Tejashwi Yadav | 243 ಕ್ಷೇತಗಳಲ್ಲೂ ನಾನೇ ಅಭ್ಯರ್ಥಿ ಅಂದ್ರು ತೇಜಸ್ವಿ ಯಾದವ್​​; ಕಾಂಗ್ರೆಸ್​​ಗೆ ಬಿಸಿ ತುಪ್ಪವಾಗ್ತಿದಾರಾ ಲಾಲೂ ಪುತ್ರ..?

Tejashwi Yadav Rahul Gandhi,
Published on

Tejashwi Yadav: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳನ್ನು ಪಡೆಯಲು ಮಹಾಘಟಬಂಧನ್​​ದ ಎಲ್ಲ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸುತ್ತಿವೆ, ಈ ನಡುವೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ರಾಜ್ಯದ ಜನರಿಗೆ ಅಚ್ಚರಿಯ ಮನವಿ ಮಾಡಿದ್ದು, ಎಲ್ಲಾ 243 ಕ್ಷೇತ್ರಗಳಲ್ಲೂ ತಮ್ಮ ಹೆಸರಿನಲ್ಲಿಯೇ ಮತ ಚಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.

ಶನಿವಾರ(ಸೆ 13) ಮುಜಫರ್‌ಪುರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಯಾದವ್, ಈ ಬಾರಿ ತೇಜಸ್ವಿ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ. ಅದು ಬೋಚಹಾನ್ ಆಗಿರಲಿ ಅಥವಾ ಮುಜಫರ್‌ಪುರವಾಗಲಿ, ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಭಾವಿಸಿ ನನ್ನ ಹೆಸರಿನಲ್ಲಿ ಮತ ಚಲಾಯಿಸಿ. ನಾನು ಬಿಹಾರವನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತೇನೆ, ನಾವೆಲ್ಲರೂ ಒಟ್ಟಾಗಿ ಈ ಸರ್ಕಾರವನ್ನು ಉರುಳಿಸೋಣ ಎಂದರು.

ಮಹಾಘಟಬಂಧನದೊಳಗೆ ಟಿಕೆಟ್​​ ಹಂಚಿಕೆ ವಿಷಯವಾಗಿ ಸಾಕಷ್ಟು ಗೊಂದಲ ಏರ್ಪಟ್ಟಿದ್ದು, ಜಾಖಂಡ್​​ ಸಿಎಂ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಪಶುಪತಿ ಪರಾಸ್ ನೇತೃತ್ವದ ಲೋಕ ಜನಶಕ್ತಿ ಪಕ್ಷವನ್ನು ಸೇರ್ಪಡೆಗೊಳಿಸುವ ಮೂಲಕ ಅದು ಇನ್ನಷ್ಟು ಜಟಿಲಗೊಂಡಿದೆ. ಈ ಹಿಂದಿನ 2020ರ ಬಿಹಾರ ವಿದಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ 144 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 70 ಸ್ಥಾನಗಳಲ್ಲಿ ಸ್ಫರ್ಧಿಸಿದ್ದ ಕಾಂಗ್ರೆಸ್ 19 ಸ್ಥಾನಗಳನ್ನು ಬಾಚಿಕೊಂಡಿತ್ತು. ಸದ್ಯ ಮತದಾರರ ಅಧಿಕಾರ ಯಾತ್ರೆ ಮತ್ತು ಮತ ಕಳ್ಳತನ ಸಂದೇಶದ ಹೊತ್ತು ಬಿಹಾರದಲ್ಲಿ ಹೊಸ ರಾಜಕೀಯ ಕ್ರಾಂತಿ ಆರಂಭಿಸಿರುವ ಕಾಂಗ್ರೆಸ್,​​ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಷಯವಾಗಿ ಮಾತನಾಡಿರುವ ಬಿಹಾರದ ಕಾಂಗ್ರೆಸ್‌ ಉಸ್ತುವಾರಿ ಕೃಷ್ಣ ಅಲ್ಲಾವರು, ಆರ್‌ಜೆಡಿ ಕೆಲವು ಸ್ಥಾನಗಳನ್ನು ಬಿಟ್ಟುಕೊಡಬೇಕು ಮತ್ತು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಾಗಬೇಕು ಎಂದಿದ್ದಾರೆ. ಹೊಸ ಪಕ್ಷಗಳು ಮೈತ್ರಿಕೂಟಕ್ಕೆ ಸೇರ್ಪಡೆಯಾಗಿರುವುದರಿಂದ ಪ್ರತಿಯೊಂದು ಪಕ್ಷವೂ ತಮ್ಮಿಂದಾದ ಕೊಡುಗೆಯನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕಳೆದ ಬಾರಿ ಸ್ಪರ್ಧಿಸಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಯಸುತ್ತಿದೆ ಎಂದು ಮೂಲಗಳು ತಿಳಿಸಿದ್ದು, ಇತರ ಮಿತ್ರಪಕ್ಷಗಳಿಗೆ ಅವಕಾಶ ನೀಡಬೇಕಿರುವ ಹಿನ್ನಲೆಯಲ್ಲಿ ಕೇಳಿದಷ್ಟು ಸೀಟ್​​ ನೀಡಲು ಆರ್​ಜೆಡಿ ಒಲವು ತೊರಿಲ್ಲ ಎನ್ನಲಾಗುತ್ತಿದೆ.

ಒತ್ತಡ ತಂತ್ರ?

ಈ ಹಿಂದೆ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದ ಯಾದವ್ ಅವರ ಇತ್ತೀಚಿನ ಹೇಳಿಕೆಗಳನ್ನು ಆರ್‌ಜೆಡಿಯ ಮಿತ್ರಪಕ್ಷಗಳ ಮೇಲೆ ಒತ್ತಡ ಹೇರುವ ಪ್ರಯತ್ನವೆಂದು ಬಿಜೆಪಿ ವ್ಯಾಖ್ಯಾನಿಸಿದೆ. ಬಿಹಾರದ ಜನರು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮಾತ್ರ ಮತ ಚಲಾಯಿಸುತ್ತಾರೆ ಎಂದು ಬಿಜೆಪಿ ವಕ್ತಾರ ನೀರಜ್ ಕುಮಾರ್ ತಿಳಿಸಿದ್ದಾರೆ.

ತೇಜಸ್ವಿ ಯಾದವ್ ಕನಸು ಕಾಣುವುದನ್ನು ನಿಲ್ಲಿಸಬೇಕು, ಅವರ ಪಕ್ಷಕ್ಕೆ 243 ಸ್ಥಾನಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧಿಸುವ ಶಕ್ತಿ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ, ಈ ರೀತಿಯ ಹೇಳಿಕೆಗಳ ಮೂಲಕ ಆರ್​​ಜೆಡಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಲೇ ಇರಬಹುದು, ಆದರೆ ಬಿಹಾರದ ಜನರಿಗೆ ನಿಮ್ಮ ಮೇಲೆ ನಂಬಿಕೆ ಇಲ್ಲ. ಮೇವು ಹಗರಣ ಮತ್ತು ಉದ್ಯೋಗಕ್ಕಾಗಿ ಭೂಮಿ ಹಗರಣದ ವಿಷಯದಲ್ಲಿ ತೇಜಸ್ವಿ ಮತ್ತು ಅವರ ಪಕ್ಷ ಯಾವಾಗಲೂ ನೆನಪಿರುತ್ತದೆ ಎಂದರು.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದ ಮತದಾರರ ಅಧಿಕಾರ ಯಾತ್ರೆಯ ಭಾಗವಾಗಿದ್ದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ, ಬಿಜೆಪಿ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net