

ಬೆಂಗಳೂರು: ಅಕ್ಟೋಬರ್ ತಿಂಗಳಿನಿಂದ ಬೆಂಗಳೂರು ಮತ್ತು ಅಮೆರಿಕ ನಡುವೆ ನಾನ್ಸ್ಟಾಪ್ ವಿಮಾನವೊಂದು ಹಾರಾಟ ನಡೆಸಲಿದೆ. ಅಮೆರಿಕದ ಟಾಪ್ 3ನೇ ಸ್ಥಾನದಲ್ಲಿರುವ ಅಮೆರಿಕ ಏರ್ಲೈನ್ ಸಂಸ್ಥೆಯು ಬೆಂಗಳೂರಿನೊಂದಿಗೆ ವಿಮಾನ ಸಂಪರ್ಕ ಮಾಡಿಕೊಳ್ಳಲಿದೆ.
285 ಸೀಟುಗಳಿರುವ ಅಮೆರಿಕ ಏರ್ಲೈನ್ನ ಬೋಯಿಂಗ್ 787-9 ವಿಮಾನವು ಅಕ್ಟೋಬರ್ ತಿಂಗಳಿನಿಂದ ಪ್ರತಿದಿನ ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದೆ. ಭಾರತದಿಂದ ಅಮೆರಿಕಕ್ಕೆ ತೆರಳಲಿರುವ ಮೊದಲ ನಾನ್ ಸ್ಟಾಪ್ ವಿಮಾನ ಎನ್ನುವ ಕೀರ್ತಿ ಈ ವಿಮಾನಕ್ಕೆ ಸಿಗಲಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನವು ಸಿಯಾಟಲ್ ಟೊಕೊಮಾ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಿದೆ. ಈ ವಿಮಾನದಿಂದಾಗಿ ಅಮೆರಿಕದ ಸಿಯಾಟಲ್, ಸ್ಯಾನ್ ಫ್ರಾನ್ಸಿಸ್ಕೊ, ಸಿಲಿಕಾನ್ ವ್ಯಾಲಿ, ಡೆನ್ವರ್ ಸೇರಿ ಅನೇಕ ಸ್ಥಳಗಳಿಗೆ ತೆರಳಲು ಅನುಕೂಲವಾಗಲಿದೆ.
285 ಸೀಟುಗಳ ಈ ವಿಮಾನದಲ್ಲಿ 30 ಸೀಟುಗಳು ಬಿಸಿನೆಸ್ ಸೀಟುಗಳಾಗಿದ್ದು, 21 ಪ್ರೀಮಿಯಂ ಎಕಾನಮಿ, 36 ಮೈನ್ ಕ್ಯಾಬಿನ್ ಎಕ್ಸ್ಟ್ರಾ ಮತ್ತು 198 ಸೀಟುಗಳು ಮೈನ್ ಕ್ಯಾಬಿನ್ ಸೀಟುಗಳಾಗಿರಲಿವೆ. ಇದು ಅಮೆರಿಕ ಏರ್ಲೈನ್ ನಡೆಸುವ ಎರಡನೇ ಅತ್ಯಂತ ಉದ್ದದ ಹಾರಾಟವಾಗಿರಲಿದೆ. ಈಗಾಗಲೇ ಡಲ್ಲಾಸ್ ಹಾಂಗ್ ಕಾಂಗ್ಗೆ ವಿಮಾನ ಹಾರಾಟ ನಡೆಸಲಾಗುತ್ತಿದ್ದು ಅದು ಮೊದಲ ಸ್ಥಾನದಲ್ಲಿದೆ.
ಭಾರತದ ವಿಮಾನ ನಿಲ್ದಾಣಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2015ರಲ್ಲಿ ಚೆನ್ನೈನ ವಿಮಾನ ನಿಲ್ದಾಣವನ್ನು ಹಿಂದಿಕ್ಕುವ ಮೂಲಕ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. (ಏಜೆನ್ಸೀಸ್)