ಅಮೆರಿಕ ಇನ್ನೂ ಆತಂಕ, ಕತಾರ್ ಚೇತರಿಕೆ

Corona 16 June 20
Published on

ಭಾರತದಲ್ಲಿ ಕರೊನಾ ತೀವ್ರಘಟ್ಟದತ್ತ ಮುಖ ಮಾಡಿದ್ದರೆ ಅತ್ತ ಅಮೆರಿಕದಲ್ಲೂ ಆತಂಕದ ಪರಿಸ್ಥಿತಿ ಇದೆ. ನ್ಯೂಯಾರ್ಕ್, ನ್ಯೂಜೆರ್ಸಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೆ ಟೆಕ್ಸಾಸ್ ಸೇರಿ ಹಲವೆಡೆ ಸೋಂಕು ಹೆಚ್ಚುತ್ತಿದೆ. ಇನ್ನು ಮಧ್ಯಪ್ರಾಚ್ಯದ ಕತಾರ್​ನಲ್ಲಿ ಮಹಾಮಾರಿ ಕೊಂಚ ನಿಯಂತ್ರಣಕ್ಕೆ ಬಂದಿದೆ. ಈ ಎರಡೂ ದೇಶಗಳಲ್ಲಿ ಬದುಕು ಕಂಡುಕೊಂಡಿರುವ ಕನ್ನಡಿಗರಿಬ್ಬರು ಆಯಾ ದೇಶದ ಚಿತ್ರಣವನ್ನು ವಿಜಯವಾಣಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

| ಬೆಂಕಿ ಬಸಣ್ಣ ಅಲ್ಬನಿ

ಜೂ.14ರ ವರದಿ ಪ್ರಕಾರ ಅಮೆರಿಕದ ಸೋಂಕಿತರ ಸಂಖ್ಯೆ 21 ಲಕ್ಷಕ್ಕೇರಿದ್ದರೆ ಅದೇ ಅವಧಿಯಲ್ಲಿ 1.17 ಲಕ್ಷ ಸಾವುಗಳು ಸಂಭವಿಸಿವೆ.

ನ್ಯೂಯಾರ್ಕ್​ನಲ್ಲಿ 4 ಲಕ್ಷ ಸೋಂಕಿತರು ಹಾಗೂ 31 ಸಾವಿರ ಸಾವು, ನ್ಯೂಜೆರ್ಸಿಯಲ್ಲಿ 1.7 ಲಕ್ಷ ಸೋಂಕಿತರು ಹಾಗೂ 12,700 ಸಾವು. ಈ ಆಘಾತದ ನಡುವೆಯೂ ಕರೊನಾ ಹಾಟ್​ಸ್ಪಾಟ್ ಆಗಿದ್ದ ನ್ಯೂಯಾರ್ಕ್, ನ್ಯೂಜೆರ್ಸಿಯಲ್ಲಿ ವಾರದಿಂದ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಇಳಿದಿದೆ. ಆದರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕ್ಯಾಲಿಫೋರ್ನಿಯಾ, ದಕ್ಷಿಣದಲ್ಲಿರುವ ಟೆಕ್ಸಾಸ್ ಮತ್ತು ಫ್ಲಾರಿಡಾ ರಾಜ್ಯಗಳಲ್ಲಿ ಸೋಂಕು ದಿಢೀರ್ ಏರಿಕೆ ಕಂಡಿದೆ. ಹಂತಹಂತವಾಗಿ ಲಾಕ್​ಡೌನ್ ತೆರವು ಮಾಡಿರುವುದು ಹಾಗೂ ಉದ್ಯಮ ಚಟುವಟಿಕೆಗಳಿಗೆ ಅವಕಾಶ ನಿಡಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತದ ಅನೇಕ ಪ್ರದೇಶಗಳಂತೆ ಇಲ್ಲೂ ಅನೇಕ ರಾಜ್ಯಗಳಲ್ಲಿ ಸಾಮಾಜಿಕ ಅಂತರವನ್ನು ಸೂಕ್ತವಾಗಿ ಪಾಲಿಸುತ್ತಿಲ್ಲ. ಉತ್ತರ ಅಮೆರಿಕದಲ್ಲಿ ಆರು ತಿಂಗಳು ಹಿಮಪಾತದಿಂದಾಗಿ ಭಯಂಕರ ಚಳಿ ಇರುತ್ತದೆ. ಹಾಗಾಗಿ ಬೇಸಿಗೆ ಬಂದಿರುವುದರಿಂದ ಲಾಕ್​ಡೌನ್ ಲೆಕ್ಕಿಸದೆ ಮನೆಯಿಂದ ಹೊರಬರುತ್ತಿದ್ದಾರೆ. ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿರುವುದರಿಂದ ರಜೆ ಪ್ರವಾಸಕ್ಕೆ ಕರೆದೊಯ್ಯುವಂತೆ ಮಕ್ಕಳು ಪಾಲಕರನ್ನು ಒತ್ತಾಯಿಸುತ್ತಿದ್ದಾರೆ.

