

Donald Trump: ಇಸ್ರೇಲ್- ಇರಾನ್ ನಡುವೆ ಆರು ದಿನಗಳಿಂದ ಸಂಘರ್ಷ ಭಾರೀ ಉಲ್ಬಣಗೊಳ್ಳುತ್ತಿದ್ದು, ದಾಳಿಯಿಂದಾಗಿ ಇಲ್ಲಿಯವರೆಗೆ 400 ರಿಂದ 600 ಜನರು ಮೃತಪಟ್ಟಿದ್ದಾರೆ ಎಂದು ಇರಾನ್ ಹೇಳಿಕೊಂಡಿದೆ. ಇದರ ನಡುವೆ ಅಮೆರಿಕಾ ಇರಾನ್ ಮೇಲೆ ದಾಳಿ ಮಾಡುತ್ತದೆಯೇ ಎಂಬುಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಶ್ರ ಉತ್ತರ ನೀಡಿದ್ದಾರೆ.
ಶ್ವೇತಭವನದ ಮುಂದೆ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್, ''ಇರಾನ್ ಮೇಲೆ ದಾಳಿ ಮಾಡಬಹುದು ಅಥವಾ ಮಾಡದೇ ಇರಬಹುದು. ಆದ್ರೆ, ನಾನು ಏನು ಮಾಡುತ್ತೇನೆ ಎಂದು ಯಾರಿಗೂ ತಿಳಿಯದು''ಎಂದು ಮಂದಹಾಸದಿಂದ ಹೇಳಿದ್ದಾರೆ.
ಇರಾನ್ ಮಾತುಕತೆಗೆ ಮುಂದಾಗಿದೆ. ಸದ್ಯಕ್ಕೆ ಇರಾನ್ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದೆ. ಅವರು ಮಾತುಕತೆ ನಡೆಸಲು ಬಯಸಿದ್ದಾರೆ. ನಾನು ಹೇಳಿದೆ ಅವರಿಗೆ ಕಳೆದ 2 ವಾರಗಳಿಂದ ಏಕೆ ನೀವು ಮಾತುಕತೆಗೆ ಮುಂದಾಗಲಿಲ್ಲ? ಎಂದು ಕೇಳಿದೆ.ಅವರು ಅದಕ್ಕೆ ಏನು ಉತ್ತರವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಇಸ್ರೇಲ್ ಟೆಹ್ರಾನ್ ಮೇಲೆ ವಾಯು ಪ್ರಾಬಲ್ಯ ಸಾಧಿಸಿದ್ದು ಮತ್ತು ಇರಾನಿನ ಪರಮಾಣು ಮತ್ತು ಮಿಲಿಟರಿ ಮೂಲಸೌಕರ್ಯದ ಮೇಲೆ ಹಲವಾರು ದಾಳಿಗಳನ್ನು ನಡೆಸುವುದರೊಂದಿಗೆ, ಈ ಪ್ರದೇಶದಲ್ಲಿ ಸುಮಾರು ಒಂದು ವಾರದಿಂದ ಸಂಘರ್ಷ ಹೆಚ್ಚುತ್ತಿರುವ ನಂತರ ಈ ಹೇಳಿಕೆಗಳು ಬಂದಿವೆ. ಅಲ್ಲದೆ, ನಮ್ಮ ಮೇಲೆ ದಾಳಿ ಮಾಡುವ ಮೂಲಕ ಇಸ್ರೇಲ್ ಅತಿ ದೊಡ್ಡ ತಪ್ಪು ಮಾಡಿದೆ. ಈ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎಂದು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್)