ಅಮಿತ್ ಷಾ ಭರ್ಜರಿ ರೋಡ್ ಶೋ; ದೇಶದ ಭದ್ರತೆ, ಸುರಕ್ಷತೆಗಾಗಿ ಬಿಜೆಪಿ ಬೆಂಬಲಿಸಲು ಮನವಿ

oplus_2
oplus_2
Published on


ಅಮಿತ್ ಷಾ, ರೋಡ್, ಶೋ, ಬಿಜೆಪಿ, ಗೆಲ್ಲಿಸಲು, ಮನವಿ, Amit Shah, road, show, BJP, to win, appeal


ರಾಣೆಬೆನ್ನೂರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಬುಧವಾರ ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚನೆ ಮಾಡಿದರು.
ರೋಡ್ ಶೋ ವೇಳೆ ಪಾಲ್ಗೊಂಡಿದ್ದ ಸಾವಿರಾರು ಜನರತ್ತ ಕೈ ಬೀಸಿದ ಅವರು ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ನಗರದ ಕುರುಬಗೇರಿ ಕ್ರಾಸ್‌ನಿಂದ ಆರಂಭಗೊಂಡ ರೋಡ್ ಶೋ ದುರ್ಗಾ ವೃತ್ತ, ಎಂ.ಜಿ. ಮಾರುಕಟ್ಟೆ, ನೆಹರು ಮಾರುಕಟ್ಟೆ, ಪೋಸ್ಟ್ ವೃತ್ತದ ಮೂಲಕ ಅಶೋಕ ವೃತ್ತಕ್ಕೆ ಬಂದು ತಲುಪಿತು.
ರೋಡ್ ಶೋನಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರಿಂದ ಪಕ್ಷದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿತು. ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಗ್ರಾಮೀಣ ಭಾಗದ ಮಹಿಳೆಯರು, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಧ್ವಜ ಹಿಡಿದು ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಅಮಿತ್ ಷಾ ಅರಿಗೆ ಕಾರ್ಯಕರ್ತರು ಹೂವಿನ ಸುರಿಮಳೆ ಗೈದರು. ಅಮಿತ್ ಷಾ ಕೂಡ ಜನರತ್ತ ಹೂವು ಹಾಕಿ ಮತ ನೀಡುವಂತೆ ಮನವಿ ಮಾಡಿದರು.
ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾ, ದೇಶದ ಭದ್ರತೆ ಹಾಗೂ ಸುರಕ್ಷತೆಗಾಗಿ ಎಲ್ಲರೂ ಬಿಜೆಪಿಗೆ ಮತ ನೀಡಬೇಕು. ಕಮಲದ ಬಟನ್ ಒತ್ತಿದರೆ ಮೋದಿಗೆ ಓಟ್ ಹಾಕಿದಂತಾಗುತ್ತದೆ. ಆ ಮೂಲಕ ಬಸವರಾಜ ಬೊಮ್ಮಾಯಿ ಆಯ್ಕೆ ಮಾಡಿ ಅವರನ್ನು ದೆಹಲಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಮಾಜಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಸಂತೋಷಕುಮಾರ ಪಾಟೀಲ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net