ಕರೊನಾದಿಂದ ಮೃತಪಟ್ಟಿರುವ ಹೆಚ್ಚು ಜನರು ಬಡತನದಿಂದ ಬಳಲುತ್ತಿರುವ, ಶೋಷಿತ, ಆಫ್ರಿಕನ್-ಅಮೆರಿನ್ ಕಪು್ಪ ವರ್ಣೀಯರೆಂಬುದು ವಿಷಾದನೀಯ. ಮೂರು ವಾರಗಳ ಹಿಂದೆ ಪೊಲೀಸ್ ಅಧಿಕಾರಿಯೊಬ್ಬ ಕಪು್ಪ ವರ್ಣೀಯನಾದ ಜಾರ್ಜ್ ಫ್ಲಾಯ್ಡ್​ ಕುತ್ತಿಗೆ ಮೇಲೆ 9 ನಿಮಿಷ ಮಂಡಿಯೂರಿ ಕೊಂದಿದ್ದ. ಪೊಲೀಸರ ನಡೆ ವಿರುದ್ಧ ಅಮೆರಿಕದಾದ್ಯಂತ ನಡೆಯುತ್ತಿರುವ ‘ಬ್ಲ್ಯಾಕ್​ ಲೈವ್ಸ್ ಮ್ಯಾಟರ್(ಬಿಎಲ್​ಎಂ)’ ಪ್ರತಿಭಟನೆಗಳಲ್ಲಿ ಜನರು ಗುಂಪಾಗಿ ಸೇರುವುದು ಹೆಚ್ಚಾಗಿದೆ. ಇದರಿಂದಾಗಿ ಕರೊನಾ ಕುರಿತ ಸುದ್ದಿಗಳು ಎರಡನೇ ಸ್ಥಾನ ಪಡೆದಿವೆ. ಪೊಲೀಸ್ ದಾಖಲೆಗಳನ್ನು ಬಹಿರಂಗಪಡಿಸುವ, ಪೊಲೀಸರನ್ನು ಹೊಣೆಗಾರರನ್ನಾಗಿಸುವಂತಹ, ಪ್ರಶ್ನಿಸುವ ಸೇರಿ ಅನೇಕ ಶಾಸನಾತ್ಮಕ ಬದಲಾವಣೆಗಳನ್ನು ಬಹುತೇಕ ರಾಜ್ಯಗಳು ಹಾಗೂ ಇಲಾಖೆಗಳಲ್ಲಿ ತರಲಾಗಿದೆ. ಇದನ್ನೂ ಓದಿ:ತಮಿಳುನಾಡಿನಲ್ಲಿ ನಾಲ್ಕು ಜಿಲ್ಲೆಗಳು ಸಂಪೂರ್ಣ ಲಾಕ್​ಡೌನ್​: ಮುಖ್ಯಮಂತ್ರಿ ಘೋಷಣೆ

ನ್ಯೂಯಾರ್ಕ್​ನಲ್ಲಿ ಸಾಫ್ಟ್​ವೇರ್ ಇಂಜಿನಿಯರ್​ಗಳಿಗೆ ಜು.15ರವರೆಗೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮುಂದುವರಿಸಲಾಗಿದೆ. ಇದೇ ನವೆಂಬರ್​ನಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಬೇಕಿದೆ. ಚುನಾವಣೆ ರ್ಯಾಲಿಗಳನ್ನು ನಡೆಸುವುದು ಹೇಗೆಂಬ ತೊಳಲಾಟದಲ್ಲಿ ಎರಡೂ ಪಕ್ಷಗಳಿವೆ.

