

ವಾಷಿಂಗ್ಟನ್: ಚೀನಾದಲ್ಲಿ ಭಾರಿ ಅನಾಹುತ ಉಂಟುಮಾಡಿರುವ ಕರೊನಾ ಸೋಂಕು ಜಾಗತಿಕವಾಗಿ ಹರಡುವಿಕೆ ಬಗ್ಗೆ ಅಮೆರಿಕದ ಬೇಹುಗಾರಿಕಾ ದಳ ಕಟ್ಟೆಚ್ಚರದಿಂದ ಗಮನಿಸುತ್ತಿದೆ. ಈ ಮಾರಣಾಂತಿಕ ವೈರಸ್ ಭಾರತದಲ್ಲಿ ವ್ಯಾಪಕವಾದರೆ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗುತ್ತದೆ ಎಂದು ಬೇಹುಗಾರಿಕ ದಳ ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಸದ್ಯ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿ ಯಾಗಿವೆ. ಇದು ವ್ಯಾಪಕವಾದರೆ ಹತೋಟಿಗೆ ತರುವುದು ಬಹಳ ಕಷ್ಟ. ಏಕೆಂದರೆ ಅತಿಯಾದ ಜನಸಂಖ್ಯೆ, ಆರೋಗ್ಯ ಸೇವೆಯ ಅಲಭ್ಯತೆ, ಸೋಂಕು ತಡೆಗೆ ಸಂಪನ್ಮೂಲ ಕೊರತೆಯ ಕಾರಣ ವೈರಸ್ಗೆ ಕಡಿವಾಣ ಹಾಕಲು ಆಗುವುದಿಲ್ಲ. ಹೀಗಾಗಿ ಭಾರತ ಈ ಸೋಂಕಿನ ಬಗ್ಗೆ ಅತ್ಯಂತ ಜಾಗರೂಕತೆ ವಹಿಸಬೇಕು ಎಂದು ಸಲಹೆ ನೀಡಿದೆ.
ಭಾರತದಲ್ಲಿ ಪ್ರತಿ ಚದರ ಕಿ.ಮೀ.ಗೆ 420 ಜನರು ವಾಸಮಾಡುತ್ತಾರೆ. ಚೀನಾಕ್ಕೆ (ಪ್ರತಿ ಚ.ಕಿಮೀ.ಗೆ 148 ಜನ) ಹೋಲಿಸಿದರೆ ಜನ ಸಾಂದ್ರತೆ ಸುಮಾರು ಮೂರುಪಟ್ಟು ಹೆಚ್ಚು. ಹೀಗಾಗಿ ವೈರಸ್ ವ್ಯಾಪಕವಾದರೆ ಕಾಡ್ಗಿಚಿನಂತೆ ವೇಗ ಪಡೆಯುತ್ತದೆ ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಗುಪ್ತಚರ ವಿಷಯಕ್ಕೆ ಸಂಬಂಧಿಸಿದ ಸಮಿತಿಗೆ ಸಲ್ಲಿಸಲಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇರಾನ್ನಲ್ಲೂ ವೈರಸ್ ಹಾವಳಿ ಹೆಚ್ಚಾಗಿರುವುದರಿಂದ ಅಮೆರಿಕದ ಬೇಹುಗಾರಿಕಾ ದಳ ಕೊಲ್ಲಿ ರಾಷ್ಟ್ರದಲ್ಲೂ ಅತೀವ ನಿಗಾ ವಹಿಸಿದೆ ಎಂದು ವರದಿ ತಿಳಿಸಿದೆ.
ಇರಾನ್ನಲ್ಲಿ ಕರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಕಳವಳಕಾರಿಯಾಗಿದೆ. ಇದನ್ನು ತಡೆಗಟ್ಟಲು ಅಲ್ಲಿನ ಆಡಳಿತ ಕೈಗೊಂಡಿರುವ ಕ್ರಮಗಳು ಏನೇನೂ ಸಾಲದು. ಜತೆಗೆ ಆರೋಗ್ಯ ಸಂಪನ್ಮೂಲದ ಕೊರತೆ ಕೂಡ ಇದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ತಿಳಿಸಿದ್ದಾರೆ.
ಭಾರತದಲ್ಲಿ ಕೆಲವು ಪ್ರಕರಣಗಳು ವರದಿಯಾಗಿದ್ದವು. ಆದರೆ, 130 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಈ ಸೋಂಕು ವ್ಯಾಪಕವಾದರೆ, ನಿಯಂತ್ರಣಕ್ಕೆ ತರುವುದು ಕಷ್ಟ. ಹೀಗಾಗಿ ಭಾರತ ಈ ವೈರಸ್ ಬಗ್ಗೆ ಜಾಗ್ರತವಾಗಿರಬೇಕು.
