

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಎಸಿ, ಎಸ್ಟಿ, ಒಬಿಸಿ ಮೀಸಲಾತಿ ತೆಗೆದು ಹಾಕುತ್ತೇವೆ ಎಂದು ಭಾಷಣವನ್ನು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ದೆಹಲಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ಎಕ್ಸ್ನಲ್ಲಿ ನಕಲಿ ವಿಡಿಯೋವನ್ನು ಪೋಸ್ಟ್ ಮಾಡಲು ಬಳಸಲಾಗಿದೆ ಎಂದು ಹೇಳಲಾದ ರೇವಂತ್ ರೆಡ್ಡಿ ಅವರ ಮೊಬೈಲ್ ಅನ್ನು ತೆಗೆದುಕೊಂಡು ಬರುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಮಾಧ್ಯಮಗಳು ಮಾಡಿವೆ.
ಮೇ 1ಕ್ಕೆ ವಿಚಾರಣೆಗೆ ಬರುವಂತೆ ದೆಹಲಿ ಪೊಲೀಸರು ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಹೇಳಿದ್ದಾರೆ. ಜೊತೆಗೆ ಅವರು ಬಳಸಿದ ಎಲ್ಲಾ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ತರುವಂತೆ ತಿಳಿಸಿದ್ದಾರೆ. ಅಮಿತ್ ಷಾ ಅವರ ಭಾಷಣವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಕಾಂಗ್ರೆಸ್ ನಾಯಕರು ಸೇರಿದಂತೆ ಇನ್ನೂ ಐದು ಜನರಿಗೆ ದೆಹಲಿ ಪೊಲೀಸರು ಸಮನ್ಸ್ ನೀಡಲಿದ್ದಾರೆ.
ಅಮಿತ್ ಷಾ ಕುರಿತಾದ ನಕಲಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯ ದೂರಿನ ಮೇರೆಗೆ ದೆಹಲಿ ಪೊಲೀಸರು ಸಿಎಂ ರೇವಂತ್ ರೆಡ್ಡಿ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಿದ್ದರು.