

ಅಮೆರಿಕದಲ್ಲಿ ಹಿಂದೆಂದೂ ಕೇಳರಿಯದಷ್ಟು ಭೀಕರ ಚಳಿಗಾಳಿ, ಹಿಮಪಾತದಿಂದಾಗಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಟೆಕ್ಸಾಸ್ ರಾಜ್ಯವೊಂದರಲ್ಲೇ 30 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹಿಮ ತುಂಬಿದ ರಸ್ತೆಗಳಿಂದಾಗಿ ಸರಣಿ ರಸ್ತೆ ಅಪಘಾತಗಳು ಸಂಭವಿಸಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಟೆಕ್ಸಾಸ್, ಲೂಸಿಯಾನ, ಕೆಂಟಕಿ, ವೆಸ್ಟ್ ವರ್ಜಿನಿಯಾ ಹೀಗೆ ಅನೇಕ ರಾಜ್ಯಗಳು ಹಿಮ ಚಂಡಮಾರುತದಿಂದ ತತ್ತರಿಸಿವೆ. ಅಮೆರಿಕದ ಶೇಕಡ 73 ಪ್ರದೇಶವು ಹಿಮದಿಂದ ಆವೃತವಾಗಿದೆ.
ಉತ್ತರ ಅಮೆರಿಕ ಮತ್ತು ಪೂರ್ವ ಕರಾವಳಿಯಲ್ಲಿ ಹಿಮಪಾತವಾಗುವುದು ಸಾಮಾನ್ಯ. ಆದರೆ ಹೆಚ್ಚಿನ ಉಷ್ಣಾಂಶ ಇರಬೇಕಾದ ದಕ್ಷಿಣದ ಟೆಕ್ಸಾಸ್ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಅನಿರೀಕ್ಷಿತವಾಗಿ ಶೀತ ಚಂಡಮಾರುತದಿಂದ ಬಹಳಷ್ಟು ಹಿಮಪಾತವಾಗಿದೆ. ಅಲ್ಲಿಯ ಬಹಳಷ್ಟು ಪಾವರ್ಗ್ರಿಡ್ಗಳು ವಿಫಲವಾಗಿವೆ. ಚಳಿಯಿಂದ ನೀರಿನ ಪೈಪ್ಗಳು ಒಡೆದುಹೋಗಿವೆ. ಕಳೆದ ಮೂರು ದಿವಸಗಳಿಂದ, ಟೆಕ್ಸಾಸ್ ಜನರು ಕತ್ತಲೆಯಿಂದ, ಕೊರೆಯುವ ಚಳಿಯಲ್ಲಿ ನರಳಬೇಕಾದ ಪರಿಸ್ಥಿತಿ ಬಂದಿದೆ.
ಈ ಮಾರಣಾಂತಿಕವಾದ ತೀವ್ರ ಶೀತದ ಆರ್ಕೆಟಿಕ್ (Arctic) ಹವಾಮಾನದಿಂದಾಗಿ ಟೆಕ್ಸಾಸ್, ಕೆಂಟಕಿ, ಕಾನ್ಸಾಸ್, ಟೆನ್ನೆಸ್ಸೀ ಮಿಸ್ಸೂರಿ ಮತ್ತು ಒಕ್ಲೊಹೋಮ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೊಷಿಸಲಾಗಿದೆ. ಅಧ್ಯಕ್ಷ ಜೋ ಬೈಡೆನ್ ಈ ಪ್ರದೇಶಗಳಿಗೆ ಜನರೇಟರ್, ಆಹಾರ, ಔಷಧ, ನೀರು ಮತ್ತು ಹೊದಿಕೆಗಳನ್ನು ತುರ್ತಾಗಿ ರವಾನಿಸುತ್ತಿದ್ದಾರೆ.
ಹೊಡೆತಗಳ ಮೇಲೆ ಹೊಡೆತ: ಪ್ರಾಕೃತಿಕ ವಿಕೋಪಗಳು ಒಂದರ ಮೇಲೊಂದರಂತೆ ಕಾಡುತ್ತಿವೆ. ಕಳೆದ ಒಂದು ವರ್ಷದಲ್ಲಿ ಅಮೆರಿಕದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಕರೊನಾದಿಂದ ಪ್ರಾಣ ತೆತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚಿನಿಂದಾಗಿ ಲಕ್ಷಾಂತರ ಎಕರೆ ಕಾಡು ಮತ್ತು ಸಾವಿರಾರು ಮನೆಗಳು ಸುಟ್ಟುಹೋದವು. ಈಗ ಹಿಮಪಾತ ಮತ್ತು ಚಳಿಗಾಳಿಯಿಂದ ತತ್ತರಿಸಿಹೋಗಿದ್ದಾರೆ.
ಮುಗಿಯದ ಬವಣೆ: ಇದು ಇಲ್ಲಿಗೆ ಮುಗಿಯುವ ಲಕ್ಷಣಗಳು ಇಲ್ಲ. ಏಕೆಂದರೆ ಮುಂದಿನ ವಾರ ಮತ್ತೊಂದು ಹಿಮಮಾರುತ ದಕ್ಷಿಣದಿಂದ ಪೂರ್ವ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.
ಲಸಿಕೆ ವಿತರಣೆಗೆ ಕಂಟಕ: ನೂತನ ಅಧ್ಯಕ್ಷ ಜೋ ಬೈಡೆನ್ ಕರೊನಾ ಸೋಂಕಿನ ಪ್ರಸರಣ ನಿಯಂತ್ರಣ ಮಾಡಲೇಬೇಕೆಂದು ಪಣತೊಟ್ಟು, ‘ನಮ್ಮ ಮೊದಲ 100 ದಿನದ ಆಡಳಿತದಲ್ಲಿ 100 ಮಿಲಿಯನ್ ಜನರಿಗೆ ಕರೊನಾ ಲಸಿಕೆ ಹಾಕಲಾಗುವುದು’ ಎಂದು ಘೋಷಿಸಿ, ಅದಕ್ಕೆ ಪೂರಕ ಕಾರ್ಯಕ್ರಮ ಪ್ರಾರಂಭಿಸಿದರು. ಆದರೆ ಹಿಮಪಾತ ಮತ್ತು ಶೀತದಿಂದಾಗಿ ಈ ಕಾರ್ಯಕ್ರಮ ತೀವ್ರ ಹಿನ್ನಡೆ ಅನುಭವಿಸಿದೆ.