ಎರಡನೇ ಅಲೆಯ ವೈಸರ್ ದಾಳಿ ಕಂಡುಬಂದರೆ ಏನು ಎಂಬ ಆತಂಕ ಎಲ್ಲರಲ್ಲಿದೆ. ಲಸಿಕೆಗಳ ಸಂಶೋಧನೆ ಆಗಿದ್ದರೂ, ಮಾರುಕಟ್ಟೆಗೆ ಬರಲು ಐದಾರು ತಿಂಗಳು ತಗಲುತ್ತದೆ. ರೆಸ್ಟೋರೆಂಟ್ ಕಟ್ಟಡದ ಹೊರಭಾಗದಲ್ಲಿ ಮಾತ್ರ ಆಹಾರ ಸೇವನೆಗೆ ಅವಕಾಶವಿದ್ದು, ಒಳಗೆ ಸೇವಿಸುವ ಅವಕಾಶವಿಲ್ಲ. ಈ ಸಂದರ್ಭದಲ್ಲಿ ಅಮೆರಿಕದಲ್ಲಿನ ಕನ್ನಡ ಸಂಘಗಳ ವರ್ಚುವಲ್ ಕಾರ್ಯಕ್ರಮಗಳು ಹೆಚ್ಚಾಗಿವೆ. ನಾವು ವಿಶ್ವ ಕನ್ನಡಿಗರು(ನಾವಿಕ) ಸಂಸ್ಥೆಯಿಂದ ಕನ್ನಡ ಕ್ರಿಕೆಟ್ ರತ್ನಗಳೊಂದಿಗೆ ಸಂವಾದ ಮತ್ತು ಇಂಚರ ಮೂರ್ತಿ ಅವರಿಂದ ಮಧುರ ಗೀತೆಗಳ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.  ಇದನ್ನೂ ಓದಿ: ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಅಪಹರಿಸಿದ ಪಾಕಿಸ್ತಾನ; ಸೇಡಿನ ಕ್ರಮ ಶಂಕೆ

ಕತಾರ್​​ನಲ್ಲಿ ಹೇಗಿದೆ ಪರಿಸ್ಥಿತಿ?

