ಗಮನಹರಿಸುತ್ತಿದ್ದಾರೆ. ಪರಿಣಾಮವಾಗಿ, ಅವರು ನಟಿಸುತ್ತಿರುವ ಚಿತ್ರಗಳ ಸಂಖ್ಯೆ ಸಹ ಕಡಿಮೆಯಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲದ ಅನುಪಸ್ಥಿತಿಯ ನಂತರ ಅಭಿಷೇಕ್, ಈಗ ಆರ್ ಬಾಲ್ಕಿ ನಿರ್ದೇಶನದ ಬಹು ನಿರೀಕ್ಷೆಯ ಚಿತ್ರ 'ಘೂಮರ್‌'ನೊಂದಿಗೆ ಪುನರಾಗಮನ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಅವರು ಸೈಯಾಮಿ ಖೇರ್ ಜೊತೆಗೆ ನಟಿಸುತ್ತಿದ್ದಾರೆ.

ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಚಲನಚಿತ್ರವನ್ನು ಅಭಿಷೇಕ್ ಅವರ ತಂದೆ ಅಮಿತಾಬ್ ಬಚ್ಚನ್ ಚಲನಚಿತ್ರವನ್ನು ಒಂದಲ್ಲ, ಎರಡು ಬಾರಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿರುವ ಅಮಿತಾಬ್, "ಚಿತ್ರ ನೋಡಿ ನನಗೆ ಕಣ್ಣಲ್ಲಿ ನೀರು ಬಂತು. ಘೂಮರ್ ಅನ್ನು ಎರಡು ಬಾರಿ ನೋಡಿದೆ. ಭಾನುವಾರ ಮಧ್ಯಾಹ್ನ, ತದನಂತರ ರಾತ್ರಿ'' ಎಂದು ತಿಳಿಸಿದ್ದಾರೆ.

ಸಿನಿಮಾದ ಭಾವನೆಗಳು ಕ್ರಿಕೆಟ್‌ಗೆ ಸಂಬಂಧಿಸಿವೆ ಎಂದು ಹೇಳಿರುವ ಅಮಿತಾಭ್, ಇದು ಓರ್ವ ಹುಡುಗಿ ಮತ್ತು ಅವಳ ಮಹತ್ವಾಕಾಂಕ್ಷೆಯ ಕಥೆ. ಕ್ರೀಡೆಯ ಪರಿಣಾಮ ಕೇವಲ ಕ್ರೀಡೆಯ ಮೇಲಲ್ಲ, ಇಡೀ ಕುಟುಂಬದ ಮೇಲೂ ಆಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ. ಅತ್ಯಂತ ಸಂಕೀರ್ಣವಾದ ವಿಚಾರವನ್ನು ನಮ್ಮ ಮುಂದೆ ಅತ್ಯಂತ ಸರಳವಾಗಿ ಹೆಣೆದಿದ್ದಾರೆ ಆರ್.ಬಾಲ್ಕಿ.

"ಸೋತವರು ಹೇಗೆ ಕಷ್ಟ ಅನುಭವಿಸುತ್ತಾರೆ ಎಂದು ನನಗೆ ತಿಳಿದಿದೆ. ವಿಜೇತರು ಹೇಗೆ ಅನುಭವಿಸುತ್ತಾರೆ ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಒಂದು ಹಂತದಲ್ಲಿ ನಾನು ವೈಫಲ್ಯವನ್ನು ಎದುರಿಸಿದ್ದೇನೆ ಮತ್ತು ಅದು ಹೇಗಿರುತ್ತದೆ ಎಂದು ತಿಳಿದಿದೆ. ಇದು ನಾವೆಲ್ಲರೂ ಎದುರಿಸುತ್ತಿರುವ ಸವಾಲು. ಅದಕ್ಕಾಗಿ ಶ್ರಮಿಸುತ್ತೇವೆ. ಅದಕ್ಕಾಗಿ ಹೋರಾಡುತ್ತೇವೆ, ನಂತರ ಬಾಗಿಲು ಮುಚ್ಚಿರುವುದನ್ನು ನಾವು ಕಂಡುಕೊಂಡಾಗ, ನಾವು ಅದನ್ನು ಭೇದಿಸಿ ಪ್ರವೇಶಿಸುತ್ತೇವೆ. ಇದು ಕಲಿಕೆಯ ಆದರ್ಶವಾಗಿದೆ'' ಎಂದು ಅಮಿತಾಭ್ ಬರೆದುಕೊಂಡಿದ್ದಾರೆ.

ಅಪಘಾತವೊಂದರಲ್ಲಿ ಬಲಗೈಯನ್ನು ಕಳೆದುಕೊಂಡ ಪ್ರತಿಭಾವಂತ ಬ್ಯಾಟ್ಸ್‌ಮನ್ ಅನಿನಾಳ ಸುತ್ತ 'ಘೂಮರ್' ಕಥೆ ಸುತ್ತುತ್ತದೆ. ಒಬ್ಬ ವಿಫಲ ಕ್ರಿಕೆಟಿಗ ಅವಳಿಗೆ ಹೊಸ ಭರವಸೆಯನ್ನು ನೀಡುತ್ತಾನೆ. ಅವಳ ಅದೃಷ್ಟವನ್ನು ಬದಲಾಯಿಸಲು ತರಬೇತಿ ನೀಡುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net