

ರಾಣೆಬೆನ್ನೂರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಕೂಡಲೇ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಂಸ್ಥೆ , ಭಾರತ ವಿದ್ಯಾಥಿರ್ ಪೆಡರೇಷನ್ ಸೇರಿ ವಿವಿಧ ಸಂ&ಸಂಸ್ಥೆಗಳ ವತಿಯಿಂದ ಶನಿವಾರ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸೇವಾ ಸಂಸ್ಥೆಯ ಅಧ್ಯಕ್ಷ ಬೀರಪ್ಪ ಲಮಾಣಿ ಮಾತನಾಡಿ, ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸಭೆಯಲ್ಲಿ ಹೇಳಿದ್ದು ಖಂಡನೀಯ.
ಈ ಹೇಳಿಕೆ ಅಂಬೇಡ್ಕರ್ ರವರ ಬಗ್ಗೆ ಹಾಗೂ ದಲಿತರ ಬಗೆಗಿನ ಅಸಹನೆಯನ್ನು ಹೊರಹಾಕಿದಂತಿದೆ. ಆದ್ದರಿಂದ ಕೂಡಲೇ ರಾಷ್ಟ್ರಪತಿಯವರು ಸೂಕ್ತ ಕ್ರಮ ಕೈಗೊಂಡು ಅಮಿತ್ ಶಾ ಅವರನ್ನು ಮಂತ್ರಿ ಸ್ಥಾನದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಪ್ರಮುಖರಾದ ಬಸವರಾಜ ಸಾವಕ್ಕನವರ, ಶ್ರೀಧರ ಸಿ., ಆಂಜನೇಯ ಚಲವಾದಿ, ಪರಶುರಾಮ ಕುರುವತ್ತಿ, ಗುಡ್ಡಪ್ಪ ಮಡಿವಾಳರ, ನವೀನ ಲಮಾಣಿ, ಮಾಲತೇಶ ಸಾವಕ್ಕನವರ, ಗುಡ್ಡೇಶ ಮದ್ಲೇರ, ಸಂತೋಷ ಸಾ ಸಾವಕ್ಕನವರ ಮತ್ತಿತರರು ಪಾಲ್ಗೊಂಡಿದ್ದರು.