| ಕಾಶಿ ಸೋಮಯಾಜಲು ವಿಶ್ವನಾಥ್ ಹಾರ್ವರ್ಡ್ ವಿವಿಯ ಟಿಎಚ್ ಚಾನ್ ಸಾರ್ವಜನಿಕ ಆರೋಗ್ಯ ಶಾಲೆಯ ಪ್ರಾಧ್ಯಾಪಕ
ಇರಾನ್ಗೆ ವಿಮಾನ ಹಾರಾಟ ಬಂದ್
ಕರೊನಾ ವೈರಸ್ ವ್ಯಾಪಕವಾಗುತ್ತಿರುವ ಕಾರಣ ಇರಾನ್ಗೆ ಹೋಗುವ ಎಲ್ಲ ವಿಮಾನಗಳನ್ನು ಭಾರತ ರದ್ದು ಮಾಡಿದೆ. ಈ ಕುರಿತು ವಿಮಾಯಾನ ಮಹಾನಿರ್ದೇಶನಾಲಯ ಆದೇಶ ಹೊರಡಿಸಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾದ ಜನರಿಗೆ ಭಾರತಕ್ಕೆ ಬಂದ ನಂತರ ವಿತರಣೆ ಮಾಡಲಾಗುತ್ತಿದ್ದ (ಆನ್ ಆರೈವಲ್) ವೀಸಾವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಇರಾನ್ ಉಪಾಧ್ಯಕ್ಷೆಗೂ ಕರೊನಾ ಸೋಂಕು
ಮಾರಣಾಂತಿಕ ಕರೊನಾ ಸೋಂಕು ಇರಾನ್ನ ಏಳು ಉಪಾಧ್ಯಕ್ಷರ ಪೈಕಿ ಒಬ್ಬರಿಗೆ ಮತ್ತು ರಾಷ್ಟ್ರೀಯ ಭದ್ರತಾ ಮುಖ್ಯಸ್ಥರಿಗೆ ತಗುಲಿದೆ. ಈ ರಾಷ್ಟ್ರದಲ್ಲಿ 26 ಜನರು ವೈರಸ್ಗೆ ಬಲಿ ಆಗಿದ್ದಾರೆ. ಉಪಾಧ್ಯಕ್ಷೆ ಮಸೌಮೆಹ್ ಎಬ್ತೆಕರ್ ಮತ್ತು ರಾಷ್ಟ್ರೀಯ ಭದ್ರತೆಯ ಮುಖ್ಯಸ್ಥ ಹಾಗೂ ವಿದೇಶಾಂಗ ವ್ಯವಹಾರದ ಸಮಿತಿ ಅಧ್ಯಕ್ಷ ಮೊಜ್ತಾಬಾ ಜೊಲ್ನೋರ್ ಅವರ ರಕ್ತದ ಪರೀಕ್ಷೆಯು ಪಾಸಿಟಿವ್ ತೋರಿಸಿದೆ. ಇರಾನ್ ಆರೋಗ್ಯ ಉಪಸಚಿವ ಹರಿರ್ಚಿ ರಕ್ತ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿತ್ತು. ಗುರುವಾರ 106 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಕ್ಯೆ 245ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಕಿಯಾನೌಶ್ ಜಹಾನ್ಪೌರ್ ತಿಳಿಸಿದ್ದಾರೆ.
ರಕ್ಷಣೆಗೆ ಮನವಿ
ಇರಾನ್ನಲ್ಲಿ ಸಿಲುಕಿಕೊಂಡಿ ರುವ ಭಾರತದ 340 ಮೀನುಗಾರರನ್ನು ರಕ್ಷಿಸುವಂತೆ ಗುಜರಾತ್ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಕರೊನಾ ವೈರಸ್ ಕಾರಣ ಸ್ಥಳೀಯ ಆಡಳಿತ ವಿಮಾನ ನಿಲ್ದಾಣವನ್ನು ಮುಚ್ಚಿದೆ ಮತ್ತು ಜನಸಂಚಾರವನ್ನು ನಿರ್ಬಂಧಿಸಿದೆ. ಇದರಿಂದ ಭಾರತದ ಮೀನುಗಾರರು ಬಂದರಿನಲ್ಲೇ ಸಿಲುಕಿದ್ದಾರೆ. ಅವರನ್ನು ರಕ್ಷಿಸುವಂತೆ ಗುಜರಾತ್ನ ಸಚಿವ ರಮಣ್ ಪಾಟ್ಕರ್ ವಿದೇಶಾಂಗ ಸಚಿವ ಎಸ್.ಜೈಶಂಕರ್ಗೆ ಪತ್ರ ಬರೆದಿದ್ದಾರೆ.
2 ಸಾವಿರ ಮಂದಿಗೆ ಸೋಂಕು
ದಕ್ಷಿಣ ಕೊರಿಯಾದಲ್ಲಿ ಶುಕ್ರವಾರ ಹೊಸದಾಗಿ 256 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆ 2,022ಕ್ಕೆ ಏರಿಕೆಯಾಗಿದೆ. ಚೀನಾ ನಂತರ ಅತಿ ಹೆಚ್ಚು ವೈರಸ್ ಪ್ರಕರಣ ಇಲ್ಲಿ ದಾಖಲಾಗಿದೆ. ಈ ಮಧ್ಯೆ, ಚೀನಾದಲ್ಲಿ ಸಾವಿನ ಸಂಖ್ಯೆ 2,788ಕ್ಕೆ ಏರಿದ್ದು, ಸೋಂಕು ಪೀಡಿತರ ಸಂಖ್ಯೆ 80 ಸಾವಿರಕ್ಕೂ ಅಧಿಕವಾಗಿದೆ. ಕರೊನಾ ಶಂಕೆ ಮೇಲೆ ಜರ್ಮನಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಥಾಯ್ಲೆಂಡ್ನಲ್ಲಿ ಮತ್ತೊಂದು ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 41ಕ್ಕೆ ಏರಿದೆ.