

| ಬೆಂಕಿ ಬಸಣ್ಣ ನ್ಯೂಯಾರ್ಕ್
ಐಡಾ ಚಂಡಮಾರುತ ಸೃಷ್ಟಿಸಿದ ಐತಿಹಾಸಿಕ ಹವಾಮಾನ ದುರಂತಕ್ಕೆ ಸಿಲುಕಿರುವ ಅಮೆರಿಕದ ನಾಲ್ಕು ನಗರಗಳು ಭಾರಿ ಮಳೆ, ಗಾಳಿಯಿಂದಾಗಿ ಅಸ್ತವ್ಯಸ್ತಗೊಂಡು ದ್ವೀಪದಂತಾಗಿವೆ. ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ ಹಾಗೂ ಮೆರಿಲ್ಯಾಂಡ್ಗಳ ಅರ್ಧಕ್ಕರ್ಧ ಪ್ರದೇಶಗಳು ಮುಳುಗಡೆಗೊಂಡಿದ್ದು, ಜನರು ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ಇದೆ. ಭಾರಿ ಮಳೆ, ಗಾಳಿಗೆ ರಸ್ತೆಗಳು ಹಾಳಾಗಿದ್ದು, ಮರಗಳು ಉರುಳಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ರಕ್ಷಣಾ ಕಾರ್ಯಾಚರಣೆ ಮಂದಗತಿಯಲ್ಲಿ ಸಾಗಿದೆ. ಅತ್ಯುತ್ತಮ ರಸ್ತೆ, ಒಳಚರಂಡಿ, ಯೋಜಿತ ಅಭಿವೃದ್ಧಿ ಕಾರ್ಯಗಳಿಂದ ಅಮೆರಿಕ ಸಮೃದ್ಧವಾಗಿರುವ ಹೊರತಾಗಿಯೂ ಪ್ರಕೃತಿ ಮುನಿದರೆ ಎಲ್ಲ ದೇಶಗಳು ಒಂದೇ ಎಂಬುದನ್ನು ಐಡಾ ಮನವರಿಕೆ ಮಾಡಿಕೊಟ್ಟಿದೆ. ಆಗಸ್ಟ್ನಲ್ಲಿ ಬೀಸಿದ್ದ ಹೆನ್ರಿ ಚಂಡಮಾರುತವನ್ನೂ ಮೀರಿಸಿ ಈ ಚಂಡಮಾರುತ ಚಂಡಿ ಎದ್ದಿರುವುದು ಜನರನ್ನು ಹೈರಾಣಾಗಿಸಿದೆ.
ಕಟ್ಟೆಯೊಡೆದ ನದಿ: ಇನ್ನು ಮನೆಗಳು, ರಸ್ತೆಗಳು, ಮೆಟ್ರೋ ನಿಲ್ದಾಣ, ವಾಣಿಜ್ಯ ಮಳಿಗೆಗಳು ಜಲಾವೃತವಾಗಿರುವ ಪರಿಣಾಮ ಕೋಟ್ಯಂತರ ರೂ. ಆಸ್ತಿಪಾಸ್ತಿ ನಷ್ಟವಾಗಿದೆ. ಹೆದ್ದಾರಿಗಳು ಬಿರುಕು ಬಿಟ್ಟಿರುವುದರಿಂದ ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿದೆ. ಮೆರಿಲ್ಯಾಂಡ್ನಲ್ಲಿ ರಾಕ್ಕ್ರೀಕ್ ನದಿ ಕಟ್ಟೆಯೊಡೆದು ವಸತಿ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಪ್ರವಾಹಕ್ಕೆ ಸಿಲುಕಿ 19 ವರ್ಷದ ಯುವಕ ಮೃತಪಟ್ಟಿದ್ದಾನೆ.
ಫ್ಲ್ಯಾಶ್ ಫ್ಲಡ್ ಎಮರ್ಜೆನ್ಸಿ: ನ್ಯಾಷನಲ್ ವೆದರ್ ಸರ್ವೀಸ್ ದಿಢೀರ್ ಪ್ರವಾಹ, ಐಡಾ ಚಂಡಮಾರುತಗಳಿಗೆ ಸಂಬಂಧಿಸಿದ ಮುನ್ನೆಚ್ಚರಿಕೆಯನ್ನು ಘೋಷಿಸಿತ್ತು. ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಅಥಾರಿಟಿ ನ್ಯೂಯಾರ್ಕ್ ನಗರದಲ್ಲಿ ಇದೇ ಮೊದಲ ಬಾರಿಗೆ ಫ್ಲ್ಯಾಶ್ ಫ್ಲಡ್ ಎಮರ್ಜೆನ್ಸಿ ಘೋಷಿಸಿತ್ತು. ಬುಧವಾರ ರಾತ್ರಿ 10 ಗಂಟೆಗೆ ದಿಢೀರ್ ಪ್ರವಾಹ ನ್ಯೂಯಾರ್ಕ್ಗೆ ಅಪ್ಪಳಿಸಿದ್ದು, ನಗರದ ಎಲ್ಲ ಸಬ್ವೇಗಳು ಬಂದ್ ಆಗಿವೆ. ಎಲ್ಲೆಡೆ ನೀರು ತುಂಬಿಕೊಂಡಿದ್ದು, ಅಪಾಯಕಾರಿ ಮಟ್ಟದಲ್ಲಿ ನೀರು ಪ್ರವಹಿಸುತ್ತಿದೆ. ಸದ್ಯ ಮಳೆ ಕಡಿಮೆಯಾಗಿದೆ.