|ಸುಬ್ರಹ್ಮಣ್ಯ ಹೆಬ್ಬಾಗಿಲು

ಕತಾರ್​ನಲ್ಲಿ ಕರೊನಾ ಸೋಂಕಿತರ ಸಂಖ್ಯೆ 78 ಸಾವಿರ ದಾಟಿದೆ. ಪ್ರತಿನಿತ್ಯ 1,200-1,300 ಪ್ರಕರಣ ವರದಿಯಾಗುತ್ತಿವೆ. ಆದರೆ ಅಷ್ಟೇ ಸಂಖ್ಯೆಯಲ್ಲಿ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ. ಈವರೆಗೆ 70 ಜನರು ಮೃತಪಟ್ಟಿ ದ್ದಾರೆ. ಕತಾರ್ ಸಣ್ಣ ದೇಶವಾದರೂ ಸರ್ಕಾರ ವ್ಯವಸ್ಥಿತವಾಗಿ ವೈದ್ಯಕೀಯ ಸೌಲಭ್ಯ ನಿರ್ವಹಿಸುತ್ತಿರುವ ಕಾರಣ ಹಾಗೂ ಮುಂಜಾಗ್ರತೆ ಹೆಚ್ಚಿನ ಅನಾಹುತ ತಪ್ಪಿಸಿದೆ. ಇಲ್ಲಿ ಲಾಕ್​ಡೌನ್ ಆಗೇ ಇಲ್ಲ. ಆದರೆ ಶಾಪಿಂಗ್ ಮಾಲ್​ಗಳು, ಕ್ಷೌರದಂಗಡಿ, ಪಾರ್ಕ್​ಗಳು, ಜನಸಂದಣಿ ಕಾರ್ಯಕ್ರಮಗಳು ಬಂದ್ ಆಗಿವೆ. ಹೋಟೆಲ್​ಗಳಲ್ಲಿ ಪಾರ್ಸೆಲ್​ಗಷ್ಟೇ ಅವಕಾಶ ನೀಡಲಾಗಿದೆ. ಮಾಸ್ಕ್ ಬಳಸುವುದು ಹಾಗೂ ಸಾಮಾಜಿಕ ಅಂತರದ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಸರ್ಕಾರಿ ಉದ್ಯೋಗ ಸೇರಿ ದಂತೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ.  ಇದನ್ನೂ ಓದಿ: ‘ಬಾಲಿವುಡ್​​ನಲ್ಲಿನ ಕ್ರೂರತನವೇ ಸುಶಾಂತ್​ ಸಾವಿಗೆ ಕಾರಣ’; ನಟನ ಸಹೋದ್ಯೋಗಿಗಳ ನೇರ ಮಾತು ಇದು…

ಇದರಿಂದಾಗಿ ಪ್ರಮುಖವಾಗಿ ಕರ್ನಾಟಕದಿಂದ ಬಂದವರ ಪೈಕಿ ಟೈಲರ್, ಕಟ್ಟಡ ನಿರ್ವಣ, ಕ್ಷೌರ, ಜಿಮ್ ತರಬೇತುದಾರ, ಟ್ಯಾಕ್ಸಿ ಚಾಲಕರಂತಹ ನೌಕರಿಯಲ್ಲಿದ್ದವರಿಗೆ ಹೆಚ್ಚಿನ ತೊಂದರೆ ಆಗಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅವಿವಾಹಿತರಿದ್ದು ಅವರಿಗೆಲ್ಲ ಭಾರತದಲ್ಲಿರುವ ಕುಟುಂಬದ ಕುರಿತು ಚಿಂತೆ ಕಾಡುತ್ತಿದೆ. ಕೆಲಸ ಕಳೆದುಕೊಂಡವರ ಜತೆಗೆ ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರು ಇದ್ದಾರೆ. ಭಾರತಕ್ಕೆ ತೆರಳುವುದಾಗಿ ಸುಮಾರು 3 ಸಾವಿರ ಜನರು ನೋಂದಣಿ ಮಾಡಿಸಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಆಹಾರ, ಔಷಧ ಸರಬರಾಜು ಮಾಡುವ ಜತೆಗೆ ಮಾನಸಿಕ ಒತ್ತಡದಲ್ಲಿರುವವರಿಗೆ ಆಪ್ತ ಸಮಾಲೋಚನೆ ಮಾಡುವ ಕಾರ್ಯವನ್ನೂ ಭಾರತೀಯ ಸಮುದಾಯ ಸಂಘಟನೆಗಳಿಂದ ಮಾಡಲಾಗುತ್ತಿದೆ. ಪ್ರತಿನಿತ್ಯ 1800-1900 ಪ್ರಕರಣಗಳು ಬಂದ ಸಮಯದಲ್ಲಿ ಸ್ವಲ್ಪ ಆತಂಕ ಮನೆಮಾಡಿತ್ತು. ಆದರೆ ಈಗ ಜಾಗೃತಿಯಿಂದ ಜನರು ನಡೆದುಕೊಳ್ಳುತ್ತಿದ್ದಾರೆ, ಆರೋಗ್ಯದ ಕುರಿತು ಕಾಳಜಿ ವಹಿಸುವುದರಿಂದ ಕರೊನಾ ದೂರಾಗಿಸಬಹುದು ಎಂಬುದು ತಿಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net