ಚಿತ್ರೀಕರಣಕ್ಕೆ ವಾಪಸಾದ ಸಮಂತಾ; ಅನಾರೋಗ್ಯದ ನಡುವೆಯೂ ನಟನೆಯಲ್ಲಿ ಬಿಜಿ

Samantha
Published on

ಸಮಂತಾ, ಮಯೋಸಿಟಿಸ್ ಎಂಬ ಸ್ನಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಿದೆ. ಹೀಗಾಗಿಯೇ ಕಳೆದ ಕೆಲವು ತಿಂಗಳಿನಿಂದ ಅವರು ಸಿನಿಮಾ ಚಿತ್ರೀಕರಣ, ಪ್ರಚಾರ ಹಾಗೂ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಅವರು ಸುದೀರ್ಘ ಬ್ರೇಕ್ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಅನಾರೋಗ್ಯದ ನಡುವೆಯೂ ಚಿತ್ರತಂಡಗಳಿಗೆ ಸಮಸ್ಯೆ ಆಗಬಾರದೆಂದು ಸಮಂತಾ, ‘ಯಶೋದ’ ಚಿತ್ರದ ಸುದ್ದಿಗೋಷ್ಠಿಗೆ ಬಂದಿದ್ದರು. ಜತೆಗೆ ಕೆಲವು ದಿನಗಳ ಹಿಂದಷ್ಟೇ ರಿಲೀಸ್​ಗೆ ರೆಡಿಯಾಗಿರುವ ‘ಶಾಕುಂತಲಂ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೂ ಆಗಮಿಸಿದ್ದರು.

ಅನಾರೋಗ್ಯದಿಂದಾಗಿ ಸಮಂತಾ ಕೆಲವು ಚಿತ್ರಗಳಿಂದ ಹೊರನಡೆದಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಸಿಟಡೆಲ್ ಎಂಬ ವೆಬ್​ಸರಣಿಯ ಚಿತ್ರೀಕರಣದಲ್ಲಿ ಸಮಂತಾ ಭಾಗವಹಿಸಿದ್ದಾರೆ. ರುಸ್ಸೋ ಬ್ರದರ್ಸ್ ನಿರ್ವಣದ ಇಂಗ್ಲೀಷ್ ವೆಬ್ ಸರಣಿ ‘ಸಿಟಡೆಲ್’ನ ಭಾರತೀಯ ಅವತರಣಿಕೆಯಾಗಿದ್ದು, ಹಿಂದಿಯಲ್ಲಿ ರಾಜ್ ಮತ್ತು ಡಿಕೆ ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್ ನಟ ವರುಣ್ ಧವನ್ ನಾಯಕನಾಗಿದ್ದು, ಸಮಂತಾ ನಾಯಕಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಮೊದಲ ಹಂತದ ಚಿತ್ರೀಕರಣದಲ್ಲಿ ನಾಯಕ ವರುಣ್ ಧವನ್ ಮಾತ್ರ ಆಕ್ಷನ್ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ವರುಣ್ ಜತೆಗೀಗ ಸಮಂತಾ ಕೂಡ ಸೇರಿಕೊಂಡಿದ್ದಾರೆ. ‘ಸಿಟಡೆಲ್’ನ ಈ ಹಂತದ ಚಿತ್ರೀಕರಣ ಪೂರ್ಣಗೊಂಡ ಬಳಿಕ ಸಮಂತಾ, ವಿಜಯ್ ದೇವರಕೊಂಡಗೆ ನಾಯಕಿಯಾಗಿರುವ ‘ಖುಷಿ’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರ ಬೆನ್ನಲ್ಲೇ ಫೆ. 17ರಂದು ‘ಶಾಕುಂತಲಂ’ ಚಿತ್ರ ಬಿಡುಗಡೆಯಾಗಲಿದ್ದು, ಅದರ ಪ್ರಚಾರದಲ್ಲೂ ಭಾಗವಹಿಸಲಿದ್ದಾರೆ ಎನ್ನಲಾಗಿದೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net