ಕಗ್ಗತ್ತಲಲ್ಲಿ ನಗರಗಳು: ಚಂಡಮಾರುತ ಅಪ್ಪಳಿಸಿದ ನಗರಗಳಲ್ಲಿ ಕತ್ತಲಾವರಿಸಿದೆ. ಲಕ್ಷಾಂತರ ಜನರು ಸಂಪೂರ್ಣ ವಿದ್ಯುತ್ ಸ್ಥಗಿತದಿಂದಾಗಿ ಕತ್ತಲಿನಲ್ಲಿ ರಾತ್ರಿ ಕಳೆಯುವಂತಾಗಿದೆ. ಚಂಡಮಾರುತದಿಂದ ಸಾವಿರಾರು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ. ಚಂಡಮಾರುತದ ಪರಿಣಾಮ ಅನೇಕ ಸ್ಥಳಗಳಲ್ಲಿ ಸುಂಟರಗಾಳಿಗಳ (ಠಿಟ್ಟ್ಞಛಟ) ಹಾವಳಿ ಹೆಚ್ಚಾಗಿದೆ. ಪ್ರವಾಹದ ನೀರಿನಿಂದ ರಸ್ತೆಗಳು ನದಿಗಳಂತೆ ಗೋಚರಿಸುತ್ತಿದ್ದು ನೂರಾರು ವಾಹನಗಳು ಕೊಚ್ಚಿ ಹೋಗಿವೆ. ಪ್ರಾಣಹಾನಿ ಮತ್ತು ಮೂಲಸೌಕರ್ಯ ನಾಶ-ನಷ್ಟ ಇನ್ನಷ್ಟೆ ಅಂದಾಜಿಸಬೇಕಾಗಿದೆ.
ಹವಾಮಾನಕ್ಕೆ ಸಂಬಂಧಿಸಿದ ತುರ್ತಪರಿಸ್ಥಿತಿಯನ್ನು ನಗರ ಎದುರಿಸಿದೆ. ಪರಿಹಾರ ಕಾರ್ಯ, ರಕ್ಷಣಾ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಅಪಾಯದ ಸನ್ನಿವೇಶ ಇರುವ ಕಾರಣ ಯಾರೂ ರಸ್ತೆಗೆ ಇಳಿಯಬಾರದು. ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಿ.
| ಬಿಲ್ ಡೇ ಬ್ಲಸಿಯೋ ನ್ಯೂಯಾರ್ಕ್ ಸಿಟಿ ಮೇಯರ್
ಚಂಡಿ ಹಾದಿ: ಪಶ್ಚಿಮ ಕೆರೇಬಿಯನ್ ಸಮುದ್ರದಲ್ಲಿ ಐಡಾ ಚಂಡಮಾರುತ ಆ.26ರಂದು ರೂಪುಗೊಂಡಿತು. ಇದು ಗಂಟೆಗೆ 240-250 ಕಿ.ಮೀ ವೇಗದಲ್ಲಿ ಮುನ್ನುಗ್ಗುತ್ತ, ಆ.27ರಂದು ಪಶ್ಚಿಮ ಕ್ಯೂಬಾಕ್ಕೆ ಅಪ್ಪಳಿಸಿತ್ತು. ಬಳಿಕ ಅಮೆರಿಕದ ಲೂಸಿಯಾನ, ಮಿಸಿಸಿಪ್ಪಿ, ಅಲಬಾಮಾ, ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ, ನ್ಯೂಯಾರ್ಕ್, ನ್ಯೂ ಇಂಗ್ಲೆಂಡ್, ಕನೆಕ್ಟಿಕಟ್ ಹೀಗೆ ಪೂರ್ವ ಕರಾವಳಿಯ ಅನೇಕ ರಾಜ್ಯಗಳಲ್ಲಿ ಭೀಕರ ಮಳೆಯನ್ನು ಮತ್ತು ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ಲೂಸಿಯಾನದಲ್ಲಿ ಚಂಡಮಾರುತದಿಂದಾಗಿ ಆಗಿರುವ ನಷ್ಟವನ್ನು ಪ್ರಾಥಮಿಕ ಲೆಕ್ಕಾಚಾರ ಪ್ರಕಾರ 1500 ಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಕತ್ರಿಕಾ ಚಂಡಮಾರುತ ಲೂಸಿಯಾನದಲ್ಲಿ 16 ವರ್ಷ ಹಿಂದೆ ಆಗಸ್ಟ್ 29ರಂದೇ ಅಪ್ಪಳಿಸಿತ್ತು.